ಅನಾಥ ಶವವಾದ ಸಿನಿಮಾ ಬರಹಗಾರ ಡೇವಿಡ್‌

KannadaprabhaNewsNetwork |  
Published : Sep 02, 2025, 01:00 AM ISTUpdated : Sep 02, 2025, 11:21 AM IST
SS David

ಸಾರಾಂಶ

  ಖಡಕ್‌ ಡೈಲಾಗ್‌ಗಳ ಮೂಲಕ ಹೆಸರಾದ ಖ್ಯಾತ ಸಿನಿಮಾ ಬರಹಗಾರ, ನಿರ್ದೇಶಕ ಎಸ್‌.ಎಸ್‌.ಡೇವಿಡ್‌ (55 ವರ್ಷ) ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೆ ಸಾವಿನ ವೇಳೆ ಅವರ ಮೃತದೇಹವನ್ನು ಸ್ವೀಕರಿಸಲೂ ಕುಟುಂಬದವರಿಲ್ಲದೆ ಅನಾಥ ಶವವಾಗಿ ವಿಕ್ಟೋರಿಯಾ ಶವಾಗಾರದಲ್ಲಿ ಇಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

 ಬೆಂಗಳೂರು : ‘ಪೊಲೀಸ್‌ ಸ್ಟೋರಿ’, ‘ಅಗ್ನಿ ಐಪಿಎಸ್‌’, ‘ತಿರುಪತಿ’ ಮೊದಲಾದ ಸಿನಿಮಾಗಳ ಖಡಕ್‌ ಡೈಲಾಗ್‌ಗಳ ಮೂಲಕ ಹೆಸರಾದ ಖ್ಯಾತ ಸಿನಿಮಾ ಬರಹಗಾರ, ನಿರ್ದೇಶಕ ಎಸ್‌.ಎಸ್‌.ಡೇವಿಡ್‌ (55 ವರ್ಷ) ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೆ ಸಾವಿನ ವೇಳೆ ಅವರ ಮೃತದೇಹವನ್ನು ಸ್ವೀಕರಿಸಲೂ ಕುಟುಂಬದವರಿಲ್ಲದೆ ಅನಾಥ ಶವವಾಗಿ ವಿಕ್ಟೋರಿಯಾ ಶವಾಗಾರದಲ್ಲಿ ಇಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ಔಷಧ ತರಲೆಂದು ಮೆಡಿಕಲ್‌ ಶಾಪ್‌ಗೆ ಹೋಗಿದ್ದ ವೇಳೆ ಡೇವಿಡ್‌ ಅವರು ಹಠಾತ್ತನೆ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ಆ ಹೊತ್ತಿಗೆ ಆರ್‌.ಆರ್‌.ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರೂ ಮಾರ್ಗ ಮಧ್ಯೆಯೇ ಡೇವಿಡ್‌ ಕೊನೆಯುಸಿರೆಳೆದಿದ್ದರು.

ಬಳಿಕ ಪಾರ್ಥಿವ ಶರೀರ ಹಸ್ತಾಂತರಿಸುವ ಪ್ರಕ್ರಿಯೆಗೆ ಪೊಲೀಸರು ಪರದಾಡಬೇಕಾಗಿ ಬಂತು. ಏಕೆಂದರೆ ಡೇವಿಡ್‌ ಕೊನೆಯವರೆಗೂ ಅವಿವಾಹಿತರಾಗಿದ್ದರು. ಎರಡು ನಾಯಿ ಬಿಟ್ಟರೆ ಅವರಿಗೆ ತಮ್ಮವರೆನ್ನುವವರು ಯಾರೂ ಇರಲಿಲ್ಲ. ಉಡುಪಿ ಜಿಲ್ಲೆಯ ಕಾಪುವಿನ ಬಳಿ ಅವರ ಅಕ್ಕ ಇದ್ದರೂ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದು ಇಲ್ಲಿಗೆ ಬರುವ ಸ್ಥಿತಿಯಲ್ಲಿ ಇರಲಿಲ್ಲ.

ಶವ ಹಸ್ತಾಂತರಕ್ಕೆ ಕಾನೂನು ಪ್ರಕ್ರಿಯೆಗಳಿದ್ದು, ಅದನ್ನು ಕುಟುಂಬದವರು ಪೂರೈಸಿದ ಬಳಿಕವೇ ಪಾರ್ಥಿವ ಶರೀರ ಹಸ್ತಾಂತರಿಸುತ್ತಾರೆ. ಆದರೆ ಇವರ ವಿಚಾರದಲ್ಲಿ ಆ ಪ್ರಕ್ರಿಯೆ ಮಾಡುವವರೂ ಇಲ್ಲದೇ ಖ್ಯಾತ ಬರಹಗಾರ, ನಿರ್ದೇಶಕರ ಶವ ಅನಾಥವಾಗಿ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಇರಬೇಕಾಯ್ತು.

ಬಳಿಕ ಡೇವಿಡ್‌ ಅವರ ಅನಾರೋಗ್ಯ ಪೀಡಿತ ಅಕ್ಕ ಬೆಂಗಳೂರಿನಲ್ಲಿರುವ ಆಪ್ತ ಮನೋಜ್‌ ಎಂಬವರಿಗೆ ಅಂತಿಮ ಸಂಸ್ಕಾರದ ಸಂಪೂರ್ಣ ಹೊಣೆ ವಹಿಸಿದರು. ಅವರ ಮಾತಿನಂತೆ ಮನೋಜ್‌ ಅವರಿಗೆ ಶರೀರ ಹಸ್ತಾಂತರಿಸಿ ಬಳಿಕ ಅಂತ್ಯ ಸಂಸ್ಕಾರ ನಡೆದಿದೆ ಎನ್ನಲಾಗಿದೆ.

‘ಧೈರ್ಯ’, ‘ಹಾಯ್‌ ಬೆಂಗಳೂರು’ ಸಿನಿಮಾ ನಿರ್ದೇಶಿಸಿದ್ದ ಡೇವಿಡ್‌ ಅನೇಕ ಚಿತ್ರಗಳಲ್ಲಿ ಖಳನಟರಾಗಿಯೂ ಅಭಿನಯಿಸಿದ್ದರು.

ಡೇವಿಡ್‌ ಅವರ ಪರಿಸ್ಥಿತಿ ನೆನೆಸಿ  ಬೇಸರವಾಯಿತು: ಥ್ರಿಲ್ಲರ್‌ ಮಂಜು

ಡೇವಿಡ್‌ ಅವರೊಂದಿಗಿನ ಒಡನಾಟ ಸ್ಮರಿಸಿಕೊಂಡ ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು, ‘ನಾನು ಡೇವಿಡ್‌ ಅವರ ನಿರ್ದೇಶನದ ಚಿತ್ರಗಳಲ್ಲಿ ನಟಿಸಿದ್ದೆ. ಕ್ರಿಯಾಶೀಲ ವ್ಯಕ್ತಿಯಾಗಿದ್ದ ಅವರಿಗೆ ಇಂಥಾ ಸ್ಥಿತಿ ಬಂದಿದ್ದು ನೋಡಿ ಬಹಳ ಬೇಸರವಾಯಿತು. ಅವರ ತಾಯಿ ಬಹಳ ಹಿಂದೆಯೇ ತೀರಿಕೊಂಡಿದ್ದರು. ಮನೆಯಲ್ಲಿದ್ದ ಎರಡು ನಾಯಿಗಳನ್ನೇ ಅವರು ಮಕ್ಕಳಂತೆ ಪ್ರೀತಿಸುತ್ತಿದ್ದರು. ಅವರ ಶವ ಸ್ವೀಕರಿಸಲೂ ಯಾರೂ ಇಲ್ಲದಂತಾಗಿದ್ದು ಬೇಸರ ಮೂಡಿಸಿತು’ ಎಂದಿದ್ದಾರೆ.

PREV
Read more Articles on

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ