ಬಳ್ಳಾರಿ: ಯಾರೇ ಆಗಲಿ, ತಮ್ಮ ಸ್ವಧರ್ಮದ ಮೌಲ್ಯಗಳು ಮತ್ತು ತತ್ವಗಳನ್ನು ಅರಿತು ಅದರಲ್ಲಿಯೇ ದೃಢವಾಗಿ ನಿಲ್ಲಬೇಕು. ಬೇರೆ ಧರ್ಮಗಳಲ್ಲಿ ಏನೋ ವಿಶೇಷತೆ ಇದೆ ಎಂಬ ಅಜ್ಞಾನದಿಂದ ಧರ್ಮಾಂತರಗೊಳ್ಳುವ ಪ್ರವೃತ್ತಿ ಸರಿಯಲ್ಲ ಎಂದು ಗದಗ-ವಿಜಯಪುರದ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ತಿಳಿಸಿದರು.
ಧಾರ್ಮಿಕ ಕ್ಷೇತ್ರಗಳಲ್ಲಿಯೂ ಅಜ್ಞಾನ ವ್ಯಾಪಕವಾಗಿದೆ. ವಿವಿಧ ಆಮಿಷಗಳು ಹಾಗೂ ತಪ್ಪು ಮಾಹಿತಿಗಳ ಮೂಲಕ ಜನರನ್ನು ತಮ್ಮ ಧರ್ಮದತ್ತ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಬೆಳವಣಿಗೆಗಳನ್ನು ಧಾರ್ಮಿಕ ಅಜ್ಞಾನವೆಂದು ಪರಿಗಣಿಸಲಾಗುತ್ತದೆ. ಸಮಾಜದಲ್ಲಿ ಅಜ್ಞಾನಕ್ಕಿಂತಲೂ ಹೆಚ್ಚು ಅಪಾಯಕಾರಿಯಾದುದು ಅನ್ಯತಾ ಜ್ಞಾನ. ಒಂದು ವಿಷಯದ ಬಗ್ಗೆ ಸರಿಯಾಗಿ, ಖಚಿತವಾಗಿ ತಿಳಿವಳಿಕೆ ಇಲ್ಲದಿರುವುದನ್ನು ಅನ್ಯತಾಜ್ಞಾನ ಎಂದು ಕರೆಯಲಾಗುತ್ತದೆ. ನಿರ್ದಿಷ್ಟ ವಿಷಯವನ್ನು ತಪ್ಪಾಗಿ ಅರ್ಥೈಸಿಕೊಂಡು ಅದನ್ನೇ ಸತ್ಯವೆಂದು ನಂಬುವ ಅನ್ಯತಾ ಜ್ಞಾನವುಳ್ಳವರು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತಾರೆ. ಒಂದು ಸಮಸ್ಯೆಗೆ ಇರುವ ನಿಜವಾದ ಪರಿಹಾರವನ್ನು ಅರಿಯದೆ, ಬೇರೆ ಯಾವುದನ್ನೋ ಪರಿಹಾರವೆಂದು ಭಾವಿಸುತ್ತಾರೆ. ಸ್ವಧರ್ಮದಲ್ಲಿ ಇಲ್ಲದಿರುವುದು ಮತ್ತೊಂದು ಧರ್ಮದಲ್ಲಿದೆ ಎಂದುಕೊಳ್ಳುತ್ತಾರೆ. ಆಳವಾದ ಅಧ್ಯಯನ ಕೊರತೆಯಿಂದಾಗಿಯೇ ಅನೇಕರು ಹಿಂದೂ ಧರ್ಮವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಅನ್ಯತಾಜ್ಞಾನಕ್ಕೆ ಒಳಗಾಗುತ್ತಿದ್ದಾರೆ ಎಂದು ಸ್ವಾಮಿ ನಿರ್ಭಯಾನಂದ ಶ್ರೀಗಳು ತಿಳಿಸಿದರು.
ಜಗತ್ತಿಗೆ ಜ್ಞಾನದ ಬೆಳಕು ನೀಡುವ ಸಾಮರ್ಥ್ಯ ಭಾರತಕ್ಕಿದೆ:ಆಧ್ಯಾತ್ಮವು ಸತ್ಯದ ಬಗ್ಗೆ ಸಂಪೂರ್ಣ ಪರಿಚಯ ಮಾಡಿಕೊಡುವ ಸಾಧನ. ಅದೊಂದು ವಿಜ್ಞಾನವೂ ಹೌದು. ಇಡೀ ಜಗತ್ತಿಗೆ ಜ್ಞಾನದ ಬೆಳಕು ನೀಡುವ ಸಾಮರ್ಥ್ಯ ಭಾರತಕ್ಕೆ ಮಾತ್ರ ಇದೆ. ಭಾರತ ಆಧ್ಯಾತ್ಮಿಕ ಚಿಂತನೆಯ, ಸಾಧು-ಸಂತರ ದೇಶವಾಗಿದೆ. ಆಧ್ಯಾತ್ಮಿಕವಾಗಿ ಸಾಧನೆ ಮಾಡಬಯಸುವ ಸಾವಿರಾರು ಜನರು ಭಾರತಕ್ಕೆ ಬರುತ್ತಿದ್ದಾರೆ. ವಿಪರ್ಯಾಸ ಸಂಗತಿ ಎಂದರೆ ಭಾರತೀಯರು ಪಾಶ್ಚಾತ್ಯ ಜೀವನಶೈಲಿಯಲ್ಲಿ ಒಗ್ಗಿಸಿಕೊಂಡು ತಮ್ಮ ದೇಶದ ನಿಜವಾದ ಸಾಮರ್ಥ್ಯವನ್ನೇ ಮರೆತು ಕುಳಿತಿದ್ದಾರೆ. ಭಾರತೀಯರ ಮನಸ್ಥಿತಿಯನ್ನು ಈ ಹಿಂದೆಯೇ ಅರಿತಿದ್ದ ಸ್ವಾಮಿ ವಿವೇಕಾನಂದರು ಯುವಕರನ್ನು ಕುರಿತು. ಏಳಿ ಎದ್ದೇಳಿ ಎಂದು ಕರೆ ನೀಡಿದ್ದರು. ಆದರೆ, ಯುವಕರು ಭಾರತೀಯನ್ನು ಮೈಗೂಡಿಸಿಕೊಳ್ಳದೆ, ಆಧ್ಯಾತ್ಮಿಕ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳದೇ ಪಾಶ್ಚಾತ್ಯ ಜೀವನಶೈಲಿಯೇ ಶ್ರೇಷ್ಠ ಎಂಬ ಮೌಢ್ಯದಲ್ಲಿ ಬದುಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.