ಯುವ ಜನತೆ ಸದಾ ಕ್ರಿಯಾಶೀಲರಾಗಿರಬೇಕು: ಸಿ.ಟಿ. ರವಿ

KannadaprabhaNewsNetwork | Published : Nov 29, 2024 1:01 AM

ಸಾರಾಂಶ

ಚಿಕ್ಕಮಗಳೂರು, ಯುವ ಜನತೆ ಸದಾ ಕ್ರಿಯಾಶೀಲರಾಗಿರಬೇಕು. ಯುವ ಮನಸ್ಸುಗಳನ್ನು ಸೃಜನಶೀಲರನ್ನಾಗಿಸಲು ಯುವ ಜನೋತ್ಸವ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಜಿಲ್ಲಾ ಮಟ್ಟದ ಯುವ ಜನೋತ್ಸವ । ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ತಂಡಗಳು ಭಾಗಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಯುವ ಜನತೆ ಸದಾ ಕ್ರಿಯಾಶೀಲರಾಗಿರಬೇಕು. ಯುವ ಮನಸ್ಸುಗಳನ್ನು ಸೃಜನಶೀಲರನ್ನಾಗಿಸಲು ಯುವ ಜನೋತ್ಸವ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಇತರೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಜಿಲ್ಲಾ ಯುವ ಜನೋತ್ಸವದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಭಾರತ ಪ್ರಪಂಚದಲ್ಲೇ ಅತಿ ಹೆಚ್ಚು ಯುವ ಜನರನ್ನು ಹೊಂದಿರುವ ದೇಶ. ಯುವಕರೆ ದೇಶದ ಆಸ್ತಿ. ಶಕ್ತಿಯೆಲ್ಲ ನಿಮ್ಮೊಳಗೇ ಇದೆ. ನೀವು ಏನೂ ಬೇಕಾದರೂ ಸಾಧಿಸ ಬಲ್ಲಿರಿ, ಎಲ್ಲವನ್ನು ಮಾಡಬಲ್ಲಿರಿ ಎಂಬ ಸ್ವಾಮಿ ವಿವೇಕಾನಂದರ ವಾಣಿಯಂತೆ ಯುವ ಜನರ ಪ್ರತಿಭೆ, ಆಸಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಸರ್ಕಾರ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಆಯೋಜಿಸಿ ಉತ್ತೇಜಿಸುತ್ತಿದೆ. ಯುವ ಜನತೆ ತಮ್ಮಲ್ಲಿರುವ ಕಲೆಯನ್ನು ಕಾರ್ಯಗತಗೊಳಿಸಿ ಹೊಸ ಹೊಸ ಆವಿಷ್ಕಾರಗಳೊಂದಿಗೆ ಪರಿಚಯಿಸಬೇಕು ಎಂದರು.

ವೈವಿದ್ಯಮಯ ಜನ ಸಮೂಹ, ಭಾಷೆ, ಆಚರಣೆ, ಸಂಸ್ಕೃತಿಗಳ ನಡುವೆ ರಾಷ್ಟ್ರದಲ್ಲಿ ಏಕತೆ ಬಲಪಡಿಸಿ ಬಾಂಧವ್ಯ ಹೆಚ್ಚಿಸಲು ಯುವ ಜನೋತ್ಸವಗಳಂತಹ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ. ನಾಡಿನ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಕ್ರೀಡೆಗಳ ಶ್ರೀಮಂತಿಕೆಯನ್ನು ಯುವ ಮನಸ್ಸುಗಳಿಗೆ ತಿಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಪ್ರಸ್ತುತ ಸಮಾಜದಲ್ಲಿ ಪಾಶ್ಚಾತ್ಯ ಸಂಸ್ಕೃತಿ ಹಾಗೂ ಸಾಹಿತ್ಯದ ಒಲವಿನಿಂದ ಜನಪದ ಸಂಸ್ಕೃತಿ ಮರೆಯಾಗುತ್ತಿವೆ. ಜನಪದ ಗೀತೆಗಳು ಇತಿಹಾಸ ತಿಳಿಸಲು ಸಹಕರಿಸಿದರೆ. ಜನಪದ ನೃತ್ಯಗಳು ನಮ್ಮ ಸಂಸ್ಕೃತಿ ಶ್ರೇಷ್ಠತೆ ಪರಿಚಯಿಸುತ್ತವೆ. ಯುವ ಸಮೂಹ ನಾಡಿನ ಐತಿಹಾಸಿಕ ಜನಪದ ಕಲೆಗಳ ಕಲಿಕೆಯಲ್ಲಿ ತಲ್ಲೀನರಾಗಿ ತಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಲು ಮುಂದಾಗಬೇಕು. ಹೊಸತನ್ನು ಕಲಿತು ಸದಾ ಚೈತನ್ಯದಿಂದಿರಿ ಎಂದರು.ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ. ಮಂಜುಳಾ ಹುಲ್ಲಹಳ್ಳಿ ಮಾತನಾಡಿ. ಯುವ ಜನೋತ್ಸವ ಕಾರ್ಯಕ್ರಮದಿಂದ ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸಿ ಪರಿಚಯಿಸಲು ಸಹಕಾರಿಯಾಗಿದೆ. ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿ ತಂಡ ವೈವಿದ್ಯಮಯ ಸಂಸ್ಕೃತಿಯನ್ನು ಇತರರಿಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿವೆ. ಯುವ ಜನರಲ್ಲಿ ಜನಪದ ಕಲೆಗಳ ಕುರಿತು ಆಸಕ್ತಿ ಹೆಚ್ಚಿಸಲು ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದರು.

ಸಾಂಸ್ಕೃತಿಕ, ಜೀವನ ಕೌಶಲ್ಯ, ವಿಜ್ಞಾನ ಪ್ರದರ್ಶನ, ಕಥೆ, ಕವಿತೆ, ಛಾಯಾಗ್ರಹಣ ಹಾಗೂ ಯುವ ಕೃತಿಗಳಂತ ವಿವಿಧ ಸ್ಪರ್ಧೆಗಳಿಗೆ ಜಿಲ್ಲೆಯ 50ಕ್ಕೂ ಹೆಚ್ಚಿನ ಯುವ ತಂಡಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಕಲೆಯನ್ನು ಉಳಿಸಿ ಬೆಳೆಸುವ ಹಾಗೂ ಯುವ ಪ್ರತಿಭೆ ಗುರುತಿಸಿ ಗೌರವಿಸುವ ಉದ್ದೇಶದಿಂದ ಇಲಾಖೆಯಿಂದ ಅನೇಕ ಕಾರ್ಯಕ್ರಮ ಆಯೋಜಿಸಿ ಪ್ರೋತ್ಸಾಹಿಸಲಾಗುತ್ತಿದೆ. ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು. ನಾಡಿನ ಜನಪದ ಕಲೆಗಳ ಶ್ರೀಮಂತಿಕೆ ವೈಭವವನ್ನು ವಿಶ್ವಕ್ಕೆ ಪರಿಚಯಿಸಲು ಮುಂದಾಗಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಅಭಿಷೇಕ್ ಚವರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಮೇಶ್, ಕುವೆಂಪು ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್‌ ಅಧಿಕಾರಿ ಡಾ. ಶುಭ ಮರವಂತೆ ಉಪಸ್ಥಿತರಿದ್ದರು. 28 ಕೆಸಿಕೆಎಂ 1ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದ ಜಿಲ್ಲಾ ಯುವ ಜನೋತ್ಸವದ ಸಮಾರೋಪ ಸಮಾರಂಭದಲ್ಲಿ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ವಿಜೇತರಿಗೆ ಬಹುಮಾನ ವಿತರಿಸಿದರು. ಡಾ.ಮಂಜುಳಾ ಹುಲ್ಲಹಳ್ಳಿ ಇದ್ದರು.

Share this article