ಬಸವ ತತ್ವದ ಆಶಯಗಳನ್ನೆಲ್ಲ ನಮ್ಮ ಸಂವಿಧಾನ ಒಳಗೊಂಡಿದೆ

KannadaprabhaNewsNetwork |  
Published : May 01, 2025, 12:51 AM IST
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಉದ್ಘಾಟಿಸಿದರು.  | Kannada Prabha

ಸಾರಾಂಶ

ಬಸವಣ್ಣನವರು ಶ್ರೇಣಿಕೃತ ವ್ಯವಸ್ಥೆಯನ್ನು ವಿರೋಧಿಸಿದರು, ಸಮಾಜದಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ಬಲವಾಗಿ ಖಂಡಿಸಿ, ವಿರೋಧ ವ್ಯಕ್ತಪಡಿಸಿದ್ದರು. ಅವರ ಆಲೋಚನೆಗಳು ಮತ್ತು ಹೋರಾಟಗಳು ಸಮಾಜ ಸುಧಾರಣೆಗೆ ದಾರಿದೀಪವಾಗಿವೆ.

ಗದಗ:

ಜಗತ್ತೇ ಮೆಚ್ಚುವಂತಹ ಸಂವಿಧಾನ ನಮ್ಮದಾಗಿದೆ. ಈ ಸಂವಿಧಾನವೂ 12ನೇ ಶತಮಾನದಲ್ಲಿಯೇ ಬಸವಣ್ಣವರು ಸಾರಿದ ತತ್ವ, ಆದರ್ಶಗಳನ್ನು ಒಳಗೊಂಡಿದೆ. ಸಂವಿಧಾನದ ಆಶಯ ಹಾಗೂ ಬಸವ ತತ್ತ್ವ ಒಂದೇ ಆಗಿವೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಬುಧವಾರ ಗದಗ ನಗರದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಶಿವಾನುಭವ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವೇಶ್ವರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣನವರು ಶ್ರೇಣಿಕೃತ ವ್ಯವಸ್ಥೆಯನ್ನು ವಿರೋಧಿಸಿದರು, ಸಮಾಜದಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ಬಲವಾಗಿ ಖಂಡಿಸಿ, ವಿರೋಧ ವ್ಯಕ್ತಪಡಿಸಿದ್ದರು. ಅವರ ಆಲೋಚನೆಗಳು ಮತ್ತು ಹೋರಾಟಗಳು ಸಮಾಜ ಸುಧಾರಣೆಗೆ ದಾರಿದೀಪವಾಗಿವೆ. ಇತ್ತೀಚಿನ ದಿನಗಳಲ್ಲಿ ಕೆಲವು ರಾಜ್ಯಗಳಲ್ಲಿ ಶಾಂತಿಗೆ ಧಕ್ಕೆ ಬರುತ್ತಿರುವುದನ್ನು ಉದಾಹರಣೆ ನೀಡಿದ ಅವರು, ಕರ್ನಾಟಕದಲ್ಲಿ ಶಾಂತಿಯುತ ಜೀವನ ಸಾಧ್ಯವಾಗಿರುವುದು ಬಸವ ತತ್ತ್ವಗಳ ಪ್ರಭಾವದಿಂದ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಶಿರೋಳ ತೋಂಟದಾರ್ಯ ಮಠ ಮತ್ತು ಬೈರನಹಟ್ಟಿ ವಿರಕ್ತಮಠದ ಶಾಂತಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಸವಣ್ಣನವರು ಮನುಷ್ಯ-ಮನುಷ್ಯರ ನಡುವೆ ಸಮಾನತೆಯ ದೃಷ್ಟಿಕೋನ ಹೊಂದಿದ್ದು, ಸಮಾಜದಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದರು.

ಶರಣ ಚಿಂತಕ ಜಿ.ಎಸ್. ಪಾಟೀಲ ವಿಶೇಷ ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಲಿಂಗ, ಆರ್ಥಿಕ, ಧಾರ್ಮಿಕ ಅಸಮಾನತೆಗಳ ವಿರುದ್ಧ ಹೋರಾಡಿದರು. ಅವರ ತತ್ತ್ವಗಳನ್ನು ಸಾಮಾನ್ಯರಿಗೆ ತಲುಪಿಸುವಲ್ಲಿ ನಾವು ಇನ್ನೂ ಹೆಚ್ಚಿನ ಪ್ರಯತ್ನವಾಗಬೇಕಿದೆ. ಅಲ್ಲಮಪ್ರಭುದೇವರು ಶರಣ ಪರಂಪರೆಯ ನಾನಾ ವಿಧಗಳನ್ನು ಒಗ್ಗೂಡಿಸಿದ ಮಹಾಪುರುಷರಾಗಿ 16ನೇ ಶತಮಾನದಲ್ಲಿ ಯಡಿಯೂರಿನ ಶ್ರೀಗಳು ಶರಣ ಚಳವಳಿಗೆ ನಾಂದಿ ಹಾಡುವ‌ ಮೂಲಕ‌ ಮುಂಚೂಣಿಯಲ್ಲಿದ್ದರು ಎಂದರು.

ಕಾರ್ಯಕ್ರಮದಲ್ಲಿ "ಬಸವ ಬೆಳಕು " ಎಂಬ ಕವನ ಸಂಕಲನದ ರೂಪದ ಬಸವಣ್ಣನವರ ಕಿರು ಪುಸ್ತಕವನ್ನು ಸಚಿವ ಎಚ್.ಕೆ. ಪಾಟೀಲ ಮತ್ತು ಉಪಸ್ಥಿತರಿದ್ದ ಗಣ್ಯರು ಬಿಡುಗಡೆ ಮಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಕೃಷ್ಣ ಪರಾಪುರ, ಎಸ್.ಎಸ್. ಪಟ್ಟಣಶೆಟ್ಟರ್, ಬಾಲಚಂದ್ರ ಬರಮಗೌಡ್ರ, ನಾಗೇಶ್ ಸವಡಿ, ಎಸ್.ಎನ್. ಬಳ್ಳಾರಿ, ಜೋಗಣ್ಣವರ, ಎಸ್ಪಿ ಬಿ.ಎಸ್. ನೇಮಗೌಡ, ಎಸಿ ಗಂಗಪ್ಪ ಎಂ., ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಾಹುಬಲಿ ಜೈಜನ ನಿರೂಪಿಸಿದರು. ಇದಕ್ಕೂ ಮೊದಲು ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಜರುಗಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ