ಕನ್ನಡಪ್ರಭ ವಾರ್ತೆ ಹನೂರು
ತಹಸೀಲ್ದಾರ್ ಗುರುಪ್ರಸಾದ್ ಪ್ರಾಸ್ತಾವಿಕವಾಗಿ 76 ನೇ ಗಣರಾಜ್ಯೋತ್ಸವದ ಶುಭ ಸಂದೇಶದ ನುಡಿಗಳನ್ನಾಡಿದರು. ನಿರ್ವಹಣಾಧಿಕಾರಿ ಉಮೇಶ್ ಸಂವಿಧಾನದ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಿದರು
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕೊಳ್ಳೇಗಾಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಶಕಿ ಲತಾ ಮಣಿ ಸಂವಿಧಾನ ಮತ್ತು ಅದರ ಆಶಯಗಳು ಸಂವಿಧಾನ ರಚನೆಯಲ್ಲಿ ಡಾ.ಅಂಬೇಡ್ಕರ್ ಅವರ ಪಾತ್ರ ಹಾಗೂ ಕೊಡುಗೆ ಬಗ್ಗೆ ಮಾಹಿತಿ ನೀಡಿದರು. ಇತ್ತೀಚಿಗೆ ವಿಶೇಷ ಚೇತನರ ಕ್ರೀಡಾಕೂಟದಲ್ಲಿ ರಾಜ್ಯಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅನುಷ ಹಾಗೂ ಬಿಎಂಜಿ ಪ್ರೌಢಶಾಲೆಯ ನಾಗವೇಣಿ ಇಬ್ಬರು ವಿದ್ಯಾರ್ಥಿಗಳನ್ನು ಹಾಗೂ ನಿವೃತ್ತ ಸೈನಿಕರಾದ ಮಾಣಿಕ್ಯಂ ಹಾಗೂ ಬೆಂಜಮೀನ್ ಅವರನ್ನು ಸನ್ಮಾನಿಸಿ ಗೌರವಿಸಿದ್ದು ವಿಶೇಷವಾಗಿತ್ತು.ವಿವಿಧ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಹಾಗೂ ಕರುನಾಡಿನ ಸಂಸ್ಕೃತಿ ಬಿಂಬಿಸುವ ಗೀತೆಗಳಿಗೆ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ವಿವಿಧ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಆಕರ್ಷಕ ಪಥಸಂಚಲನಕ್ಕೆ ಶಾಸಕ ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಮಂಜುನಾಥ್, ವಿವಿಧ ಜಾತಿ ಧರ್ಮ ಭಾಷೆ ಆಚಾರ ವಿಚಾರ ಭೌಗೋಳಿಕ ವಿಭಿನ್ನತೆಯನ್ನು ನಮ್ಮ ದೇಶದಲ್ಲಿ ಕಾಣಬಹುದಾಗಿದೆ.
ಇಂದು ಕ್ರಾಂತಿ ಇಲ್ಲದೆ ಶಾಂತಿಯಿಂದ ದೇಶ ಮುನ್ನಡೆಯುತ್ತಿದ್ದರೆ ಅದಕ್ಕೆ ಸಂವಿಧಾನ ಕಾರಣ. ಸದೃಢ ಸಮಾಜಕ್ಕೆ ಯುವಕರ ಕೊಡುಗೆ ಪ್ರಮುಖವಾದದ್ದು, ಯುವಜನತೆ ಮನಸ್ಸು ಮಾಡಿದರೆ ದೇಶದ ದಿಕ್ಕನ್ನೇ ಬದಲಾಯಿಸಬಹುದು. ಯುವ ಪೀಳಿಗೆ ಒಳ್ಳೆ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವತ್ತ ಗಮನ ಹರಿಸಬೇಕು. ಕ್ಷೇತ್ರದಲ್ಲಿ ಬಡತನ, ನಿರುದ್ಯೋಗ ತಾಂಡವವಾಡುತ್ತಿದೆ ಈ ನಿಟ್ಟಿನಲ್ಲಿ ಉದ್ಯೋಗ ಅವಕಾಶ ಕಲ್ಪಿಸಲು ಹಾಗೂ ಕ್ಷೇತ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಕ್ಯಾಬಿನೆಟ್ ಸಭೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವುದರಿಂದ ಸಂತಸ ತಂದಿದೆ. ಕ್ಷೇತ್ರ ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ವರದಾನವಾಗಲಿದೆ ಎಂದರು.ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಮುಮ್ತಾಜ್ ಬಾನು, ಉಪಾಧ್ಯಕ್ಷ ಆನಂದ್, ಸದಸ್ಯರಾದ ಹರೀಶ್ ಕುಮಾರ್, ಸೋಮಶೇಖರ್,ಸುದೇಶ್,ಮಹೇಶ್ ನಾಯಕ, ಮಂಜುಳಾ, ರೂಪ, ಪ್ರೇಮಲತಾ ನಾಮನಿರ್ದೇಶಿತ ಸದಸ್ಯರಾದ ಬಸವರಾಜು, ಮಹಾದೇಶ್, ನವೀನ್ ಕುಮಾರ್ ಮುಖ್ಯ ಅಧಿಕಾರಿ ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ಇನ್ಸ್‌ಪೆಕ್ಟರ್ ಶಶಿಕುಮಾರ್ ಇದ್ದರು.