ನಮ್ಮ ಸಂಸ್ಕೃತಿ ಜಗತ್ತಿಗೆ ಪರಿಚಯಿಸಬೇಕಿದೆ: ಡಾ. ಅಂಜಲಿ

KannadaprabhaNewsNetwork |  
Published : Apr 04, 2024, 01:00 AM IST
ಡಾ.ಅಂಜಲಿ ಮಾತನಾಡಿದರು | Kannada Prabha

ಸಾರಾಂಶ

ಉತ್ತರ ಕನ್ನಡದ ವಿವಿಧ ಸಂಸ್ಕೃತಿಗಳನ್ನು ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವ ಕಾರ್ಯವಾಗಬೇಕಿದೆ ಎಂದು ಡಾ. ಅಂಜಲಿ ನಿಂಬಾಳ್ಕರ ತಿಳಿಸಿದರು.

ಶಿರಸಿ: ನಮ್ಮ ನೆಲ, ನಮ್ಮ ಜಲ ರಕ್ಷಣೆಯ ಜತೆಗೆ ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡುವ ಹಂಬಲವಿದೆ. ಇದು ನನ್ನ ಗ್ಯಾರಂಟಿಯಾಗಿದ್ದು, ಇದಕ್ಕಾಗಿ ನಿಮ್ಮ ಆಶೀರ್ವಾದ ಬೇಕಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಮನವಿ ಮಾಡಿದರು‌.

ಬುಧವಾರ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಮ್ಮ ಜನರ ಜಮೀನು ನಮ್ಮವರಿಗೇ ಸಿಗಬೇಕು. ಅವರಿಗೆ ಅವರ ಹಕ್ಕು ದೊರಕಿಸಿಕೊಡುವ ಕಾರ್ಯ ಮಾಡಬೇಕಿದೆ. ನಮ್ಮ ಜನರಿಗೆ ಉದ್ಯೋಗ ದೊರಕಬೇಕಿದೆ. ಉತ್ತರ ಕನ್ನಡದ ವಿವಿಧ ಸಂಸ್ಕೃತಿಗಳನ್ನು ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವ ಕಾರ್ಯವಾಗಬೇಕಿದೆ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಈ ಸ್ಪರ್ಧೆಯಾಗಿದೆ ಎಂದರು.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ರಾಷ್ಟ್ರಕ್ಕೆ ನೀಡಿದ ಪವಿತ್ರ ಗ್ರಂಥದಿಂದ ಪ್ರಜಾಪ್ರಭುತ್ವ ನಡೆಯುತ್ತಿದೆ. ಆದರೆ ಬಹುಮತ ಬಂದರೆ ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆಂದು ಇಲ್ಲಿನ ಸಂಸದರು ಹೇಳುತ್ತಾರೆ. ಗ್ಯಾರಂಟಿಯನ್ನು ತಮಾಷೆ ಮಾಡಿದ್ದ ಪ್ರಧಾನಿ, ಈಗ ''''''''ಯೇ ಮೋದೀ ಕೀ ಗ್ಯಾರಂಟಿ ಹೈ'''''''' ಎನ್ನುತ್ತಿದ್ದಾರೆ. ಡಾ. ಅಂಜಲಿ, ಖಾನಾಪುರ, ಶಿರಸಿಯ ಅಭ್ಯರ್ಥಿಯಲ್ಲ; ಕಾಂಗ್ರೆಸ್ ಅಭ್ಯರ್ಥಿ, ಈ ಕ್ಷೇತ್ರದ ಅಭ್ಯರ್ಥಿ. ಅವರನ್ನು ಗೆಲ್ಲಿಸಿಕೊಂಡುವ ಬರುವ ಜವಾಬ್ದಾರಿ ನಮ್ಮೆಲ್ಲರದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ, ಬಿಜೆಪಿಯವರು ಸುಳ್ಳನ್ನು ಬಿಟ್ಟು ಅಭಿವೃದ್ಧಿ ಮಾಡಿದ ಇತಿಹಾಸವಿಲ್ಲ. ನಾವು ಅಭಿವೃದ್ಧಿಗೆ ಇರುವವರಲ್ಲ ಎಂದು ಸಾರ್ವಜನಿಕವಾಗೇ ಅವರು ಹೇಳಿಕೊಂಡಿದ್ದಾರೆ. ಏನು ಮಾಡಿದರೂ ನಡೆಯುತ್ತದೆಂಬ ಸ್ಥಿತಿಗೆ ಬಿಜೆಪಿಗರು ಜಿಲ್ಲೆಯನ್ನು ತಂದಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ೧೦ ವರ್ಷಗಳಿಂದ ಅಧಿಕಾರ ನಡೆಸಿದ ಬಿಜೆಪಿಯ ಅಭಿವೃದ್ಧಿ ಶೂನ್ಯ. ಅಧಿಕಾರಕ್ಕಾಗಿ ಧರ್ಮ ಧರ್ಮಗಳ ನಡುವೆ ಕಿಚ್ಚು ಹಚ್ಚಿ, ಸುಳ್ಳುಗಳಿಂದಲೇ ಜನರನ್ನು ನಂಬಿಸುತ್ತಾ ಬಂದಿರುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಕೂಗು ಇಡೀ ದೇಶದಲ್ಲಿ ಕೇಳಿಬರುತ್ತಿದೆ. ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಶತಃಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಹಳ ಮಂದಿ ಆಕಾಂಕ್ಷಿಗಳಿದ್ದರೂ ಇದ್ದ ಟಿಕೆಟ್ ಒಂದೇ. ಆಕಾಂಕ್ಷಿಗಳಿದ್ದವರೆಲ್ಲ ಟಿಕೆಟ್ ಘೋಷಣೆಯಾದ ಬಳಿಕ ನಮ್ಮ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ಸಮರ್ಥ ಅಭ್ಯರ್ಥಿ ಡಾ. ಅಂಜಲಿಯವರನ್ನು ಆರಿಸಿ ಸಂಸತ್‌ಗೆ ಕಳುಹಿಸಬೇಕಿದೆ ಎಂದರು.

ವಕೀಲ ಜಿ.ಟಿ. ನಾಯ್ಕ ಮಾತನಾಡಿ, ಸುಳ್ಳು ಭರವಸೆ ನೀಡುತ್ತಿರುವ ಬಿಜೆಪಿ ೧೦ ವರ್ಷ ದೇಶ ಆಳಿದೆ. ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ಈ ಬಾರಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ವತಿಯಿಂದ ಆರ್.ವಿ. ದೇಶಪಾಂಡೆ, ಮಂಕಾಳು ವೈದ್ಯ ಹಾಗೂ ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ಸನ್ಮಾನಿಸಲಾಯಿತು.

ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಂಯೋಜಕ ನಾಗರಾಜ ನಾರ್ವೇಕರ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಗೌಡ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷೆ ಸುಮಾ ಉಗ್ರಾಣಕರ್, ಅಬ್ಬಾಸ್ ತೋನ್ಸೆ, ಜೆ.ಟಿ. ನಾಯ್ಕ, ವಿಶ್ವ, ಜಿ.ಎನ್. ಹೆಗಡೆ ಮುರೇಗಾರ್, ಸಂತೋಷ್ ಶೆಟ್ಟಿ, ದೀಪಕ್ ದೊಡ್ಡೂರು, ಎಂ.ಎನ್. ಭಟ್, ಶ್ರೀನಿವಾಸ್ ನಾಯ್ಕ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!