ಕನ್ನಡಪ್ರಭ ವಾರ್ತೆ ಗೋಕಾಕ
ನಗರದ ಮಹಾಲಕ್ಷ್ಮೀ ಸಭಾ ಭವನದಲ್ಲಿ ಬುಧವಾರ ಹಣಬರ (ಯಾದವ) ಸಮಾಜ ಕ್ಷೇಮಾಭಿವೃದ್ಧಿ ಸಂಘದ ಗೋಕಾಕ ಮತ್ತು ಮೂಡಲಗಿ ತಾಲೂಕು ಜಂಟಿಯಾಗಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 3 ದಶಕಗಳಿಂದ ಅವಿಭಜಿತ ಗೋಕಾಕ ತಾಲೂಕಿನ ಶ್ರೇಯೋಭಿವೃದ್ಧಿಗಾಗಿ ಜಾತ್ಯಾತೀತವಾಗಿ ಪಕ್ಷಭೇದ ಮರೆತು ಶ್ರಮಿಸಲಾಗುತ್ತಿದೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಕ್ಷೇತ್ರ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸೇವೆ ಮಾಡಲಿಕ್ಕೆ ಎಲ್ಲ ಸಮುದಾಯದ ಜನರು ಸದಾ ನಮ್ಮೊಂದಿಗೆ ಕೈ ಜೋಡಿಸಿದ್ದು, ಇಂತಹ ಜನರನ್ನು ಪಡೆದಿರುವುದು ನಮ್ಮ ಪುಣ್ಯ, ಪ್ರಬಲ ಸಮೂದಯಗಳ ಜತೆಗೆ ಹಿಂದುಳಿದ, ಅಲ್ಪಸಂಖ್ಯಾತರು, ಸಣ್ಣ ಹಾಗೂ ಅತೀ ಸಣ್ಣ ಸಮಾಜಗಳು ನಮ್ಮನ್ನು ಎಲ್ಲ ಸಂದರ್ಭಗಳಲ್ಲಿ ಕೈ ಹಿಡಿದಿದ್ದು ಅವರ ಋಣ ನಮ್ಮ ಮೇಲಿದೆ ಎಂದರು.
ಈಗಾಗಲೇ ಬಹುತೇಕ ಸಮಾಜಗಳ ಸಮಾವೇಶಗಳನ್ನು ಸಂಘಟಿಸುವ ಮೂಲಕ ಸಮಾಜಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಎಲ್ಲ ಜಾತಿಗಳನ್ನು ಸಂಘಟಿಸಿ ಅವರಲ್ಲಿ ಒಗ್ಗಟ್ಟು, ಸಾಮರಸ್ಯ ತರುವ ಮೂಲಕ ಒಗ್ಗಟ್ಟಿನ ಮಂತ್ರಗಳನ್ನು ಜಪಿಸುತ್ತಿದ್ದೇವೆ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಪ್ರತಿಪಾದಿಸಿದ ಸಾಮಾಜಿಕ ನ್ಯಾಯದ ಅನುಭವ ಮಂಟಪದ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಪ್ರತಿ ಸಮಾಜಕ್ಕೂ ಅಧಿಕಾರ ಕಲ್ಪಿಸುವ ಮೂಲಕ ಅವರ ಪ್ರಗತಿಗೆ ಸದಾ ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕಾದರೇ ವ್ಯವಸ್ಥಿತ ಸಂಘಟನೆ ಮುಖ್ಯವಾಗಿದೆ. ಈ ದಿಸೆಯಲ್ಲಿ ಸಮಾಜಕ್ಕೆ ಅಗತ್ಯವಿರುವ ಎಲ್ಲ ನೆರವನ್ನು ನೀಡಲು ಸಿದ್ಧ. ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುವ ಮೂಲಕ ಸಮಾಜವು ಮುಖ್ಯವಾಹಿನಿಗೆ ಬರಬೇಕಾದ ಅಗತ್ಯವಿದೆ. ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರವಾಗಿದೆ ಎಂದು ತಿಳಿಸಿದರು.
ಚಿತ್ರದುರ್ಗದ ಹಣಬರ ಮಠದ ಯಾದವಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಜಯಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಪ್ರಭಾ ಶುಗರ್ ನಿರ್ದೇಶಕ ಶಿವಲಿಂಗ ಪೂಜೇರಿ, ಸಿದಗೌಡ ಪಾಟೀಲ, ಬಿ.ಎಲ್.ಪಾಟೀಲ, ಡಾ.ಅರವಿಂದ ತೇಣಗಿ, ಶೀತಲ ಮುಂಡೆ, ಮಂಜುನಾಥ ಪಾಟೀಲ, ಕಸಾಪ ಅಧ್ಯಕ್ಷ ಡಾ.ಸಂಜಯ ಸಿಂಧಿಹಟ್ಟಿ, ಶ್ರೀಪತಿ ಗಣೇಶವಾಡಿ, ಸುರೇಶ ಜಾಧವ, ಸಿದ್ರಾಮ ದ್ಯಾಗಾನಟ್ಟಿ, ಸಿದ್ರಾಮ ಮೂಲಿಮನಿ, ರಮೇಶ ಪೂಜೇರಿ, ಮಾಯಪ್ಪ ಏಕಣಿ, ರಮೇಶ ಜುಪ್ರಿ, ಗೋಪಾಲ ಮಲ್ಲನವರ, ಈರಪ್ಪ ಸಂಗಪ್ಪಗೋಳ, ವಿಠ್ಠಲ ಶಿಂಧಿಹಟ್ಟಿ, ಕಾಡಪ್ಪ ಮಲ್ಲನ್ನವರ, ಗಂಗಾಧರ ಪಾಟೀಲ, ಲಗಮಣ್ಣಾ ಪಾಟೀಲ, ರಾಜು ಕರೆನ್ನವರ, ಭೀಮನಗೌಡ ಪಾಟೀಲ, ಕರೆಪ್ಪ ಪಾಟೀಲ, ಆನಂದ ಪಾಟೀಲ, ಆನಂದ ಪೂಜೇರಿ, ಮಲ್ಲಪ್ಪ ಬೋರನ್ನವರ, ಕೆಂಚಪ್ಪ ಬಾದನವರ, ಲಕ್ಷ್ಮಣ ಹಮ್ಮನವರ, ರಾಮಣ್ಣಾ ಮಿಟ್ಟು, ಆನಂದ ಸೊಂಟಲಕ್ಕಪ್ಪನವರ, ಬಸವರಾಜ ಹಮ್ಮನ್ನವರ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಹಣಬರ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಇದಕ್ಕೂ ಮುನ್ನ ನಡೆದ ಕುಂಭಮೇಳಕ್ಕೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಾಲನೆ ನೀಡಿದರು.ಹಣಬರ ಸಮಾಜವು ನಮ್ಮ ಭಾಗದಲ್ಲಿ ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದು, ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ ಯಾದವ ಅವರು ಈ ಸಮಾಜಕ್ಕೆ ಸೇರಿರುವುದು ಹೆಮ್ಮೆ ಮತ್ತು ಅಭಿಮಾನ ಪಡಬೇಕಾಗಿದೆ. ಈ ಸಮಾಜವು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಬೇಕಿದ್ದು, ಸಮಾಜದ ಅಶೋತ್ತರಗಳನ್ನು ಈಡೇರಿಸಲು ನಮ್ಮ ಜಾರಕಿಹೊಳಿ ಕುಟುಂಬ ಸಿದ್ಧವಿದೆ.
-ಬಾಲಚಂದ್ರ ಜಾರಕಿಹೊಳಿ, ಶಾಸಕರು.