ಫಲಿತಾಂಶ ಸುಧಾರಣೆಗೆ ನಮ್ಮ ಗುರಿ ನೂರರತ್ತ ಎಸ್‌ಎಸ್‌ಎಲ್‌ಸಿ ಕಾರ್ಯಾಗಾರ

KannadaprabhaNewsNetwork |  
Published : Feb 06, 2025, 12:15 AM IST
5ಡಿಡಬ್ಲೂಡಿ1 | Kannada Prabha

ಸಾರಾಂಶ

ಧಾರವಾಡ ಜಿಲ್ಲೆಯಿಂದ 29 ಸಾವಿರ ಮಕ್ಕಳು ಪ್ರಸಕ್ತ ಸಾಲಿನ ಪರೀಕ್ಷೆಗೆ ಹೆಸರು ನೀಡಿದ್ದಾರೆ. ಎಲ್ಲ ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣ ಆಗುವಂತೆ ಅವರ ಕಲಿಕಾ ಗುಣಮಟ್ಟಕ್ಕೆ ಅನುಗುಣವಾಗಿ ಶಿಕ್ಷಕರಿಂದ ಪ್ರತ್ಯೇಕವಾಗಿ ಮತ್ತು ವಿಶೇಷವಾಗಿ ಓದು-ಬರಹ ಕಲಿಸಲಾಗುತ್ತಿದೆ.

ಧಾರವಾಡ:

ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಓದು-ಬರಹ ಸುಧಾರಣೆ, ಎಸ್ಸೆಸ್ಸೆಲ್ಸಿ ಅನುತ್ತೀರ್ಣ ಪ್ರಮಾಣ ಕಡಿಮೆ ಮಾಡುವುದು ಮತ್ತು ಎಸ್ಸೆಸ್ಲೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಹೆಚ್ಚು ರ‍್ಯಾಂಕ್ ಗಳಿಸುವ ಉದ್ದೇಶವನ್ನು ಮಿಶನ್ ವಿದ್ಯಾಕಾಶಿ ಹೊಂದಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ನಗರದ ಕೆ.ಇ. ಬೋರ್ಡ್ ಸಂಸ್ಥೆಯಲ್ಲಿ ಜಿಲ್ಲಾಡಳಿತವು ಶಾಲಾ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಮಿಶನ್ ವಿದ್ಯಾಕಾಶಿ ಯೋಜನೆಯಡಿ ವಿವಿಧ ತಾಲೂಕುಗಳ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ನಮ್ಮ ಗುರಿ ನೂರರತ್ತ-ಪ್ರೇರಣಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಿಂದ 29 ಸಾವಿರ ಮಕ್ಕಳು ಪ್ರಸಕ್ತ ಸಾಲಿನ ಪರೀಕ್ಷೆಗೆ ಹೆಸರು ನೀಡಿದ್ದಾರೆ. ಎಲ್ಲ ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣ ಆಗುವಂತೆ ಅವರ ಕಲಿಕಾ ಗುಣಮಟ್ಟಕ್ಕೆ ಅನುಗುಣವಾಗಿ ಶಿಕ್ಷಕರಿಂದ ಪ್ರತ್ಯೇಕವಾಗಿ ಮತ್ತು ವಿಶೇಷವಾಗಿ ಓದು-ಬರಹ ಕಲಿಸಲಾಗುತ್ತಿದೆ ಎಂದರು.

ಜಿಲ್ಲೆಗೆ ಈ ಬಾರಿ ಹೆಚ್ಚು ರ‍್ಯಾಂಕ್ ತರಬೇಕು ಎಂಬ ಹಿನ್ನೆಲೆಯಲ್ಲಿ ಚಾಣಾಕ್ಷ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಣ ಇಲಾಖೆ ಮೂಲಕ ಪ್ರತಿ ತಾಲೂಕಿನಲ್ಲಿ ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಅದರಂತೆ ಪ್ರತಿ ತಾಲೂಕಿನಿಂದ ವಿಶೇಷವಾಗಿ 20 ವಿದ್ಯಾರ್ಥಿಗಳನ್ನು ಅವರ ಶೈಕ್ಷಣಿಕ ಸಾಧನೆ, ಪರೀಕ್ಷಾ ಗುಣಮಟ್ಟ ಗಮನಿಸಿ ಈ ಕಾರ್ಯಾಗಾರದ ತರಬೇತಿಗೆ ಆಯ್ಕೆ ಮಾಡಲಾಗಿದೆ. ರ‍್ಯಾಂಕ್ ಪಡೆಯುವ ವಿದ್ಯಾರ್ಥಿಗಳು ಶ್ರಮ ಪಟ್ಟು ಓದುವ, ನಿರಂತರ ಅಧ್ಯಯನ ಮೂಲಕ ಸಾಮಾನ್ಯರ ಗುಂಪಿನಿಂದ ಸಾಧಕರ ಗುಂಪಿಗೆ ಸೇರಬೇಕು ಎಂದರು.

ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಪರೀಕ್ಷೆಗಳನ್ನು ವೇಳಾಪಟ್ಟಿಗೆ ಅನುಗುಣವಾಗಿ, ಏಕಾಗ್ರತೆ ಮತ್ತು ಯೋಜನಾಬದ್ಧವಾಗಿ ತಯಾರಿ ಮಾಡಿಕೊಳ್ಳಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆಗೆ ಇದು ಮುಖ್ಯ ಕಾಲ. ಪ್ರತಿದಿನ ವಿಷಯವಾರು ಪುನರ್ ಮನನ ಮಾಡಿಕೊಳ್ಳಬೇಕೆಂದರು.

ಕೆ.ಇ. ಬೋರ್ಡ್ ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ರಾಜಪೂರೋಹಿತ, ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಬಿಇಒ ಅಶೋಕ ಸಿಂದಗಿ, ರಾಮಕೃಷ್ಣ ಸದಲಗಿ, ಉಪಯೋಜನಾಧಿಕಾರಿ ಎಸ್.ಎಂ. ಹುಡೆದಮನಿ, ಡೈಟ್ ಹಿರಿಯ ಉಪನ್ಯಾಸಕ ಎ.ಎ. ಖಾಜಿ, ಶಿಕ್ಷಣ ಅಧಿಕಾರಿ ನಾಫೀಸಾಬಾನು ದಾವಲಸಾಬನವರ ಇದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌