ಒಳಮೀಸಲು ಜಾರಿಗೆ ನಮ್ಮ ಸರ್ಕಾರ ಬದ್ಧ : ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Apr 06, 2025, 01:49 AM ISTUpdated : Apr 06, 2025, 01:00 PM IST
ವಿಧಾನಸೌಧ ಮೆಟ್ಟಿಲುಗಳ ಮೇಲೆ ಡಾ. ಬಾಬು ಜಗಜೀವನರಾಂ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಡಾ. ಬಾಬು ಜಗಜೀವನರಾಂ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಗೃಹ ಸಚಿವ ಡಾ.ಜಿ. ಪರಮೇಶ್ವರ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿ ಮಾಡುವುದು ನಮ್ಮ ಸರ್ಕಾರದ ಬದ್ಧತೆ. ಯಾರಿಗೂ ಅನ್ಯಾಯವಾಗದಂತೆ ಸಂವಿಧಾನಾತ್ಮಕವಾಗಿ ನಾವು ಅದನ್ನು ಜಾರಿಗೊಳಿಸುತ್ತೇವೆ. ಈ ವಿಚಾರದಲ್ಲಿ ಯಾವುದೇ ಸಂಶಯ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

 ಬೆಂಗಳೂರು : ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿ ಮಾಡುವುದು ನಮ್ಮ ಸರ್ಕಾರದ ಬದ್ಧತೆ. ಯಾರಿಗೂ ಅನ್ಯಾಯವಾಗದಂತೆ ಸಂವಿಧಾನಾತ್ಮಕವಾಗಿ ನಾವು ಅದನ್ನು ಜಾರಿಗೊಳಿಸುತ್ತೇವೆ. ಈ ವಿಚಾರದಲ್ಲಿ ಯಾವುದೇ ಸಂಶಯ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶನಿವಾರ ಸಮಾಜ ಕಲ್ಯಾಣ ಇಲಾಖೆಯಿಂದ ವಿಧಾನಸೌಧ ಮೆಟ್ಟಿಲುಗಳ ಮೇಲೆ ಡಾ। ಬಾಬು ಜಗಜೀವನರಾಂ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಒಳಮೀಸಲಾತಿ ಜಾರಿಗೆ ಸುಪ್ರೀಂಕೋರ್ಟ್ ಆದೇಶವಿದೆ. ಹೀಗಾಗಿ, ಯಾರು ಬೇಡ ಅಂದರೂ ಅದನ್ನು ಜಾರಿ ಮಾಡೇ ಮಾಡುತ್ತೇವೆ. ನ್ಯಾ.ನಾಗಮೋಹನ ದಾಸ್ ಸಮಿತಿಗೆ ಇನ್ನೂ 2 ತಿಂಗಳು ಕಾಲಾವಕಾಶ ನೀಡಲಾಗಿದೆ. ಮತ್ತೊಂದೆಡೆ ಇಲಾಖೆಗಳಲ್ಲಿ ಬಡ್ತಿ ಮೀಸಲಾತಿ ಮತ್ತು ನೇಮಕಾತಿ ತಡೆ ಹಿಡಿಯಲಾಗಿದೆ. ಆದೇಶ ಮೀರಿ ಮೀಸಲಾತಿ, ನೇಮಕಾತಿ ಮಾಡಿದರೂ ಅದನ್ನು ರದ್ದುಪಡಿಸುತ್ತೇವೆ ಎಂದರು.

ಅಸಮಾನತೆ ಈ ವ್ಯವಸ್ಥೆಯ ವೈಫಲ್ಯ:

ಮೋದಿ ಸರ್ಕಾರ ಇಡಬ್ಲ್ಯುಎಸ್‌ ಜಾರಿಗೊಳಿಸಿದ ಬಳಿಕ ಎಲ್ಲರೂ ಮೀಸಲಾತಿ ವ್ಯಾಪ್ತಿಗೆ ಬಂದಿದ್ದಾರೆ. ಮೀಸಲಾತಿ ವಿರೋಧಿಸುತ್ತಿದ್ದವರು ಕೂಡ ಇಂದು ಮೀಸಲಾತಿ ಪರವಾಗಿದ್ದಾರೆ. ಜಾತಿ ವ್ಯವಸ್ಥೆ ನಿರ್ಮೂಲನೆಯಾಗಿ ಆರ್ಥಿಕ, ಸಾಮಾಜಿಕ ಸಮಾನತೆ ಬರುವವರೆಗೂ ಮೀಸಲಾತಿ ಇರಬೇಕು. ಸಾಮಾಜಿಕ ಅಸಮಾನತೆ ಈ ವ್ಯವಸ್ಥೆಯ ವೈಫಲ್ಯ. ಇದರ ವಿರುದ್ಧ ಮಾಜಿ ಉಪಪ್ರಧಾನಿ ಜಗಜೀವನ ರಾಂ ಅವರು ತಮ್ಮ ಜೀವನದುದ್ದಕ್ಕೂ ಹೋರಾಟ ನಡೆಸಿ ದಲಿತ ಸಮುದಾಯಗಳ ಏಳಿಗೆಗಾಗಿ ಅಮೂಲಾಗ್ರ ಬದಲಾವಣೆಗಳನ್ನು ತಂದಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಮೋದಿ ಸರ್ಕಾರದ್ದು ಬರೀ ಬಾಯ್ಮಾತಿನ ಸಾಮಾಜಿಕ ನ್ಯಾಯದ ಭಾಷಣ. ಆದರೆ, ನಾವು ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ತರುವ ಮೂಲಕ ದಲಿತ ಸಮುದಾಯದ ಅಭಿವೃದ್ಧಿ ಮಾಡುತ್ತಿದ್ದೇವೆ. ಗುತ್ತಿಗೆ ಕೆಲಸಗಳಲ್ಲಿ ಮೀಸಲಾತಿ ತಂದಿದ್ದೇವೆ. ಹಿಂದೆ ಬಡವರು ಕೇವಲ ಒಂದು ಹೊತ್ತು ಅನ್ನ ಉಣ್ಣುತ್ತಿದ್ದರು. ಅವರ ಕಷ್ಟ ಕಣ್ಣಾರೆ ಕಂಡಿದ್ದೇನೆ. ಯಾರೊಬ್ಬರೂ ಹಸಿದ ಹೊಟ್ಟೆಯಲ್ಲಿ ಮಲಗಬಾರದೆಂಬ ಕಾಳಜಿಯಿಂದ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೇವೆ. ಈಗ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಸರ್ಕಾರ ನಿಮ್ಮ ಜತೆಗಿದೆ:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ನೀವ್ಯಾರೂ ದುರ್ಬಲರು ಎನ್ನುವ ಭಾವನೆ ಬೇಡ. ಜಗಜೀ‍ವನರಾಂ, ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ನಾವು ಸಾಗೋಣ. ನಿಮ್ಮ ಏಳಿಗೆಗಾಗಿ ನಮ್ಮ ಸರ್ಕಾರ ಸದಾ ನಿಮ್ಮ ಜೊತೆ ಇರುತ್ತದೆ ಎಂದರು.

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಸಂವಿಧಾನ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ, ಬುಡಮೇಲುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ, ನಾವು ಸಂವಿಧಾನದ ಆಶಯಗಳಿಗೆ ತಕ್ಕಂತೆ ಎಲ್ಲರಿಗೂ ಅವಕಾಶ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.

ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ₹40,000 ಕೋಟಿ ಸದ್ಬಳಕೆಯಾಗುತ್ತಿಲ್ಲ. ನಿರ್ದಿಷ್ಟ ಯೋಜನೆ ಆಧಾರಿತವಾಗಿ ಸರ್ಕಾರ ಅನುದಾನ ಹಂಚಿಕೆ ಮಾಡಿ ಅನುದಾನ ಸದ್ಬಳಕೆ ಆಗುವಂತೆ ಮಾಡಬೇಕು. ಒಳ ಮೀಸಲಾತಿ ಕುರಿತು ದೂಷಿಸುವ ಬದಲು ಎಲ್ಲರೂ ಬೆಂಬಲಿಸಬೇಕು ಎಂದು ಹೇಳಿದರು.

ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ 2023 ಮತ್ತು 2024ನೇ ಸಾಲಿನ ಬಾಬು ಜಗಜೀವನರಾಂ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಗೃಹ ಸಚಿವ ಡಾ। ಜಿ.ಪರಮೇಶ್ವರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ। ಶಾಲಿನಿ ರಾಜನೀಶ್, ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...