ಕನಕಪುರ: ಐದು ವರ್ಷಕ್ಕೊಮ್ಮೆ ದೇವೇಗೌಡ ಮತ್ತು ಕುಮಾರಸ್ವಾಮಿಯವರು ಕನಕಪುರದಲ್ಲಿ ಪ್ರವಾಸ ಮಾಡಿ ಹೋಗ್ತಾರೆ. ಅವರು ಎಷ್ಟು ಸಾರಿ ಬೇಕಾದರು ಬಂದು ಹೋಗಲಿ ನನ್ನದೇನು ಅಭ್ಯಂತರವಿಲ್ಲ. ನಾವು ಮಾತ್ರ ಅವರಂತಲ್ಲ. ಈ ತಾಲೂಕಿನ ಜನರ ಮಕ್ಕಳಾಗಿರುವ ನಮ್ಮ ಬದುಕು, ಜೀವನ, ಪಲ್ಲಕ್ಕಿ, ಕೊನೆಗೆ ಹೆಣ ಎಲ್ಲವೂ ಇದೇ ಮಣ್ಣಿನಲ್ಲಿ ಅಡಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕನಕಪುರ ಮತ್ತು ರಾಮನಗರ ನನ್ನ ಎರಡು ಕಣ್ಣು ಎನ್ನುತ್ತಿದ್ದ ಮಹಾನುಭಾವರು ಈಗ ಚನ್ನಪಟ್ಟಣ ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ಮೊಮ್ಮಗ ಹಾಸನದಲ್ಲಿ, ಅಳಿಯ ಇಲ್ಲಿ ಸ್ಪರ್ಧಿಸಿದ್ದಾರೆ. ಹೀಗಾದರೆ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು. ಕೇವಲ ಅವರ ಕುಟುಂಬಕ್ಕೆ ದುಡಿಯಲು ಕಾರ್ಯಕರ್ತರು ಇರಬೇಕೆ ಎಂಬುದನ್ನು ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಯೋಚಿಸಬೇಕು ಎಂದು ಪರೋಕ್ಷ ವಾಗಿ ದೇವೇಗೌಡ ಹಾಗೂ ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಬಿಜೆಪಿಗೆ ಮತ ಹಾಕಿದವರಿಗೂ ಸೇರಿ ಪಕ್ಷಾತೀತವಾಗಿ ಯೋಜನೆ ಕೊಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ಕುಮಾರಸ್ವಾಮಿ, ಮೋದಿ ಎಲ್ಲಾ ಬೊಬ್ಬೆ ಹಾಕುತ್ತಿದ್ದರು. ಆದರೀಗ ಅವರೇ ಮೋದಿ ಗ್ಯಾರಂಟಿ ಎಂದು ಹೆಸರು ಹಾಕಿಕೊಳ್ಳುತ್ತಿದ್ದು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಡ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ಕೊಡಲಿದ್ದು ಕೆಲಸ ಇಲ್ಲದ ಯುವಕರಿಗೆ 1 ಲಕ್ಷ, 25 ಲಕ್ಷ ಆರೋಗ್ಯ ಮಿಮೆ ಹಾಗೂ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದರು.ಮಹಿಳೆಯರಿಗೆ ನೀಡಿರುವ ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳಿಗೆ ಪ್ರಶ್ನಿಸುವ ಛಲ ಬಂದಿದೆ. ಇತ್ತೀಚೆಗೆ ಒಂದು ವಿಡಿಯೋ ನೋಡುತ್ತಿದ್ದೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಹೆಣ್ಣುಮಕ್ಕಳನ್ನು ಮಾಧ್ಯಮದ ಸ್ನೇಹಿತರು ಮಾತನಾಡಿಸಿ ಯಾರಿಗೆ ನಿಮ್ಮ ಮತ ಎಂದಾಗ ಕಾಂಗ್ರೆಸ್‌ಗೆ, ಡಿ.ಕೆ.ಶಿವಕುಮಾರ್ ಗೆ ಎನ್ನುತ್ತಾರೆ. ಅದರಲ್ಲಿ ಒಬ್ಬಾಕೆ ಮಾತ್ರ ಮೋದಿಗೆ ಎಂದಾಗ ಎಲ್ಲಾ ಮಹಿಳೆಯರು ಸೇರಿ ಆಕೆಗೆ ಬಸ್ಸಿನಿಂದ ಕೆಳಗೆ ಇಳಿ ಎನ್ನುತ್ತಾರೆ. ಇದರಿಂದ ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳಿಗೆ ಪ್ರಶ್ನಿಸುವ ಛಲ ಬಂದಿದೆ ಎಂಬುದು ಖಚಿತವಾಗಿದೆ. ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದು ದಳ, ಬಿಜೆಪಿಗೆ ಮತ ಹಾಕುವ ಮಹಿಳೆಯರಿಗೆ ಹೆಣ್ಣು ಮಕ್ಕಳು ಬುದ್ಧಿವಾದ ಹೇಳುವಂತೆ ಮನವಿ ಮಾಡಿದರು.
ಬಾಕ್ಸ್................
ಕನಕಪುರ: ನಮಗೆ ಕೆಟ್ಟ ಹೆಸರು ತರಬೇಕು, ನಮ್ಮ ಕಾರ್ಯಕರ್ತರು ಚುನಾವಣೆಯಲ್ಲಿ ಭಾಗವಹಿಸದಂತೆ ಮಾಡಲು ಬಿಜೆಪಿ ಐಟಿ ದಾಳಿ ಮಾಡಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೂರಿದರು.
ಯಾರ ಮನೆಗಳ ಮೇಲೆ ದಾಳಿ ನಡೆಯಬೇಕು ಎಂದು ಪಟ್ಟಿ ಮಾಡಿಕೊಂಡಿದ್ದಾರೆ. ಬೇರೆ ಕಡೆಗಳಲ್ಲಿ ಗುತ್ತಿಗೆದಾರರ ಮನೆಯಲ್ಲಿ ಹಣ ಸಿಕ್ಕರೂ ಇದು ಡಿ.ಕೆ.ಶಿವಕುಮಾರ್ ಅವರ ಹಣವೆಂದು ಹೇಳುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಗುರಿಯಾಗಿಸಿ ದಾಳಿ ಮಾಡುವ ಮೂಲಕ ಬೆದರಿಸುವ ಪ್ರಯತ್ನ ನಡೆಸುತ್ತಿದ್ದು, ಅವರ ಅಭ್ಯರ್ಥಿ ಸೋಲುತ್ತಾರೆ ಎಂಬ ಕಾರಣಕ್ಕೆ ಐಟಿ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಅನೇಕ ಕಡೆಗಳಲ್ಲಿ ನಮ್ಮ ಆಸ್ತಿಗಳನ್ನು ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ದಾನ ಮಾಡುವ ಮೂಲಕ ಬಿಟ್ಟುಕೊಟ್ಟಿದ್ದೇವೆ. ನಾವು ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿಲ್ಲ ಎಂಬುದು ತಾಲೂಕಿನ ಜನರಿಗೆ ತಿಳಿದಿದೆ ಎಂದರು.
ಈ ವೇಳೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್. ಕೃಷ್ಣಮೂರ್ತಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯ್ ದೇವ್, ನಗರಸಭಾ ಮಾಜಿ ಅಧ್ಯಕ್ಷ ಕೆ.ಎನ್.ದಿಲೀಪ್, ಕಾಂಗ್ರೆಸ್ ಮುಖಂಡರಾದ ಬಿ.ಎಸ್.ಗೌಡ, ಹೊಸಕೋಟೆ ಪುರುಷೋತ್ತಮ್, ರಾಯಸಂದ್ರ ರವಿ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ನೂರಾರು ಮುಖಂಡರು ಕಾರ್ಯಕರ್ತರಿದ್ದರು.