ಕನ್ನಡಪ್ರಭ ವಾರ್ತೆ ತಿಪಟೂರು
ಶಿಕ್ಷಣ ಕೇತ್ರದಲ್ಲಿ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮದಲ್ಲೊಂದಾದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಮಕ್ಕಳ ದಾಖಲಾತಿ ಹೆಚ್ಚಿಸುವ ಸಲುವಾಗಿ ಆಯೋಜಿಸಿದ್ದು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಜವಾಬ್ದಾರಿಯಿಂದ ಕೆಲಸ ಮಾಡಿ ದಾಖಲಾತಿ ಹೆಚ್ಚಿಸಬೇಕೆಂದು ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಉಚಿತ ಸಮವಸ್ತ್ರ, ಶೂ, ಸಾಕ್ಸ್, ಪಠ್ಯಪುಸ್ತಕ, ಬಿಟಿಯೂಟ, ಹಾಲು, ಮೊಟ್ಟೆ, ಬಾಳೆಹಣ್ಣು, ರಾಗಿ ಮಾಲ್ಟ್ ವಿತರಣೆ ಮಾಡುವ ಜೊತೆಗೆ ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ಪ್ರೋತ್ಸಾವನ್ನು ನೀಡುತ್ತಿವೆ. ಅಲ್ಲದೆ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಸರ್ಕಾರ ಅನುದಾನ ನೀಡುತ್ತಾ ಮೂಲಭೂತ ಸೌಕರ್ಯ, ಗುಣಮಟ್ಟದ ಶಿಕ್ಷಣವನ್ನು ಕಲ್ಪಿಸಿದೆ. ಶಿಕ್ಷಕರು ಶ್ರದ್ದೆ, ಬದ್ದತೆಯಿಂದ ಉತ್ತಮ ಬೋಧನೆ ಮಾಡಿ ಮಕ್ಕಳ ಶೈಕ್ಷಣಿಕ ಭವಿಷ್ಯದ ಬೆಳವಣಿಗೆಗೆ ಶ್ರಮಿಸಬೇಕೆಂದರು. ನಗರಸಭಾ ಅಧ್ಯಕ್ಷೆ ಯಮುನಾ ಧರಣೇಶ್ ಮಾತನಾಡಿ, ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವುದರಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು, ಬಿ.ಆರ್‌ಸಿ, ಸಿಆರ್‌ಪಿ ಹಾಗೂ ಶಿಕ್ಷಕರುಗಳು ಸರ್ಕಾರಿ ಶಾಲೆಗಳಲ್ಲಿ ಸಿಗುವ ಎಲ್ಲಾ ಸೌಲಭ್ಯಗಳ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಿ ಶಾಲಾ ದಾಖಲಾತಿ ಹೆಚ್ಚಿಸುವತ್ತ ಗಮನಹರಿಸುವಂತೆ ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ ಮಾತನಾಡಿ, ಶಿಕ್ಷಣ ಸಚಿವರ ಮಹದಾಸೆಯಂತೆ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಿಸುವ ಸಂಬಂಧ ಶೈಕ್ಷಣಿಕ ಸಂವಾದ ಮತ್ತು ಜಾಗೃತಿಯನ್ನು ಪೋಷಕರಲ್ಲಿ ಮೂಡಿಸುವ ಸಲುವಾಗಿ ತಾಲೂಕು ಹಂತದಲ್ಲಿ ಇಂತಹ ಪ್ರೇರಣಾತ್ಮಕ ಶಾಲಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ ಉಚಿತ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಉಮೇಶ್‌ಗೌಡ, ಉಪನ್ಯಾಸಕ ಷಡಕ್ಷರಿ, ಅಜೀಂ ಪ್ರೇಮ್‌ಜಿ ಫೌಂಡೇಶನ್ ಫಾರ್ ಡೆವಲಪ್‌ಮೆಂಟ್‌ನ ಸಂಪನೂಲ ವ್ಯಕ್ತಿಗಳು, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶಿವಶಂಕರ್, ಪ್ರಾಂಶುಪಾಲ ಜಿ.ಎಸ್. ರಘು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾ. ಅಧ್ಯಕ್ಷ ಜಯರಾಂ, ಸಿಆರ್‌ಪಿಗಳು, ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರು, ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.