ಕೋಲಾರ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಜನರ ಸಮಸ್ಯೆಗಳು, ಕೃಷಿ ಸಮಸ್ಯೆಗಳ ಬಗ್ಗೆ ಕಿಂಚತ್ತು ಕಾಳಜಿಯಿಲ್ಲ. ಎರಡೂ ಸರ್ಕಾರಗಳು ಸಮಸ್ಯೆಗಳತ್ತ ಗಮನ ಹರಿಸದಿದ್ದರೆ ಬೃಹತ್ ರೈತರ ಹಕ್ಕೊತ್ತಾಯಿಸಿ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಮುಖಂಡ ಎಚ್.ಆರ್.ಬಸವರಾಜ್ ಎಚ್ಚರಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ನೀರಿನ ಹಕ್ಕು ಮತ್ತು ರೈತರ ಹಕ್ಕಿಗಾಗಿ ಹೋರಾಟಕ್ಕೆ ಚಾಲನೆ ನೀಡಲಾಗಿದೆ, ರೈತ ಸಂಘವು ಕಳೆದ ೧೯೮೦ರಿಂದ ನಡೆದು ಬಂದ ಹಾದಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
೧೯೮೨ರಲ್ಲಿ ಕಂದಾಯ ವಸೂಲಾತಿಗೆ ಸಂಬಂಧಿಸಿದಂತೆ ತಮ್ಮ ಕುಟುಂಬದಲ್ಲಿ ೫- ೧೦ ಸಾವಿರ ರು. ಸಾಲ ವಸೂಲಾತಿಗೆ ಮನೆಯಲ್ಲಿ ನಡೆದ ದವಸ ಧಾನ್ಯದ ಜಪ್ತಿಯ ಘಟನೆ ನಂತರ ತಾವು ರೈತರ ಸಂಘವನ್ನು ಸಂಘಟಿಸಿಕೊಂಡು ನಡೆಸಿದ ಹೋರಾಟ ನಂತರದಲ್ಲಿ ಅಂದಿನ ತಹಸೀಲ್ದಾರ್ ಮನೆಯನ್ನೇ ಜಫ್ತಿ ಮಾಡುವ ಮೂಲಕ ಪ್ರತಿಕಾರ ತೀರಿಸಿಕೊಂಡ ಬಗ್ಗೆ ವಿವರಿಸಿದರು.ರೈತರು ಕೃಷಿ ಚಟುವಟಿಕೆಗೆ ಬಳಿಸುವ ಐಪಿ ಪಂಪ್‌ಸೆಟ್ ಆರ್.ಆರ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡಬಾರದು, ವಿದ್ಯುತ್ ಸಂರ್ಪಕ ಪಡೆಯಲು ಸ್ವಯಂ ಆರ್ಥಿಕ ಯೋಜನೆ ಕೈಬಿಡಬೇಕು. ಅಕ್ರಮ- ಸಕ್ರಮ ಮುಂದುವರೆಸಬೇಕು. ವಿದ್ಯುತ್ ಖಾಸಗೀಕರಣ ನಿಲ್ಲಿಸಬೇಕು. ಮಂಜೂರಾಗಿರುವ ಸಾಗುವಳಿ ಚೀಟಿ ನೀಡಿ ಜಮೀನುಗಳ ಪೋಡಿ ಅದಾಲತ್ ನಡೆಸಬೇಕು. ಕನಿಷ್ಠ ಬೆಂಬಲ ಬೆಲೆ ಕಾನೂನಾತ್ಮಕವಾಗಿ ಘೋಷಿಸಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಬೇಕು. ಬ್ಯಾಂಕ್‌ಗಳು ಬಲವಂತದ ಸಾಲ ವಸೂಲಾತಿ ನಿಲ್ಲಿಸಬೇಕು. ಜಫ್ತಿ ಮಾಡಿರುವುದನ್ನು ವಾಪಸ್ ನೀಡಬೇಕು. ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಇತ್ಯಾದಿ ಹಕ್ಕೊತ್ತಾಯಗಳನ್ನು ಮಂಡಿಸಿದರು.
ನಮ್ಮ ನಾಯಕರು ಅಧಿವೇಶನದಲ್ಲಿ ಬೆಂಗಳೂರು ಕೊಳಚೆ ನೀರನ್ನು ಅಂಗಲಾಚಿ ಪಡೆದು ಅದಕ್ಕೆ ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ಎಂದು ಹೆಸರಿಸಿದ್ದಾರೆ. ಈ ನೀರನ್ನು ಮೂರು ಬಾರಿ ಸಂಸ್ಕರಿಸಿ ತರುವ ಬದಲು ಎರಡು ಬಾರಿ ಸಂಸ್ಕರಿಸಿ ಹರಿಸಿ, ಕುಡಿಯುವ ನೀರಿನ ಕೆರೆಗಳನ್ನು ತುಂಬಿಸುತ್ತಿರುವುದು ಅಪಾಯಕಾರಿ, ಮುಂದಿನ ೧೦ ವರ್ಷಗಳಲ್ಲಿ ಜನತೆ ಕ್ಯಾನ್ಸರ್ ಪೀಡಿತರಾಗಿ ಆಸ್ಪತ್ರೆಗಳಿಗಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ, ಮುಂದಿನ ನಮ್ಮ ಪೀಳಿಗೆಗಳು ನೀಡುವ ಶಾಪ ತಟ್ಟಲಿದೆ ಎಂದು ಎಚ್ಚರಿಸಿದರು.
ಅವಳಿ ಜಿಲ್ಲೆಯ ಜನತೆಯ ಉದಾಸೀನತೆ ಫಲವಾಗಿ ನಮ್ಮ ಹೋರಾಟದ ಫಲದ ಯೋಜನೆಯನ್ನು ಬೇರೆಯವರು ಪಡೆದುಕೊಳ್ಳುವಂತಾಯಿತು. ೨೪ ಟಿಎಂಸಿ ನೀರಿನ ನಿರೀಕ್ಷೆಯು ೮ ಟಿಎಂಸಿಗೆ ಇಳಿಗೆಯಾಗಿರುವ ಹಿನ್ನೆಲೆ ನಮಗೆ ನೀರು ಸಿಗುವುದು ಕಷ್ಟಸಾಧ್ಯ ಎಂಬ ಸಂಶಯ ವ್ಯಕ್ತಪಡಿಸಿದರು,