ನಮ್ಮದು ತುಕ್ಡೇ ತುಕ್ಡೇ ಗ್ಯಾಂಗ್‌ ಆದ್ರೆ ಎನ್‌ಡಿಎ ಒಕ್ಕೂಟ ಯಾವ ಗ್ಯಾಂಗ್‌: ಸತೀಶ್ ಜಾರಕಿಹೊಳಿ

KannadaprabhaNewsNetwork | Updated : Apr 15 2024, 12:01 PM IST

ಸಾರಾಂಶ

ಕಾಂಗ್ರೆಸ್ ಗ್ಯಾರಂಟಿಗಳನ್ನು ಕಾಪಿ ಮಾಡಿ, ಗ್ಯಾರಂಟಿ ಅಂತ ಬಿಜೆಪಿಯವರು ಸಹ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ನಮ್ಮ ನಾಯಕರೆಲ್ಲರೂ ಹೇಳಿದ್ರು, ಅದರಂತೆಯೇ ಬಿಜೆಪಿಯವರು ಕಾಪಿ ಮಾಡಿದ್ದಾರೆ.

ಕೂಡ್ಲಿಗಿ: ಮೋದಿಯವರ ಎನ್‌ಡಿಎ ಮೈತ್ರಿಕೂಟದಲ್ಲಿ 36 ಪಕ್ಷ ಇದೆ ಅಲ್ವಾ, ಎನ್‌ಡಿಎ ಒಕ್ಕೂಟ ಅಲ್ವಾ? ಮತ್ತು ಅವರು ಯಾವ ಗ್ಯಾಂಗ್? ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.

ಅವರು ಭಾನುವಾರ ಸಂಜೆ ಕೂಡ್ಲಿಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ ಪರ ರೋಡ್ ಶೋದಲ್ಲಿ ಭಾಗವಹಿಸುವ ಮುಂಚೆ ಗಾಂಧೀಜಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಕಾಂಗ್ರೆಸ್ ತುಕ್ಡೇ ತುಕ್ಡೇ ಗ್ಯಾಂಗ್ ಎಂಬ ಪಿಎಂ ಮೋದಿ ಮಾತಿಗೆ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದರು.

ಕಾಂಗ್ರೆಸ್ ಗ್ಯಾರಂಟಿಗಳನ್ನು ಕಾಪಿ ಮಾಡಿ, ಗ್ಯಾರಂಟಿ ಅಂತ ಬಿಜೆಪಿಯವರು ಸಹ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ನಮ್ಮ ನಾಯಕರೆಲ್ಲರೂ ಹೇಳಿದ್ರು, ಅದರಂತೆಯೇ ಬಿಜೆಪಿಯವರು ಕಾಪಿ ಮಾಡಿದ್ದಾರೆ ಎಂದರು.

ಗೋ ಬ್ಯಾಕ್ ಸಲ್ಲದು:  ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ ನಾಸೀರ್ ಹುಸೇನ್ ಅವರದ್ದೇನೂ ತಪ್ಪಿಲ್ಲ. ಅದು ತನಿಖೆಯಾಗುತ್ತಿದೆ. ಈ ಸಮಯದಲ್ಲಿ ನಾಸಿರ್‌ ಅವರಿಗೆ ಬಳ್ಳಾರಿಯಲ್ಲಿ ಗೋ ಬ್ಯಾಕ್ ಹೇಳಿರುವುದು ಸರಿಯಲ್ಲ ಎಂದರು.

ನಾವು ಬಳ್ಳಾರಿಗೆ ಪ್ರಚಾರಕ್ಕೆ ಬಂದಿದ್ದೇವೆ, ನಮಗೆ ಕಾಂಗ್ರೆಸ್ ಪರ ವಾತಾವರಣವಿದೆ. ತುಕಾರಾಂ ಗೆಲ್ತಾರೆ ಅನ್ನೋ ನಿರೀಕ್ಷೆ ಇದೆ. ನಮಗೆ ಎಲ್ಲಿ ಸಮಯ ಸಿಗ್ತಿದೆಯೋ ಅಲ್ಲಿ ಪ್ರಚಾರ ಮಾಡ್ತಿದ್ದೇವೆ. ನಮ್ಮ ಅಧ್ಯಕ್ಷರು ಕೂಡ ಬರ್ತಾರೆ, ಸಿಎಂ ಸಿದ್ದರಾಮಯ್ಯ ಕೂಡ ಬರ್ತಾರೆ. ಪ್ರಚಾರ ಮಾಡ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಲೋಕಸಭೆ ಚುನಾವಣೆ ಬಳಿಕ ಸಿಎಂ ಬದಲಾಗುವ ಪ್ರಶ್ನೆಯೇ ಇಲ್ಲ. ಅವರಿಗೆ ಜನಾದೇಶವಿದೆ, ಬದಲಾವಣೆ ಸಾಧ್ಯವಿಲ್ಲ. ಹೈಕಮಾಂಡ್ ಸಿಎಂ ಮಾಡಿದೆ, ಅವರಿಗೆ ಉತ್ತಮ ಮುಖ್ಯಮಂತ್ರಿ ಎಂಬ ಬಿರುದು ಕೂಡ ಇದೆ ಎಂದರು.

ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ಬಿಜೆಪಿ ನಾಯಕರು 28 ಸ್ಥಾನ ಗೆಲ್ಲುತ್ತೇವೆ ಎಂದು ಹೇಳ್ತಾರೆ. ನಾವೂ ಹೇಳ್ತೇವೆ. ನಾವು 28 ಗೆಲ್ತೇವೆ. ಜೆಪಿಯವರೂ ಗೆಲ್ತೇವೆ ಅಂತಿದ್ದಾರೆ, ಇವಿಎಂ ಮಷೀನ್ ಗಳೇನಾದ್ರೂ ಸೆಟ್ ಮಾಡಿಕೊಂಡಿದ್ರೆ ಗೆಲ್ಲಬಹುದು ಎಂದು ತಿಳಿಸಿದರು. ಬಿಜೆಪಿಯವರಿಗೆ ಮತ ಕೇಳೋ ನೈತಿಕತೆ ಇಲ್ಲ ಎಂದರು.

ನಮಗೆ ನೈತಿಕತೆ ಇದೆ, ನಾವು ಪಂಚ ಗ್ಯಾರಂಟಿ ಜಾರಿ ಮಾಡಿದ್ದೇವೆ. ನಮ್ಮ ಯೋಜನೆಗಳು ನಮಗೆ ಕೈ ಹಿಡಿಯುತ್ತವೆ. ಬಿಟ್ಟಿ ಯೋಜನೆ ಅಂತ ಬಿಜೆಪಿಯರು ಟೀಕೆ ಮಾಡಿದ್ರು. ಬರ ಇದೆ, ಜನ ಗುಳೆ ಹೋಗ್ತಿದ್ರು, ಅದನ್ನು ತಡೆಯಲಾಗಿದೆ. ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿಲ್ಲ ಎಂದರು.

ಜನರಿಗೆ ಬುದ್ದಿ ಇಲ್ಲದೇ ಬಿಜೆಪಿಗೆ 10 ವರ್ಷ ಆಡಳಿತ ಕೊಟ್ಟಿದ್ದಾರೆ. ಇದರಿಂದ ಯಾರಿಗೆ ಉಪಕಾರವಾಗಿಲ್ಲ. ಅದಾನಿ, ಅಂಬಾನಿಗೆ ಮಾತ್ರ ಸಹಾಯ ಮಾಡಿದ್ದಾರೆ. ಬಡವರು, ರೈತರಿಗೆ ಸಹಾಯ ಮಾಡಿಲ್ಲ. ನಾವು ಕನಿಷ್ಠ 15-20 ಸೀಟ್ ಗೆಲ್ಲುತ್ತೇವೆ ಎಂದು ತಿಳಿಸಿದರು.‌

ಕೂಡ್ಲಿಗಿಯಲ್ಲಿ ಅಬ್ಬರ ಪ್ರಚಾರ:

ತಾಲೂಕಿನಲ್ಲಿ ಕಾಂಗ್ರೆಸ್ ನಿಂದ ಭರ್ಜರಿ ಪ್ರಚಾರ ನಡೆಯಿತು. ತಾಲೂಕು ಕ್ರೀಡಾಂಗಣದಲ್ಲಿರುವ ಗಾಂಧೀಜಿ ಚಿತಾಭಸ್ಮವಿರುವ ಸ್ಥಳದಿಂದ ರೋಡ್ ಶೋ ಪಟ್ಟಣದ ಅಂಬೇಡ್ಕರ್ ಹಾಗೂ ವಾಲ್ಮೀಕಿ ವೃತ್ತದ ವರೆಗೆ ಕಾರ್ಯಕರ್ತರ ಒಗ್ಗೂಡಿಸಿ ರೋಡ್ ಶೋ ನಡೆಯಿತು. ಮಾಜಿ ಸಚಿವ ಎನ್.ಎಂ ನಬಿ ಸಾಥ್ ನೀಡಿದರು. ವಿಜಯನಗರ ಕಾಂಗ್ರೆಸ್ ಭದ್ರಕೋಟೆ. ಅದನ್ನು ಮತ್ತೆ ಭದ್ರಪಡಿಸುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಹೇಳಿದರು.

Share this article