ಶಿರಹಟ್ಟಿ: ಶಿರಹಟ್ಟಿಯ ತಾಲೂಕು ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿಗಳನ್ನು ವಿತರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು, ಸೋಮವಾರ ಬೆಳಗ್ಗೆ ತಮಗೆ ನೀಡಿದ ಅವಧಿ ಮೀರಿದ ಔಷಧ ಹಾಗೂ ತಪಾಸಣಾ ಪುಸ್ತಕದಲ್ಲಿ ದಾಖಲಾಗಿರುವುದನ್ನು ಪ್ರದರ್ಶಿಸಿದರು.
ಮಾನಸಿಕ ಕಾಯಿಲೆಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಅವಧಿ ಮೀರಿದ ಔಷಧಿ ಸೇವನೆಯಿಂದ ದುಷ್ಪರಿಣಾಮ ಉಂಟಾಗುತ್ತಿದೆ. ಈ ಬಗ್ಗೆ ಕೇಳಿದರೆ ಈ ಔಷಧ ನಾವು ಪೂರೈಸಿಲ್ಲ ಎಂದು ಹೇಳುತ್ತಾರೆ. ಆದರೆ ಅವರೇ ಔಷಧಿ ವಿತರಿಸಿ, ಸಹಿ ಮಾಡಿ ನೀಡಿದ್ದಾರೆ ಎಂದು ಖಾನಾಪುರದ ಆಶಾಬಿ ದೊಡ್ಡಮನಿ ಆರೋಪಿಸಿದರು.
ದಲಿತ ಮುಖಂಡ ಪ್ರಕಾಶ ಬಡೆಣ್ಣವರ, ಶಿಶಿರ ಪಾಟೀಲ ಈ ಕುರಿತು ಆಡಳಿತ ವೈದ್ಯಾಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಆದರೆ ಅವರು ನಾವು ಔಷಧಿಯನ್ನೇ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ರೋಗಿಯ ಪುಸ್ತಕದಲ್ಲಿ ಔಷಧಿ ನೀಡಿ ಸಹಿ ಮಾಡಿದ್ದಾರೆ. ಶಿರಹಟ್ಟಿ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಿಂದ ಇಲ್ಲಿ ನಿತ್ಯವೂ ನೂರಾರು ರೋಗಿಗಳು ಬರುತ್ತಾರೆ. ಅವರಿಗೆ ಸಮರ್ಪಕ ಚಿಕಿತ್ಸೆ ಲಭಿಸುತ್ತಿಲ್ಲ. ಗರ್ಭಿಣಿಯರು, ಮಕ್ಕಳು ಸಕಾಲಕ್ಕೆ ಚಿಕಿತ್ಸೆ ಸಿಗದೇ ಬೇರೆ ಊರುಗಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಅವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.ವೈದ್ಯರು ರೋಗಿಗಳ ಮೇಲೆ ಹರಿಹಾಯುತ್ತಾರೆ. ಬೆದರಿಸುವ ತಂತ್ರ ಮಾಡುತ್ತಾರೆ. ಅವಧಿ ಮೀರಿದ ಔಷಧ ನೀಡಿದ ಕುರಿತು ಪ್ರಶ್ನಿಸಿದ ರೋಗಿ ಜತೆ ದರ್ಪದ ಮಾತನಾಡಿದ್ದಾರೆ ಎಂದು ಸಾರ್ವಜನಿಕರು ದೂರಿದರು.
ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಂತೆಯೇ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು, ಪ್ರತಿಭಟನಕಾರರಿಗೆ ಸಮಾಧಾನ ಹೇಳಲು ಅಥವಾ ಆರೋಪಗಳಿಗೆ ಉತ್ತರಿಸಲು ಯಾರೂ ಮುಂದೆ ಬರಲಿಲ್ಲ. ಆಸ್ಪತ್ರೆ ಸಿಬ್ಬಂದಿ ತಮ್ಮ ಪಾಡಿಗೆ ತಾವು ಕಾರ್ಯನಿರತರಾಗಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಲು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಗೋಪಾಲ್‌ರಾಜ್ ನಿರಾಕರಿಸಿದರು. ಆಸ್ಪತ್ರೆಯಲ್ಲಿ ನಡೆದಿರುವ ಎಲ್ಲ ಬೆಳವಣಿಗೆಗಳ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ ಅವರು, ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಚುಟುಕಾಗಿ ಉತ್ತರಿಸಿದರು.