ಹೊರವರ್ತುಲ ರಸ್ತೆ ಡಿಪಿಆರ್‌ ರೈತ ವಿರೋಧಿ

KannadaprabhaNewsNetwork |  
Published : Feb 22, 2026, 01:30 AM IST
್ಿಿ್ | Kannada Prabha

ಸಾರಾಂಶ

ಯಾವುದೇ ಕಾರಣಕ್ಕೂ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು

ಸರ್ಕಾರದ ಪ್ರಸ್ತಾಪಿತ ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಹೊರ ವರ್ತುಲ ರಸ್ತೆ ಡಿಪಿಆರ್ ಸಂಪೂರ್ಣ ರೈತ , ಜನವಿರೋಧಿಯಾಗಿದ್ದು, ಸರ್ಕಾರ ದಬ್ಬಾಳಿಕೆ, ದೌರ್ಜನ್ಯದ ಮೂಲಕ ರೈತರ ಫಲವತ್ತಾದ ಭೂಮಿ ಸ್ವಾಧೀನಕ್ಕೆ ಮುಂದಾಗಿದೆ. ಯಾವುದೇ ಕಾರಣಕ್ಕೂ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಯಾರಿಸಿರುವ ವಿಸ್ತೃತ ಯೋಜನಾ ವರದಿ (ಡಿಪಿಆರ್) ರೈತ, ಜನವಿರೋಧಿಯಾಗಿದೆ. ನಿಯಮ ಗಾಳಿಗೆ ತೂರಿ, ಭೂ ಮಾಫಿಯ ಕಪಿಮುಷ್ಠಿಗೆ ಸಿಲುಕಿ ರಿಂಗ್‌ ರಸ್ತೆ ಬದಲು, ಜಿಗ್‌ಜಾಗ್‌ ರಸ್ತೆ ಅಲೈನ್ ಮಾಡಿದ್ದು, ಓರ್ವ ರೈತನ ಮಗನಾಗಿ, ರೈತರಿಗೆ ಆಗುತ್ತಿರುವ ಅನ್ಯಾಯ ಸಹಿಸದೆ, ರಾಜಕೀಯ ರಹಿತವಾಗಿ ಬೆಂಬಲಕ್ಕೆ ನಿಂತಿದ್ದೇನೆ. ಈ ಹೋರಾಟದಿಂದ ನನ್ನ ರಾಜಕೀಯ ಜೀವನಕ್ಕೆ ಕುಂದುಂಟಾದರೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಭಾರತೀಯ ಭೂ ಸ್ವಾಧೀನ ಅಧಿನಿಯಮ-2013 ರ ಪ್ರಕಾರ, ಒಂದು ಯೋಜನೆಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ವೇಳೆ ಶೇ.80ರಷ್ಟು ರೈತರ ಒಪ್ಪಿಗೆ ಇರಬೇಕು. ನಿಯಮಾನುಸಾರ ರೈತರ ಒಪ್ಪಿಗೆ ಪಡೆಯಬೇಕು. ಆದರೆ ಗ್ರಾಮ ಸಭೆ ನಡೆಸದೆ, ಸಾಮಾಜಿಕ ಪರಿಣಾಮ ಲೆಕ್ಕ ಹಾಕದೆ, ರೈತರೊಂದಿಗೆ ಸಮಾಲೋಚನೆ ನಡೆಸದೆ, ಈ ಎಲ್ಲಾ ನಿಯಮ ಪಾಲಿಸಿರುವುದಾಗಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಅನುಮೋಧನೆ ಪಡೆಯಲು ಮುಂದಾಗಿದ್ದಾರೆ. ಕೇಂದ್ರ ಸಚಿವ ವಿ.ಸೋಮಣ್ಣ, ಜಿಲ್ಲಾಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಜಿಲ್ಲಾಧಿಕಾರಿ ಡಿಪಿಆರ್‌ಒಪ್ಪಿಕೊಳ್ಳದೆ ತಿರಸ್ಕರಿಸಬೇಕು. ಇಲ್ಲದಿದ್ದಲ್ಲಿ ಬೆಂಗಳೂರು ಗ್ರಾಮಾಂತರದ ಚನ್ನರಾಯಪಟ್ಟಣ ಹೋರಾಟದ ರೀತಿ, ನಿರಂತರ ಹೋರಾಟಕ್ಕೆ ರೈತರೊಂದಿಗೆ ಸಜ್ಜಾಗುವುದಾಗಿ ಗೌರಿಶಂಕರ್ ಎಚ್ಚರಿಸಿದರು.ಸರ್ಕಾರದ ಪ್ರಸ್ತಾಪಿತ ಔಟರ್‌ರಿಂಗ್‌ ರಸ್ತೆ ಹಾದು ಹೋಗುವ ಜಾಗದ ಸುಮಾರು 26 ಹಳ್ಳಿಗಳ 750ಕ್ಕೂ ಹೆಚ್ಚು ರೈತರ, 700 ಎಕರೆಗೂ ಹೆಚ್ಚು ಪ್ರದೇಶ ಭೂಸ್ವಾಧೀನಕ್ಕೆ ಗುರುತಿಸಲಾಗಿದೆ. ಸರ್ಕಾರದ ಅಧಿಕಾರಿಗಳ ಪ್ರಕಾರ, ಈ ಪ್ರದೇಶ ಶೇ.70ರಷ್ಟು ಒಣಭೂಮಿ ಎಂದು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ವಾಸ್ತವದಲ್ಲಿ ಶೇ.80 ಜಾಗದಲ್ಲಿ ತೆಂಗು, ಅಡಕೆ, ಮಾವು, ಸಪೋಟ, ಸೀಬೆ, ಬಟರ್ ಫ್ರೂಟ್ ಸೇರಿ ಹಲವು ಜಾತಿ ಹಣ್ಣಿನ ಗಿಡಗಳನ್ನು ಹೊಂದಿದ ನೀರಾವರಿ ಪ್ರದೇಶವಿದೆ. ಡಿಪಿಆರ್ ಸಿದ್ಧವಾಗಿ ವರ್ಷ ಕಳೆದರೂ ಸಂತ್ರಸ್ತ ರೈತರಿಗೆ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಾಕೀತು ಮಾಡಿದ ಮೇಲೆ ಭೂಮಿ ಕಳೆದುಕೊಳ್ಳುವ ರೈತರಿಗೆ ಡಿಪಿಆರ್ ನೀಡಲಾಗಿದೆ. ಜನರನ್ನು ಇಷ್ಟು ಕತ್ತಲಲ್ಲಿ ಇಟ್ಟುರಸ್ತೆ ಮಾಡುವ ಅಗತ್ಯವಾದರೂ ಏನಿದೆ? ಗುಬ್ಬಿಯಿಂದ ದಾಬಸ್‌ಪೇಟೆಯವರೆಗೆ 100 ಅಡಿಗಳ ನಕಾಸೆ ರಸ್ತೆಯಿದ್ದು, ಅದನ್ನು ತೆರವು ಮಾಡಿ ಅಭಿವೃದ್ದಿ ಪಡಿಸಲಿ ಎಂದು ಆಗ್ರಹಿಸಿದರು.ನಾವು ಅಭಿವೃದ್ಧಿ ವಿರೋಧಿಗಳಲ್ಲ. ಆದರೆ ರೈತರ ಬದುಕು, ಕೃಷಿ, ಪರಿಸರ ಹಾಗೂ ಗ್ರಾಮೀಣ ಆರ್ಥಿಕತೆ ಹಾಳುಮಾಡುವ ಅಭಿವೃದ್ಧಿ ಮಾದರಿಯನ್ನು ಒಪ್ಪಲಾಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರ ಅನುಮತಿ ಮತ್ತು ಪಾರದರ್ಶಕತೆ ಅತ್ಯಗತ್ಯ. ಸರ್ಕಾರ ತಕ್ಷಣ ರೈತರೊಂದಿಗೆ ಸಂವಾದ ನಡೆಸಿ ನ್ಯಾಯಸಮ್ಮತ ಹಾಗೂ ಪರಿಸರ ಸ್ನೇಹಿ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲು ನಾವು ಬದ್ಧ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಭೈರಸಂದ್ರ ರಮೇಶ್, ಪಾಲನೇತ್ರಯ್ಯ, ಹೊಸಹಳ್ಳಿ ಲಿಂಗರಾಜು, ಹೆತ್ತೇನಹಳ್ಳಿ ಮಂಜುನಾಥ್, ನರಸಿಂಹಯ್ಯ, ರಾಜಶೇಖರ್, ಸುರೇಶ್, ಪ್ರಕಾಶ್ ಸೇರಿದಂತೆ ನಂದಿಹಳ್ಳಿ, ಭೈರಸಂದ್ರ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಂಡವಪುರ: ಬೇಬಿ ಬೆಟ್ಟ ಜಾತ್ರೆಯಲ್ಲಿ ಎತ್ತುಗಳ ಆಕರ್ಷಣೆ
ಭಿನ್ನತೆಗಳ ಮರೆತು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇನೆ