ಭತ್ತ ಖರೀದಿ ಕೇಂದ್ರ ತೆರೆಯದ ಜಿಲ್ಲಾಡಳಿತ, ಸರ್ಕಾರದ ವಿರುದ್ಧ ಆಕ್ರೋಶ

KannadaprabhaNewsNetwork |  
Published : Jan 04, 2025, 12:33 AM IST
3ಕೆಎಂಎನ್ ಡಿ20 | Kannada Prabha

ಸಾರಾಂಶ

ಚಂಡಮಾರುತದಿಂದ ಅಕಾಲಿಕ ಮಳೆಯಿಂದ ಭತ್ತ ಬೆಳೆಗಾರರು ನಷ್ಟಕ್ಕೆ ಒಳಗಾದ ವೇಳೆ ಜಿಲ್ಲಾಡಳಿತ ತಹಸೀಲ್ದಾರ್, ಕೃಷಿ ಇಲಾಖೆ ಮೂಲಕ ಸಮೀಕ್ಷೆ ನಡೆಸಿ ನಷ್ಟದ ವರದಿ ಪಡೆದುಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿ ಸೂಕ್ತ ಪರಿಹಾರ ನೀಡಿಲ್ಲ ಎಂದು ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಭತ್ತ ಖರೀದಿ ಕೇಂದ್ರ ತೆರೆಯದೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ, ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತ ಕಾರ್ಯಕರ್ತರು, ರೈತ ಸಮೂಹಕ್ಕೆ ಮೋಸ ಮಾಡುತ್ತಿರುವ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತರು ಬೆಳೆದ ಭತ್ತದ ಬೆಳೆಯನ್ನು ಕಟಾವು ಮಾಡಲಾಗಿದ್ದರೂ ಸರ್ಕಾರ ನವೆಂಬರ್ ತಿಂಗಳಲ್ಲಿ ಭತ್ತ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯಡಿ ಭತ್ತ ಖರೀದಿ ಮಾಡದೆ ವಂಚನೆ ಮಾಡಿದೆ ಎಂದು ದೂರಿದರು.

ಜಿಲ್ಲೆಯಲ್ಲಿ ರೈತರು ಸುಮಾರು 57,000 ಹೆಕ್ಟರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದಾರೆ. ಜುಲೈನಲ್ಲಿ ನಾಟಿ ಮಾಡಿ ನವೆಂಬರ್, ಡಿಸೆಂಬರ್ ನಲ್ಲಿ ಕಟಾವು ಮಾಡಿದ್ದಾರೆ. ಆದರೆ, ಇದುವರೆಗೂ ಖರೀದಿ ಕೇಂದ್ರ ತೆರೆದಿಲ್ಲ ಎಂದು ಕಿಡಿಕಾರಿದರು.

ಪ್ರತಿ ಕ್ವಿಂಟಲ್ ಗೆ 2300 ರು. ಬೆಂಬಲ ಬೆಲೆ ನಿಗದಿ ಮಾಡಿದ್ದರೂ ದಲ್ಲಾಳಿಗಳು ಕ್ವಿಂಟಲ್ ಭತ್ತವನ್ನು 1800 ರಿಂದ 2000 ರು. ಗೆ ಖರೀದಿ ಮಾಡುತ್ತಿದ್ದಾರೆ. ರೈತರ ಅಸಹಾಯಕತೆ ದುರುಪಯೋಗಪಡಿಸಿಕೊಂಡು ದಲ್ಲಾಳಿಗಳು ಕಡಿಮೆ ದರಕ್ಕೆ ಭತ್ತ ಖರೀದಿ ಮಾಡಿ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೇರಳ ರಾಜ್ಯದಲ್ಲಿ ಎಡರಂಗ ಸರ್ಕಾರ ಭತ್ತ ಬೆಳೆಯಲು ರೈತರಿಗೆ ಎಕರೆಗೆ 10,000 ರು. ಪ್ರೋತ್ಸಾಹ ಧನ ಮತ್ತು ಕ್ವಿಂಟಲ್ ಭತ್ತಕ್ಕೆ ಬೆಂಬಲ ಬೆಲೆಯ ಜೊತೆಗೆ ಹೆಚ್ಚುವರಿಯಾಗಿ 800 ರು. ಗಳನ್ನು ನೀಡುತ್ತಿದೆ. ಆದರೆ, ನಮ್ಮ ರಾಜ್ಯಲ್ಲಿ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವರ್ಷ ಭತ್ತವನ್ನು ಪ್ರತಿ ಕ್ವಿಂಟಲ್ ಗೆ 3500 ರು.ವರೆಗೆ ದಲ್ಲಾಳಿಗಳು ಖರೀದಿ ಮಾಡಿದ್ದರು. ಈಗ ಕೇವಲ 1800 ರು. ರಿಂದ 2000 ರು.ಗೆ ಖರೀದಿ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಕೋಟ್ಯಾಂತರ ರು. ನಷ್ಟವಾಗಿದೆ. ಕೃಷಿ ಸಚಿವರು ಜಿಲ್ಲೆಯವರೇ ಆಗಿದ್ದರೂ ಕೃಷಿಕರಿಗೆ ಪ್ರಯೋಜನ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಚಂಡಮಾರುತದಿಂದ ಅಕಾಲಿಕ ಮಳೆಯಿಂದ ಭತ್ತ ಬೆಳೆಗಾರರು ನಷ್ಟಕ್ಕೆ ಒಳಗಾದ ವೇಳೆ ಜಿಲ್ಲಾಡಳಿತ ತಹಸೀಲ್ದಾರ್, ಕೃಷಿ ಇಲಾಖೆ ಮೂಲಕ ಸಮೀಕ್ಷೆ ನಡೆಸಿ ನಷ್ಟದ ವರದಿ ಪಡೆದುಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿ ಸೂಕ್ತ ಪರಿಹಾರ ನೀಡಿಲ್ಲ ಎಂದು ಕಿಡಿಕಾರಿದರು.

ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಿ ಖರೀದಿ ಕೇಂದ್ರ ತೆರೆಯಬೇಕು. ಪ್ರತಿ ಕ್ವಿಂಟಲ್ ಭತ್ತಕ್ಕೆ 3000 ರು. ಬೆಂಬಲ ಬೆಲೆ ನಿಗದಿ ಮಾಡಬೇಕು, ಕೇರಳದ ಎಡರಂಗ ಸರ್ಕಾರದ ಮಾದರಿಯಲ್ಲಿ ಪ್ರತಿ ಎಕರೆಗೆ 10,000 ರು. ಪ್ರೋತ್ಸಾಹ ಧನ, ಹೆಚ್ಚುವರಿಯಾಗಿ ಬೆಂಬಲ ಬೆಲೆಯ ಜೊತೆಗೆ ಕ್ವಿಂಟಲ್ ಗೆ 700 ರು. ನೀಡಬೇಕು ಎಂದು ಒತ್ತಾಯಿಸಿದರು.

ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿ ಮಾಡುತ್ತಿರುವ ಖಾಸಗಿ ದಲ್ಲಾಳಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು, ಚಂಡ ಮಾರುತದ ಮಳೆಹಾನಿಗೆ ಒಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್ ರಾಜ್, ಸಹ ಸಂಚಾಲಕ ಎನ್. ಲಿಂಗರಾಜಮೂರ್ತಿ, ಮಹಾದೇವ, ಸತೀಶ್, ಕುಳ್ಳೇಗೌಡ, ಗುರುಸ್ವಾಮಿ, ಶ್ರೀನಿವಾಸ್, ರಾಮಣ್ಣ, ಅಬ್ದುಲ್ ಸೂಕರ್, ದೊರೆಸ್ವಾಮಿ, ಶಿವಕುಮಾರ್, ಚಿಕ್ಕ ರಾಜಮ್ಮ , ಮೂರ್ತಿ, ಲಿಂಗೇಗೌಡ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!