ಲಾಠಿ ಚಾರ್ಜ್‌ ಖಂಡಿಸಿ ಸರ್ಕಾರದ ವಿರುದ್ಧ ಆಕ್ರೋಶ

KannadaprabhaNewsNetwork | Published : Dec 13, 2024 12:45 AM

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ವೇಳೆ ನಡೆದ ಲಾಠಿ ಚಾರ್ಜ್ ಖಂಡಿಸಿ ಮತ್ತು ಮುಖ್ಯಮಂತ್ರಿಗಳು ಪಂಚಮಸಾಲಿ ಸಮುದಾಯ ಹಾಗೂ ಸ್ವಾಮೀಜಿಗಳ ಕ್ಷಮೆ ಕೇಳಬೇಕು, ಪ್ರತಿಭಟನಾಕಾರರ ಮೇಲೆ ಹಾಕಿದ ಕೇಸ್‌ಗಳನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿ ಪಂಚಮಸಾಲಿ ಸಮುದಾಯದ ಇಂಡಿ ತಾಲೂಕು ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ವೇಳೆ ನಡೆದ ಲಾಠಿ ಚಾರ್ಜ್ ಖಂಡಿಸಿ ಮತ್ತು ಮುಖ್ಯಮಂತ್ರಿಗಳು ಪಂಚಮಸಾಲಿ ಸಮುದಾಯ ಹಾಗೂ ಸ್ವಾಮೀಜಿಗಳ ಕ್ಷಮೆ ಕೇಳಬೇಕು, ಪ್ರತಿಭಟನಾಕಾರರ ಮೇಲೆ ಹಾಕಿದ ಕೇಸ್‌ಗಳನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿ ಪಂಚಮಸಾಲಿ ಸಮುದಾಯದ ಇಂಡಿ ತಾಲೂಕು ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಟೈರ್‌ಗಳಿಗೆ ಬೆಂಕಿ ಹಚ್ಚಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ವಿ.ಎಚ್‌.ಬಿರಾದಾರ, ಮಾಜಿ ಶಾಸಕ ರವಿಕಾಂತ ಪಾಟೀಲ, ಕಾಸುಗೌಡ ಬಿರಾದಾರ, ಮಲ್ಲಿಕಾರ್ಜುನ ಕಿವಡೆ, ಭೀಮನಗೌಡ ಪಾಟೀಲ, ಅಯುಬ್‌ ನಾಟೀಕಾರ, ಪಂಚಮಸಾಲಿ ಸಮುದಾಯ ಯಾವುದೇ ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡಿಲ್ಲ. ನ್ಯಾಯಾಂಗ ಹೋರಾಟ ಮಾಡುತ್ತಿರುವವರ ಮೇಲೆ ಅಮಾನುಷವಾಗಿ ಲಾಠಿ ಚಾರ್ಜ್‌ ಮಾಡಿರುವುದು ಖಂಡನೀಯ. ನ್ಯಾಯಯುತ ಬೇಡಿಕೆಗಾಗಿ ನಡೆಸಿದ ಹೋರಾಟಗಾರರ ಮೇಲೆ ನಡೆಸಿದ ಲಾಠಿ ಚಾರ್ಜ್‌ ಹಿಂದೆ ದುರುದ್ದೇಶ ಅಡಗಿದೆ. ಕೂಡಲೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು.ಮಾರಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಸುಮಾರು ಸಾವಿರಾರು ಜನರಿಗೆ ಗಂಭೀರ ಗಾಯಗಳಾಗಿದ್ದು, ಕೋಟ್ಯಾಂತರ ಜನರು ದುಃಖ ಅನುಭವಿಸುತ್ತಿದ್ದಾರೆ.

ಹೋರಾಟಗಾರರ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆಯನ್ನು ನಡೆಸಿದ್ದು ಇಂಡಿ ತಾಲೂಕ ಲಿಂಗಾಯತ ಪಂಚಮಸಾಲಿ ಸಮಾಜ ತೀವ್ರವಾಗಿ ಖಂಡಿಸುತ್ತದೆ. ಅಂದು 12 ನೇ ಶತಮಾನದಲ್ಲಿ ಮಂತ್ರಿ ಕೊಂಡಿಮಂಚಣ್ಣ ಲಿಂಗಾಯತರ ಮೇಲೆ ಹತ್ಯೆ ಮಾಡಿಸಿದ್ದರು. ಅದೇ ರೀತಿ ಇಂದು 21ನೇ ಶತಮಾನದಲ್ಲಿ ಲಿಂಗಾಯತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚಮಸಾಲಿಗಳ ಮೇಲೆ ಗುಂಡಾಗಿರಿ ಹಾಗೂ ಲಾಟಚಾರ್ಜ್ ಮಾಡಿಸಿ ನಮ್ಮ ರಕ್ತ ಹರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಸ್ವತಃ ಲಾಟಿ ಹಿಡಿದು ಸ್ವ ಹಿತಾಸಕ್ತಿ ತೋರಿ ಪಂಚಮಸಾಲಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಆರ್.ಹಿತೇಂದ್ರ ಅವರನ್ನು ಕೂಡಲೇ ಸೇವೆಯಿಂದ ವಜಾ ಗೊಳಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ತಹಸೀಲ್ದಾರ್‌ ಬಿ.ಎಸ್‌.ಕಡಕಭಾವಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಅನಿಲಗೌಡ ಬಿರಾದಾರ, ರವಿಗೌಡ ಪಾಟೀಲ, ಬಾಳು ಮುಳಜಿ, ಶಿವಾನಂದ ಚಾಳಿಕಾರ, ಶಿವಾನಂದ ಮಲಕಗೊಂಡ, ಸೋಮು ದೇವರ, ಶ್ರೀಶೈಲಗೌಡ ಬಿರಾದಾರ, ಸುನೀಲಗೌಡ ಬಿರಾದಾರ, ಪಾಪು ಕಿತ್ತಲಿ, ಭೀಮಾಶಂಕರ ಮುರಗುಂಡಿ, ರಮೇಶ ರಾಠೋಡ, ರಾಘು ಕುಡಿಗನೂರ, ಮಂಜು ದೇವರ, ಸಂತೋಷ ದೇವರ, ಪ್ರಭು ಹೊಸಮನಿ, ದೇವೆಂದ್ರ ಕುಂಬಾರ, ಮಹೇಶ ಕುಂಬಾರ, ಪ್ರಭುಗೌಡ ಪಾಟೀಲ, ಭೀಮರಾಯಗೌಡ ಮದರಖಂಡಿ, ಶಾಂತು ಶಿರಕನಹಳ್ಳಿ, ಸುರೇಶ ಶಿವೂರ,ಸಂಗಣ್ಣ ಹೊಸೂರ, ದೇವೆಂದ್ರ ಬರಡೋಲ, ಪ್ರಶಾಂತ ಲಾಳಸಂಗಿ, ಅಂಬಣ್ಣ ಕವಟಗಿ, ಶಿವು ತಾಂಬೆ, ವಜ್ರಕಾಂತ ಕುಡಿಗನೂರ, ಸಂಗು ಬಿರಾದಾರ, ವಿಜು ಮಾನೆ ಮೊದಲಾದವರು ಪಾಲ್ಗೊಂಡಿದ್ದರು.

Share this article