ಪ್ರತಿ ವರ್ಷ ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ರಾಗಿ ಖರೀದಿ ಮಾಡಿ ಮತ್ತೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸುತ್ತಿದೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ತಾಲೂಕಿನ ರೈತರು ಬೆಳೆದಿರುವ ಉತ್ತಮ ಗುಣಮಟ್ಟದ ರಾಗಿಯನ್ನು ಪಕ್ಕದ ಆಂಧ್ರ ಸರ್ಕಾರಕ್ಕೆ ಮಾರಾಟ ಮಾಡಿ ಸ್ಥಳೀಯ ಪಡಿತರ ಚೀಟಿದಾರರಿಗೆ ಕಳಪೆ ಗುಣಮಟ್ಟದ ರಾಗಿ ವಿತರಿಸಲು ಆಹಾರ ಇಲಾಖೆ ಮುಂದಾಗಿರುವುದಕ್ಕೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.ಪ್ರತಿ ವರ್ಷ ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ರಾಗಿ ಖರೀದಿ ಮಾಡಿ ಮತ್ತೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸುತ್ತಿದೆ. ರಾಗಿಯನ್ನು ಸರ್ಕಾರ ಖರೀದಿಸುವಾಗ ಗುಣಮಟ್ಟವನ್ನು ಪರಿಶೀಲಿಸಿ ಎಲ್ಲವೂ ಚೆನ್ನಾಗಿದ್ದರೆ ಮಾತ್ರ ಪಡೆಯುವರು, ಹೀಗಿರುವಾಗ ಪಕ್ಕದ ಆಂಧ್ರ ಸರ್ಕಾರ ಅಲ್ಲಿನ ನ್ಯಾಯಬೆಲೆ ಅಂಗಡಿಗಳಲ್ಲಿಯೂ ಸಹ ರಾಗಿಯನ್ನು ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ಮುಂದಾಗಿದ್ದು ಆ ಕಾರಣಕ್ಕೆ ಪಟ್ಟಣದ ಕೆಎಫ್‌ಸಿ ಗೋದಾಮಿನಲ್ಲಿ ರೈತರಿಂದ ಸಂಗ್ರಹವಾಗಿರುವ ಉತ್ತಮ ರಾಗಿಯನ್ನು ಖರೀದಿಸಲು ಮುಂದಾಗಿದೆ. ಮಂಗಳವಾರ ಆಂಧ್ರ ಆಹಾರ ಅಧಿಕಾರಿಗಳು ಗೋದಾಮಿಗೆ ಬಂದು ರಾಗಿಯ ಮಾದರಿ ಪಡೆದು ಹೋಗಿದ್ದಾರೆ.ಸರ್ಕಾರ ಪ್ರತಿ ವರ್ಷ ರಾಗಿಯ ಬೆಂಬಲ ಬೆಲೆಯನ್ನು ಏರಿಸುತ್ತಲೆ ಖರೀದಿ ಮಾಡುತ್ತಿದೆ, ಈಗ ಕ್ವಿಂಟಲ್‌ಗೆ ೪೮೮೬ ರು. ನೀಡುತ್ತಿದೆ. ಇದರಿಂದ ಆಕರ್ಷಿತರಾಗಿರುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಅಂದೆ ೨೭೭೪ ರೈತರು ರಾಗಿಯನ್ನು ಮಾರಾಟ ಮಾಡಲು ಈಗಾಗಲೆ ಕೆಎಫ್‌ಸಿ ಗೋಮದಾಮಿನಲ್ಲಿ ನೋಂದಣಿ ಮಾಡಿಸಿಕೊಂಡಿರುವ ರೈತರು ೫೪೮೮೮ ಕ್ವಿಂಟಲ್ ರಾಗಿಯನ್ನು ರೈತರಿಂದ ಸ್ವೀಕರಿಸುವ ಕಾರ್ಯಸಹ ನಡೆಯುತ್ತಿದೆ.
ಮಾರ್ಚ್ ೩೧ಕ್ಕೆ ಅಂತ್ಯವಾಗಿದ್ದ ಖರೀದಿಯನ್ನು ಏಪ್ರಿಲ್ ೩೧ರತನಕ ಸರ್ಕಾರ ವಿಸ್ತರಿಸಿದೆ. ರೈತರು ಸರ್ಕಾರಕ್ಕೆ ನೀಡುವ ಅರ್ಧದಷ್ಟು ರಾಗಿಯನ್ನು ಆಂಧ್ರ ಸರ್ಕಾರ ಖರೀದಿಸಲು ಮುಂದಾಗಿದೆ. ಆಂಧ್ರ ಸರ್ಕಾರಕ್ಕೆ ಮಾರಾಟ ಮಾಡದಿದ್ದರೆ ಇಡೀ ವರ್ಷ ಪೂರ ಸ್ಥಳಿಯ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರದಾರರಿಗೆ ನೀಡಬಹುದಿತ್ತು.ಆದರೆ ಈ ಅರ್ಧದಷ್ಟು ರಾಗಿಯನ್ನು ಆಂಧ್ರಕ್ಕೆ ಮಾರಾಟ ಮಾಡಿದರೆ ೬ ತಿಂಗಳಿಗೆ ಉಳಿಕೆ ರಾಗಿ ಪಡಿತರ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಬಹುದು. ಉಳಿದ ೬ ತಿಂಗಳು ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ರೈತರು ಬೆಳೆಯುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬೆಳೆಯನ್ನು ಬೆಳೆಯುವುದರಿಂದ ಅಲ್ಲಿ ಸಂಗ್ರಹವಾಗಿರುವ ಗುಣಮಟ್ಟವಿಲ್ಲದ ರಾಗಿಯನ್ನು ತಾಲೂಕಿನ ಪಡಿತರದಾರರಿಗೆ ವಿತರಿಸಲು ಇಲಾಖೆ ಮುಂದಾಗಿದೆ. ಇದು ಪ್ರತಿ ವರ್ಷ ನಡೆಯುತ್ತಿದೆ.
೬ ತಿಂಗಳು ಗುಣಮಟ್ಟದ ರಾಗಿ ಕೊಟ್ಟರೆ ೬ ತಿಂಗಳು ಕಳಪೆ ರಾಗಿಯನ್ನು ಸರ್ಕಾರ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸುತ್ತಿದೆ. ಇದನ್ನು ತಡೆಯಬೇಕೆಂದು ಗ್ರಾಹಕರು ಹಾಗೂ ಸಾರ್ವಜನಿಕರು ಆಹಾರ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಮಾತ್ರ ಗುಣಮಟ್ಟವಿಲ್ಲದಿದ್ದರೆ ರಾಗಿಯನ್ನು ಪಡೆಯಲು ನಿರಾಕರಿಸುವರು, ಆದರೆ ತುಮಕೂರು, ಹಾಸನ ಜಿಲ್ಲೆಗಳಲ್ಲಿ ಯಾಕೆ ಕಳಪೆ ರಾಗಿಯನ್ನು ಪಡೆಯುವರು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.ನಮಗೆ ಪಕ್ಕದ ಜಿಲ್ಲೆಗಳ ರಾಗಿ ಬೇಡ ನಮ್ಮ ತಾಲೂಕಿನ ರೈತರು ಬೆಳೆದಿರುವ ರಾಗಿಯನ್ನೇ ಆಂದ್ರ ಸರ್ಕಾರಕ್ಕೆ ಮಾರಾಟ ಮಾಡದೆ ಉಳಿಸಿಕೊಂಡು ನ್ಯಾಯಬೆಲೆ ಅಂಡಗಿಗಳ ಮೂಲಕ ವಿತರಿಸಬೇಕು. ತಪ್ಪಿದಲ್ಲಿ ಹೋರಾಟ ಮಾಡಲಾಗುವುದೆಂದು ಸಮಾಜ ಸೇವಕ ಸೂಲಿಕುಂಟೆ ಆನಂದ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.