ಶಾಸಕ ಬಸವನಗೌಡ ಪಾಟೀಲ ಯತ್ನಾಳ ವಿರುದ್ಧ ಲಿಂಗಾಯತ ಸಂಘಟನೆಗಳ ಆಕ್ರೋಶ

KannadaprabhaNewsNetwork | Published : Dec 4, 2024 12:31 AM

ಸಾರಾಂಶ

ಸಮಾನತೆಯ ಹರಿಕಾರ ಬಸವಣ್ಣನವರು 12ನೇ ಶತಮಾನದಲ್ಲಿ ವಿಶ್ವಕ್ಕೆ ಪ್ರಜಾಪ್ರಭುತ್ವ ನೀಡಿದ್ದಾರೆ. ಆಗಿನ ಸಂದರ್ಭದಲ್ಲಿ ಮನೋವಾದಿಗಳ ಧಿಕ್ಕರಿಸಿ ಸಮಾನತೆ, ಸರಳತೆಯ ಸಮಾಜ ನೀಡಿದ್ದಾರೆ.

ಹುಬ್ಬಳ್ಳಿ:

ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಶಾಸಕ ಬಸವನಗೌಡ ಪಾಟೀಲ ಯತ್ನಾಳ ವಿರುದ್ಧ ಲಿಂಗಾಯತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಈ ಕುರಿತು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಜಾಗತಿಕ ಲಿಂಗಾಯತ, ಬಸವಕೇಂದ್ರ, ಗುರುಬಸವ ಮಂಟಪ, ಲಿಂಗಾಯತ ಧರ್ಮಸಭಾದ ನಾಯಕರು, ಶಾಸಕ ಯತ್ನಾಳ ಅವರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಪಕ್ಷದ ಹೈಕಮಾಂಡ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಒತ್ತಾಯಿಸಿದರು.

ಎಂ.ವಿ. ಗೊಂಗಡಶೆಟ್ಟಿ ಮಾತನಾಡಿ, ಬಹಿರಂಗ ಸಭೆಯೊಂದರಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಸವಣ್ಣನವರು ಕೈಲಾಗದೆ ಹೊಳೆಗೆ ಹಾರಿ ಪ್ರಾಣ ಬಿಟ್ಟಂತೆ ಹಿಂದೂ ಸಮುದಾಯವು ಅದೇ ರೀತಿ ಆಗಲಿದೆ ಎಂದು ಕ್ಷುಲ್ಲಕ ಹೇಳಿಕೆ ನೀಡಿದ್ದಾರೆ. ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದರು.

ಸಮಾನತೆಯ ಹರಿಕಾರ ಬಸವಣ್ಣನವರು 12ನೇ ಶತಮಾನದಲ್ಲಿ ವಿಶ್ವಕ್ಕೆ ಪ್ರಜಾಪ್ರಭುತ್ವ ನೀಡಿದ್ದಾರೆ. ಆಗಿನ ಸಂದರ್ಭದಲ್ಲಿ ಮನೋವಾದಿಗಳ ಧಿಕ್ಕರಿಸಿ ಸಮಾನತೆ, ಸರಳತೆಯ ಸಮಾಜ ನೀಡಿದ್ದಾರೆ. ಸಾಮಾನ್ಯ ಜನರನ್ನು ಶರಣನ್ನಾಗಿ ಮಾಡಿದ ಕೀರ್ತಿ ಅವರಿಗಿದ್ದು, ಅವರು ಆತ್ಮವಿಶ್ವಾಸದ ಪ್ರತಿರೂಪವಾಗಿದ್ದಾರೆ. ಅವರು ಹೊಳೆಗೆ ಹಾರಿ ಪ್ರಾಣ ಬಿಟ್ಟಿಲ್ಲ. ಬಸವಣ್ಣನವರ ಘನತೆ ಅರಿಯದೇ ಯತ್ನಾಳ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಶಶಿಧರ ಕರವೀರ ಶೆಟ್ಟರ ಮಾತನಾಡಿ, ಹರಕು ಬಾಯಿಯ ಯತ್ನಾಳ ಒಬ್ಬ ಲಿಂಗಾಯತ ಸಮಾಜದ ನಾಯಕರಾಗಿ ಈ ರೀತಿ ಹೇಳಿಕೆ ನೀಡುತ್ತಿರುವುದು ಖಂಡನೀಯ. ಯತ್ನಾಳರ ಹೇಳಿಕೆ ಅವರ ಮನೆತನ ಮತ್ತು ಸಂಸ್ಕಾರದ ಬಗ್ಗೆ ತಿಳಿಸುತ್ತದೆ. ಇಡೀ ಸಮಾಜ ಅವರ ಹೇಳಿಕೆಯನ್ನು ಖಂಡಿಸುತ್ತದೆ ಎಂದರು.

ಪದೇ- ಪದೇ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಶಾಸಕ ಯತ್ನಾಳರ ವಿರುದ್ಧ ಪಕ್ಷದ ಹೈಕಮಾಂಡ್ ಪಕ್ಷದಿಂದ ಅವರನ್ನು ಉಚ್ಛಾಟಿಸುವ ಮೂಲಕ ಶಿಸ್ತು ಕ್ರಮಕ್ಕೆ ಮುಂದಾಗಬೇಕು. ಹಾಗೊಂದು ವೇಳೆ ಅವರ ಮೇಲೆ ಶಿಸ್ತು ಕ್ರಮಕೈಗೊಳ್ಳದೇ ಹೋದಲ್ಲಿ ಮುಂಬರುವ ಚುನಾವಣೆಯಲ್ಲಿ ಲಿಂಗಾಯತರೆಲ್ಲರೂ ಒಂದಾಗಿ ಯತ್ನಾಳರನ್ನು ಸೋಲಿಸಿ ಮನೆಗೆ ಕಳುಹಿಸುವ ಕೆಲಸ ಮಾಡುತ್ತೇವೆ. ಸಮಾಜದ ಬಗ್ಗೆ ಕನಿಷ್ಠ ಕಾಳಜಿ ಇಲ್ಲದ ಯತ್ನಾಳ ಮತ್ತೊಮ್ಮೆ ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದಲ್ಲಿ, ಸಮಾಜದ ಮುಖಂಡರು ಹಾಗೂ ಯುವಕರು ಅವರು ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಯಾಳ, ಎಸ್.ವಿ. ಜೋಡಳ್ಳಿ ಸೇರಿದಂತೆ ಹಲವರಿದ್ದರು.

Share this article