ಕನ್ನಡಪ್ರಭ ವಾರ್ತೆ ಸಿಂದಗಿ
ಸಿಎಂ ಸಿದ್ದರಾಮಯ್ಯ ಅವರು ಒಳಮೀಸಲಾತಿ ಜಾರಿ ಮಾಡುವವರೆಗೂ ಹೊಸ ನೇಮಕಾತಿ ಮಾಡುವುದಿಲ್ಲ ಎಂಬ ಭರವಸೆ ನೀಡಿದ್ದರು. ಆದರೆ ಮಾತು ತಪ್ಪಿದ ಸರಕಾರ ಒಳಮೀಸಲಾತಿ ಜಾರಿಯಾಗುವ ಮೊದಲೇ ನೇಮಕಾತಿ ಹಾಗೂ ಬಡ್ತಿ ಪ್ರಕ್ರಿಯೆ ಆರಂಭಿಸಿ ಮೋಸ ಮಾಡಿದ್ದಾರೆ ಎಂದು ಕ್ರಾಂತಿಕಾರಿ ರಥಯಾತ್ರೆಯ ರೂವಾರಿ ಬಿ.ಆರ್.ಭಾಸ್ಕರ ಪ್ರಸಾದ ಕಿಡಿಕಾರಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೋಚ್ಛ ನ್ಯಾಯಾಲಯದ ಆದೇಶ ನಂತರ ಕೇವಲ ಎರಡು ತಿಂಗಳ ಕಾಲಾವಕಾಶ ತೆಗೆದುಕೊಂಡ ರಾಜ್ಯ ಸರಕಾರ 4 ತಿಂಗಳುಗಳ ಕಾಲ ತನ್ನ ಸಮಿತಿ ಅವಧಿ ವಿಸ್ತರಿಸಿಕೊಂಡಿತ್ತು. ಈ ಮಧ್ಯೆ ಮೂರು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಮಾದಿಗರ ಆಕ್ರೋಶ ವ್ಯಕ್ತವಾದಾಗ ಜಾರಿಯ ಮಾತು ನೀಡಿದ ಸರ್ಕಾರ ಈಗ ತಪ್ಪಿ ನಡೆದಿದೆ ಎಂದು ಆಕ್ರೋಶ ಹೊರಹಾಕಿದರು.
ನೀವು ನೀಡುವ ಒಳಮೀಸಲಾತಿಯು ದಯೆ ಅಥವಾ ಭಿಕ್ಷೆ ಅಲ್ಲ. ಅದು ನ್ಯಾಯಾಲಯದಿಂದ ಸಿಕ್ಕರುವ ಹಕ್ಕು. ಅದನ್ನು ನೀಡಲು ರಾಜ್ಯ ಸರ್ಕಾರ ಏಕೆ? ನೆಪಗಳನ್ನು ಹೇಳುತ್ತಿದೆ ಎಂಬುದು ಗೊತ್ತಿಲ್ಲ. ಪಕ್ಕದ ಆಂದ್ರ ಪ್ರದೇಶ, ತೆಲಂಗಾಣ, ಹರಿಯಾಣ, ತಮಿಳುನಾಡಿನಲ್ಲಿ ಈಗಾಗಲೇ ಜಾರಿಯಾಗಿದೆ. ಕರ್ನಾಟಕದಲ್ಲಿ ಏಕೆ ಆಗುತ್ತಿಲ್ಲ, ಒಂದು ವಾರದ ಕೆಲಸಕ್ಕೆ ಇಷ್ಟೊಂದು ಹಿಂದೆಟ್ಟು ಏಕೆ? ಎಂದು ಅವರು ಪ್ರಶ್ನಿಸಿದರು.ಸರಕಾರದ ನೇಮಕಾತಿಗಳು ಹಾಗೂ ಬಡ್ತಿ ಪ್ರಕ್ರಿಯೆ ಮುಗಿದ ನಂತರ ಒಳಮೀಸಸಲಾತಿ ನೀಡಿದರೆ ಅದು ಮೋಸದ ಖಾಲಿ ಚಿಪ್ಪು ಇದ್ದಂತೆ ಅದನ್ನು ನಮ್ಮಗೆ ನೀಡುವ ಹುನ್ನಾರ ಸರಕಾರ ಮಾಡುತ್ತಿದೆ. ಪ್ರಯೋಜನಕ್ಕೆ ಬಾರದ ಒಳ ಮೀಸಲಾತಿ ತೆಗೆದುಕೊಂಡರು ಪ್ರಯೋಜನವಿಲ್ಲದಂತಾಗುತ್ತದೆ. ಇದನ್ನು ನಿಲ್ಲಿಸದೆ ಹೋದರೆ ಮುಂಬರುವ ಚುನಾವಣೆಗಳಲ್ಲಿ ನಿಮ್ಮ ಪಕ್ಷದ ಅಭ್ಯರ್ಥಿಗಳನ್ನು ಮಾದಿಗರ ಕಾಲೋನಿಗಳಿಗೆ ಪ್ರವೇಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಸಾಯಬಣ್ಣ ಪುರದಾಳ, ರಾಜು ಬಾಸಗಿ, ಯಲ್ಲು ಇಂಗಳಗಿ, ಸಿದ್ದು ಪೂಜಾರಿ, ಖಾಜು ಬಂಕಲಗಿ ಉಪಸ್ಥಿತರಿದ್ದರು.