ಬೆಳೆಗಳಿಗೆ ನೀರು ಹರಿಸದೆ ನಾಲಾ ಕಾಮಗಾರಿ: ಆಕ್ರೋಶ

KannadaprabhaNewsNetwork |  
Published : Aug 26, 2025, 01:02 AM IST
೨೫ಕೆಎಂಎನ್‌ಡಿ-೨ಲೋಕಸರ ಶಾಖಾ ನಾಲಾ ಕಾಮಗಾರಿ ಸ್ಥಗಿತಗೊಳಿಸಿ ಮದ್ದೂರು-ಮಳವಳ್ಳಿ ಕೊನೆಯ ಭಾಗಕ್ಕೆ ನೀರು ಹರಿಸುವಂತೆ ಆಗ್ರಹಿಸಿ ಮಂಡ್ಯದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಜನಪ್ರತಿನಿಧಿಗಳಿಗೆ, ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನವಿಲ್ಲ. ಕೃಷಿಯ ಬಗ್ಗೆ ಕನಿಷ್ಠ ಜ್ಞಾನವಂತೂ ಮೊದಲೇ ಇಲ್ಲ. ಕೃಷಿ ಚಟುವಟಿಕೆ ನಡೆಯುವ ಸಮಯದಲ್ಲಿ ನೀರು ಸ್ಥಗಿತಗೊಳಿಸಿ ನಾಲಾ ಕಾಮಗಾರಿ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಇವರೆಲ್ಲಾ ಜನಪ್ರತಿನಿಧಿಗಳು ಎನ್ನುವುದಕ್ಕೆ ಅಸಹ್ಯವೆನಿಸುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷಿ ಚಟುವಟಿಕೆಗೆ ನೀರು ಹರಿಸದೆ ನಾಲಾ ಕಾಮಗಾರಿಯನ್ನು ಮುಂದಿಟ್ಟುಕೊಂಡು ನೀರು ಹರಿಸದಿರುವ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ರೈತಸಂಘದ ಕಾರ್ಯಕರ್ತರು ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕಾವೇರಿ ನೀರಾವರಿ ನಿಗಮದ ಎದುರು ಸೇರಿದ ನೂರಾರು ರೈತರು ಅಧಿಕಾರಿಗಳ ರೈತ ವಿರೋಧಿ ಕ್ರಮವನ್ನು ಖಂಡಿಸಿದರಲ್ಲದೆ, ಕೂಡಲೇ ನಾಲಾ ಕಾಮಗಾರಿಯನ್ನು ಸ್ಥಗಿತಗೊಳಿಸಿ ರೈತರ ಕೃಷಿ ಚಟುವಟಿಕೆಗೆ ನೀರು ಹರಿಸುವಂತೆ ಬಿಗಿಪಟ್ಟು ಹಿಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಜನಪ್ರತಿನಿಧಿಗಳಿಗೆ, ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನವಿಲ್ಲ. ಕೃಷಿಯ ಬಗ್ಗೆ ಕನಿಷ್ಠ ಜ್ಞಾನವಂತೂ ಮೊದಲೇ ಇಲ್ಲ. ಕೃಷಿ ಚಟುವಟಿಕೆ ನಡೆಯುವ ಸಮಯದಲ್ಲಿ ನೀರು ಸ್ಥಗಿತಗೊಳಿಸಿ ನಾಲಾ ಕಾಮಗಾರಿ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಇವರೆಲ್ಲಾ ಜನಪ್ರತಿನಿಧಿಗಳು ಎನ್ನುವುದಕ್ಕೆ ಅಸಹ್ಯವೆನಿಸುತ್ತದೆ ಎಂದು ಟೀಕಿಸಿದರು.

ಈ ತಿಂಗಳಾಂತ್ಯಕ್ಕೆ ಭತ್ತದ ನಾಟಿ ಮುಗಿಯಬೇಕು. ಆ ಉದ್ದೇಶದಿಂದ ಸಸಿಮಡಿ ಸಿದ್ಧಪಡಿಸಿಟ್ಟುಕೊಂಡು ನಾಟಿ ಮಾಡುವುದಕ್ಕೆ ನೀರಿಗಾಗಿ ಮದ್ದೂರು ಹಾಗೂ ಮಳವಳ್ಳಿ ಭಾಗದ ರೈತರು ಕಾಯುತ್ತಿದ್ದರೆ ಇತ್ತ ಲೋಕಸರ ಶಾಖಾ ನಾಲೆ ಕಾಮಗಾರಿ ಹೆಸರಿನಲ್ಲಿ ನೀರನ್ನು ಸ್ಥಗಿತಗೊಳಿಸಿರುವ ಅಧಿಕಾರಿಗಳು ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಅವರ ಜೀವನವನ್ನೇ ನಾಶ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬೇಸಿಗೆ ಸಮಯದಲ್ಲಿ ನಾಲಾ ಕಾಮಗಾರಿ ನಡೆಸದೆ ಕೃಷಿ ಚಟುವಟಿಕೆಗೆ ನೀರು ಕೊಡುವ ಸಮಯದಲ್ಲಿ ಕಾಮಗಾರಿ ನಡೆಸುತ್ತಿರುವುದು ಅವೈಜ್ಞಾನಿಕವಾಗಿದೆ. ಭತ್ತದ ನಾಟಿ ವಿಳಂಬವಾದರೆ ಚಳಿಗೆ ಸಿಲುಕುವ ಅಪಾಯವಿದೆ. ಇದರಿಂದ ಇಳುವರಿ ಕುಸಿತಗೊಂಡು, ಬೆಳೆ ನಾಶವಾಗುತ್ತದೆ. ಬೆಳೆಗಳಿಗೆ ಮಾಡಿದ ಖರ್ಚು ನಷ್ಟವಾಗಲಿದೆ. ಈಗ ನೀರು ಹರಿಸದಿದ್ದರೆ ರೈತರು ಬೆಳೆ ಬೆಳೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಿ ಬೆಳೆಗಳಿಗೆ ನೀರು ಕೊಡಿ ಎಂದು ಆಗ್ರಹಿಸಿದರು.

ಕೊನೆಯ ಭಾಗವಾದ ಮದ್ದೂರು, ಮಳವಳ್ಳಿ ರೈತರು ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಮೊದಲೆಲ್ಲಾ ಕಾಮಗಾರಿ ಮಾಡಿಕೊಳ್ಳದೆ ಏನು ಮಾಡುತ್ತಿದ್ದರು. ದೊಡ್ಡ ನಾಲಾ ಕಾಮಗಾರಿಗಳನ್ನು ಬೇಗನೆ ಮುಗಿಸಿದ್ದಾರೆ. ಹದಿನೈದು ದಿನಗಳಲ್ಲಿ ಮುಗಿಸಬಹುದಾದ ಕಾಮಗಾರಿಗಳನ್ನು ಈಗ ಕೈಗೆತ್ತಿಕೊಂಡಿದ್ದಾರೆ. ರೈತರ ಜೀವನ ಹಾಳು ಮಾಡಲೆಂದೇ ನೀರಾವರಿ ಅಧಿಕಾರಿಗಳು, ಜನಪ್ರತಿನಿಧಿಗಳು ನಿಂತಿದ್ದಾರೆ. ವಯಸ್ಸಾದ ರೈತರೆಲ್ಲಾ ನೀರಿಗಾಗಿ ಒತ್ತಾಯಿಸುತ್ತಾ ಧರಣಿ ನಡೆಸುತ್ತಿದ್ದಾರೆ. ಇದು ಅವರ ಕಣ್ಣಿಗೆ ಕಾಣುವುದಿಲ್ಲವೇ. ಮನುಷ್ಯತ್ವವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ಕೂಡಲೇ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಬಂದು ನಾಲಾ ಕಾಮಗಾರಿ ಸ್ಥಗಿತಗೊಳಿಸಿ ನೀರು ಬಿಡುಗಡೆ ಮಾಡುವುದಾಗಿ ನಮಗೆ ಹೇಳಬೇಕು. ಅಲ್ಲಿಯವರೆಗೆ ಈ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನೆ ಮುಂದುವರೆಸಿದರು.

ಪ್ರತಿಭಟನೆಯಲ್ಲಿ ರವಿಕುಮಾರ್, ಬೋರಾಪುರ ಶಂಕರೇಗೌಡ, ಮದ್ದೂರು ತಾಲೂಕು ಅಧ್ಯಕ್ಷ ಉಮೇಶ್, ವಿನೋದ್‌ಬಾಬು, ಶಂಭೂಗೌಡ, ಲಿಂಗಪ್ಪಾಜಿ, ಪಟೇಲ್ ಬೋರೇಗೌಡ, ಶಿವಲಿಂಗೇಗೌಡ, ಬೊಮ್ಮಲಿಂಗೇಗೌಡ, ನಾಗಲಿಂಗು, ಚಿಕ್ಕಮರಿಗೌಡ ಇತರರಿದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ