ಕನ್ನಡಪ್ರಭ ವಾರ್ತೆ ಹಾಸನ
ಇದೇ ವೇಳೆ ಮುರುಳೀಧರ್ ಹಾಗೂ ಸುಬ್ರಹ್ಮಣ್ಯ ಮಾಧ್ಯಮದೊಂದಿಗೆ ಮಾತನಾಡಿ, ಐದು ವರ್ಷಕ್ಕೊಮ್ಮೆ ಬಂದೂಕು ಪರವಾನಗಿ ನವೀಕರಣ ಮಾಡಿಸಬೇಕೆಂಬ ನಿಯಮದ ಹಿನ್ನೆಲೆಯಲ್ಲಿ ರೈತರು ತಮ್ಮ ತಮ್ಮ ಬಂದೂಕುಗಳೊಂದಿಗೆ ಡಿಸಿ ಕಚೇರಿಗೆ ಆಗಮಿಸಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿಧಾನಗತಿಯ ಕಾರ್ಯವೈಖರಿಯಿಂದ ಬಂದೂಕು ಮಾಲೀಕರು ದಿನವಿಡೀ ಕಚೇರಿ ಬಳಿ ಕಾಯುವಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಅಧಿಕಾರಿಗಳು ಪರವಾನಗಿ ನವೀಕರಣಕ್ಕೆ ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತಿರುವುದರಿಂದ, ಕೃಷಿ ಕೆಲಸಗಳನ್ನು ಬಿಟ್ಟು ದೂರದ ಊರುಗಳಿಂದ ಬಂದ ರೈತರು ಊಟ, ನೀರು ಇಲ್ಲದೆ ಸಾಲಿನಲ್ಲಿ ನಿಂತು ಕಾಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಸಮಾಧಾನ ಹೊರಹಾಕಿದರು. ಬಂದೂಕು ನವೀಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವೇ ರೈತರಿಗೆ ಟೋಕನ್ ನೀಡಿ ದಿನಾಂಕ ನಿಗದಿಪಡಿಸಿದ್ದರೂ, ದಿನಕ್ಕೆ ೫೦ ಮಂದಿಗೆ ಟೋಕನ್ ನೀಡಲಾಗುತ್ತಿದ್ದು, ಕೇವಲ ೨೦ರಿಂದ ೨೫ ಮಂದಿಯ ಪರವಾನಗಿ ಮಾತ್ರ ನವೀಕರಿಸಲಾಗುತ್ತಿದೆ ಎಂದು ಆರೋಪಿಸಿದರು. ಇದರಿಂದ ಉಳಿದ ರೈತರು ದಿನವಿಡೀ ಕಾಯುವಂತಾಗಿ, ಕೊನೆಗೆ ಯಾವುದೇ ಕೆಲಸವಾಗದೆ ಬರಿಗೈಯಲ್ಲಿ ವಾಪಸ್ಸಾಗುವ ಪರಿಸ್ಥಿತಿ ಎದುರಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.ಹಿಂದೆ ತಾಲೂಕು ಕಚೇರಿಗಳಲ್ಲೇ ಬಂದೂಕು ಪರವಾನಗಿ ನವೀಕರಣ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲೇ ನವೀಕರಣ ಮಾಡಿಸಬೇಕೆಂಬ ಹೊಸ ನಿಯಮ ಜಾರಿಯಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಬೆಳಗ್ಗೆಯೇ ದೂರದ ಊರುಗಳಿಂದ ಬಂದರೂ, ಸಂಜೆಯಾದರೂ ಪರವಾನಗಿ ನವೀಕರಣವಾಗುತ್ತಿಲ್ಲ. ಬೆಳಗ್ಗಿನಿಂದ ಸಂಜೆವರೆಗೂ ಊಟ, ನೀರು ಇಲ್ಲದೆ ಸರದಿ ಸಾಲಿನಲ್ಲಿ ಕಾಯಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣ ಜಿಲ್ಲಾಧಿಕಾರಿಗಳು ಈ ಸಮಸ್ಯೆಯತ್ತ ಗಮನಹರಿಸಿ, ರೈತರಿಗೆ ಅನುಕೂಲವಾಗುವಂತೆ ತಾಲೂಕು ಮಟ್ಟದಲ್ಲೇ ಬಂಧೂಕು ಪರವಾನಗಿ ನವೀಕರಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.