ಸಿದ್ದಾಪುರ: ಸರ್ಕಾರದಿಂದ ಸಹಾಯಧನ ಪಡೆದ ಮತ್ತು ವಾಜಪೇಯಿ ನಿವೇಶನ ಪಡೆದ ಮನೆಗಳಿಗೆ ಅನಧಿಕೃತ ಮನೆಗಳೆಂದು ದುಪ್ಪಟ್ಟು ತೆರಿಗೆ ವಿಧಿಸಲಾಗುತ್ತಿದೆ. ಸರ್ಕಾರದಿಂದ ಹಂಚಿಕೆಯಾದ ಮನೆಗಳು ಅನಧಿಕೃತ ಆಗಲು ಹೇಗೆ ಸಾಧ್ಯ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಕೆ.ಜಿ. ನಾಯ್ಕ ಹಣಜೀಬೈಲ್ ಪ್ರಶ್ನಿಸಿದರು. ಗುರುವಾರ ಪಟ್ಟಣ ಪಂಚಾಯಿತಿಯ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸರ್ಕಾರದಿಂದ ಹಂಚಿಕೆಯಾದ ನಿವೇಶನಗಳನ್ನು ಅನಧಿಕೃತ ಎಂದು ಪರಿಗಣಿಸಬಾರದು. ದುಪ್ಪಟ್ಟು ತೆರಿಗೆ ಪಡೆಯುತ್ತಿರುವುದನ್ನು ತಕ್ಷಣ ನಿಲ್ಲಿಸಿ ಎಂದು ಆಗ್ರಹಿಸಿದರು.
ಪಂಚಾಯಿತಿಯಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಿದ್ದು, ತೆರಿಗೆ ಸಂಗ್ರಹಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ₹೪೧ ಲಕ್ಷ ಆಸ್ತಿಗೆ ತೆರಿಗೆ ಬಾಕಿ ಇದ್ದು, ₹೪೭ ಲಕ್ಷಗಳಷ್ಟು ನೀರಿನ ಕರ ಬರಬೇಕಿದೆ. ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕೆಂದು ಸದಸ್ಯರು ಒತ್ತಾಯಿಸಿದರು. ಮುಖ್ಯಾಧಿಕಾರಿ ಜಗದೀಶ ಆರ್. ನಾಯ್ಕ ಅವರು, ತೆರಿಗೆ ಸಂಗ್ರಹಣೆ ಆಗುತ್ತಿರುವ ವಿಳಂಬವನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು. ಸಭೆಯಲ್ಲಿ ೨೦೨೪- ೨೫ನೇ ಸಾಲಿಗೆ ೧೫ನೇ ಹಣಕಾಸು ಮತ್ತು ಪಂಚಾಯಿತಿ ಜಲನಿಧಿಯಡಿ ಕೈಗೊಳ್ಳುವ ಕಾಮಗಾರಿಗಳ ನಿರ್ವಹಣೆಗೆ ಸ್ವೀಕೃತ ಟೆಂಡರುಗಳನ್ನು ಪರಿಶೀಲಿಸಿ ಮಂಜೂರಾತಿ ನೀಡಲಾಯಿತು.೨೦೨೫ರ ಬೇಸಿಗೆ ದಿನಗಳಲ್ಲಿ ಪಟ್ಟಣದ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲು ಹುಸೂರು ಡ್ಯಾಂನ ಕೋಡಿಗೆ ಉಸುಕು ಮತ್ತು ಮಣ್ಣಿನ ಬಂಡ್ ನಿರ್ಮಿಸುವ ಕಾಮಗಾರಿ ಕೈಗೊಳ್ಳಲು ಕ್ರಿಯಾಯೋಜನೆಗೆ ಮತ್ತು ಅಂದಾಜು ಪತ್ರಿಕೆಗೆ ಮಂಜೂರಾತಿ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಲಾಯಿತು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ ನಾಯ್ಕ ಕೊಂಡ್ಲಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ವಿನಯ ಹೊನ್ನೇಗುಂಡಿ ಮತ್ತು ಸದಸ್ಯರು ಇದ್ದರು.