ಕಾರವಾರ: ಅಂಕೋಲಾ ತಾಲೂಕಿನ ಹಳವಳ್ಳಿ, ಮಳಗಾಂವ ಭಾಗದ ಹಸೆಹಳ್ಳಕ್ಕೆ ಹಾಕಲಾದ ವಿದ್ಯುತ್ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲು ಆದೇಶ ನೀಡಿರುವುದು ಸರಿಯಲ್ಲ. ಕೃಷಿಗೆ, ಜಾನುವಾರುಗಳಿಗೆ ಬೇಸಿಗೆಯಲ್ಲಿ ಈ ನೀರನ್ನೇ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹಸೆಹಳ್ಳದ ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದಾನಂದ ಭಟ್ ಅಸಮಾಧಾನ ಹೊರಹಾಕಿದರು.
ಉತ್ತರ ಕನ್ನಡದಲ್ಲಿ ಮನೆಯ ಸಮೀಪ ಇರುವ ಹಳ್ಳಕ್ಕೆ ಬೇಸಿಗೆಯಲ್ಲಿ ಪಂಪ್‌ಸೆಟ್ ಅಳವಡಿಸಿ ನೀರನ್ನು ಪಡೆಯುವುದು ಕೃಷಿಗೆ, ಜಾನುವಾರುಗಳಿಗೆ, ಕುಡಿಯಲು ಬಳಕೆ ಮಾಡುವುದು ಸಾಮಾನ್ಯಗಿದೆ. ಹಸೆಹಳ್ಳದ ನೀರನ್ನು ಪಡೆಯುವುದು ಕಾನೂನುಬಾಹಿರ ಎಂದಾದರೆ ನಾವು ತೆರಿಗೆ ತುಂಬುತ್ತೇವೆ. ಕಾನೂನಾತ್ಮವಾಗಿಯೇ ಬಳಕೆಗೆ ನೀರನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.
ಯುವ ಒಕ್ಕೂಟದ ಅಧ್ಯಕ್ಷ ದಿನಕರ ಹೆಬ್ಬಾರ ಮಾತನಾಡಿ, ಹಳವಳ್ಳಿ ಗ್ರಾಮದಲ್ಲಿ ಪುನರ್ವಸತಿಯ ಸಾಕಷ್ಟು ಕಾಲನಿಗಳಿವೆ. ಆದರೆ ಒಂದು ಕಾಲನಿಗೆ ಮಾತ್ರ ನೀರಿನ ಸಮಸ್ಯೆ ಎನ್ನುತ್ತಿದ್ದಾರೆ. ಇದೇ ಹಸೆಹಳ್ಳದ ನೀರು ಬಿರುಬೇಸಿಗೆಯಲ್ಲೂ ಗಂಗಾವಳಿ ನದಿಗೆ ತಲುಪುತ್ತಿದೆ. ಹಳ್ಳದಲ್ಲಿ ನೀರಿನ ಕೊರತೆಯಾಗಿಲ್ಲ. ಶಿವರಾಮ ಗಾಂವಕರ ಒಬ್ಬ ರೈತರಾಗಿ, ರೈತರ ಪರ ಹೋರಾಟಗಾರರಾಗಿ ಈ ರೀತಿ ಮಾಡುವುದು ಸರಿಯಲ್ಲ. ನೀರು, ಗಾಳಿ ಮನುಷ್ಯನ ಅತ್ಯವಶ್ಯಕವಾಗಿದೆ. ನೀರನ್ನೇ ಕೊಡದಿದ್ದರೆ ಅಲ್ಲಿನ ಜನರು ಹೇಗೆ ಬದುಕಬೇಕು ಎಂದು ಪ್ರಶ್ನಿಸಿದರು.ನಿತ್ಯಾನಂದ ಭಟ್, ರೋಹಿದಾಸ ನಾಯ್ಕ, ಪ್ರಭಾಕರ ಮರಾಠಿ, ವಿನಯ ಹೆಗಡೆ, ಸೂರ್ಯ ಸಿದ್ದಿ, ಪ್ರಶಾಂತ ನಾಯ್ಕ ಮೊದಲಾದವರು ಇದ್ದರು.
ಡಿಸಿಗೆ ಮನವಿಹಸೆಹಳ್ಳದ ನೀರನ್ನು ಪಂಪ್‌ಸೆಟ್ ಮೂಲಕ ಬಳಕೆ ಮಾಡುತ್ತಿರುವುದನ್ನು ಕಾನೂನುಬಾಹಿರ ಎಂದು ಬಂದ್ ಮಾಡಿಸಿರುವುದನ್ನು ಆಕ್ಷೇಪಿಸಿ ಹಳವಳ್ಳಿ ಗ್ರಾಮದ ಜನರು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರಿಗೆ ಮನವಿ ನೀಡಿದರು. ನೀರು ಸಿಗದೇ ಇದ್ದರೆ ಆಗುವ ತೊಂದರೆಗಳ ಕುರಿತು ವಿವರಿಸಿದರು. ಮನವಿ ಸ್ವೀಕರಿಸಿದ ಡಿಸಿ ಅಂಕೋಲಾ ತಹಸೀಲ್ದಾರರಿಗೆ ಪರಿಶೀಲಿಸಿ ವರದಿ ನೀಡಲು ಸೂಚಿಸುವುದಾಗಿ ಹೇಳಿದರು.