ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಹಿನ್ನೆಲೆ ಕಾಂಗ್ರೆಸ್ ಸರ್ಕಾರದ ನಡೆಯನ್ನು ವಿರೋಧಿಸಿ ನಗರದಲ್ಲಿ ಭಾರತೀಯ ಜನತಾ ಪಕ್ಷ ಪ್ರತಿಭಟನೆ ನಡೆಸಿತು.ಚಾಮರಾಜೇಶ್ವರ ದೇಗುಲ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ತಳ್ಳೋಗಾಡಿ ಮೇಲೆ ಬೈಕ್ ಇಟ್ಟು ಭುವನೇಶ್ವರಿ ವೃತ್ತದ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ಹೊರಹಾಕಿದರು.
ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಜಿಲ್ಲಾಧ್ಯಕ್ಷ ಎಸ್. ನಿರಂಜನಕುಮಾರ್ ಮುಖಂಡರಾದ ಎಸ್. ಬಾಲರಾಜು ಮಾತನಾಡಿ, ಗ್ಯಾರಂಟಿ ಯೋಜನೆಗಳಿಗಾಗಿ ಜನರ ಜೇಬಿಗೆ ಕಾಂಗ್ರೆಸ್ ಸರ್ಕಾರ ಕತ್ತರಿ ಹಾಕುತ್ತಿದೆ, ನಮ್ಮ ಹಣವನ್ನು ಕಿತ್ತುಕೊಂಡು ನಮಗೇ ಕೊಡುವ ಕೆಲಸ ಮಾಡುತ್ತಿದ್ದಾರೆ, ಇಂಧನ ದರ ಏರಿಕೆ ಮಾಡಿರುವುದು ಮಧ್ಯಮ ವರ್ಗದವರಿಗೆ ದೊಡ್ಡ ಪೆಟ್ಟು ಕೊಟ್ಟಿದೆ. ಪೆಟ್ರೋಲ್ ಬೆಲೆ ಲೀಟರ್‌ಗೆ 3 ರು. ಮತ್ತು ಡೀಸೆಲ್ ಲೀಟರ್‌ಗೆ 3.5 ರು. ಏರಿಕೆಯಾಗಿದೆ. ಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉಸಿರಾಡುವುದಕ್ಕೂ ತೆರಿಗೆ ವಿಧಿಸಿದರೂ ಆಶ್ಚರ್ಯವಿಲ್ಲ ಎಂದು ಲೇವಡಿ ಮಾಡಿದರು.ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಲೂಟಿ ಹೊಡೆಯಲು ಹೊರಟಿದೆ. ಪೆಟ್ರೋಲ್ ಮೇಲಿನ ರಾಜ್ಯ ಸೆಸ್‌ನ್ನು ಪ್ರತಿ ಲೀಟರ್ ಮೇಲೆ 3 ರು. ಹೆಚ್ಚಳ ಮಾಡುವ ಆದೇಶಕ್ಕೆ ಸಹಿ ಹಾಕುವ ಮೂಲಕ ಸಿಎಂ ಸಿದ್ದರಾಮಯ್ಯ ಖಾಲಿಯಾದ ಬೊಕ್ಕಸ ತುಂಬಿಕೊಳ್ಳಲು ಹೊರಟಿದ್ದಾರೆ ಎಂದು ಆರೋಪಿಸಿದರು.ಈ ಹಿಂದೆ ಕೇಂದ್ರ ಸರ್ಕಾರದ ವಿರುದ್ಧ ಇಂಧನ ದರ ಇಳಿಕೆಗಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್ ಸೆಸ್ ಇಳಿಕೆ ಮಾಡಿದೆ, ಕಾಂಗ್ರೆಸ್ ಬೆಂಬಲಿತ ಸರ್ಕಾರ ಇರುವ ರಾಜ್ಯಗಳಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಿದೆ, ಸರಕಾರ ಎಲ್ಲ ರೀತಿಯಿಂದಲೂ ಜನರಿಂದ ಆದಾಯ ಸುಲಿಗೆ ಮಾಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದಕ್ಕೆ ಹೆಚ್ಚುವರಿಯಾಗಿ ಇಂಧನ ಬೆಲೆಯನ್ನೂ ಏರಿಕೆ ಮಾಡಿ, ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಇದು ನಿಜಕ್ಕೂ ದುರದೃಷ್ಟಕರ ಸಂಗತಿ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಐದು ಗ್ಯಾರಂಟಿ ಯೋಜನೆಗಳ ಮೂಲಕ ಜನರನ್ನು ಮೂರ್ಖರನ್ನಾಗಿಸಿದೆ ಈಗ ಜನರಿಗೆ ಇವರ ಬಂಡವಾಳ ಗೊತ್ತಾಗಿದೆ, ತಕ್ಷಣ ಹೆಚ್ಚಿಸಿರುವ ಪೆಟ್ರೋಲ್, ಡಿಸೇಲ್ ಬೆಲೆಯನ್ನು ವಾಪಸು ಪಡೆಯಬೇಕು ಎಂದರು ಆಗ್ರಹಿಸಿದರು.
ಎಂ. ರಾಮಚಂದ್ರು, ನಿಜಗುಣರಾಜು, ವೃಷಬೇಂದ್ರಪ್ಪ, ವೆಂಕಟೇಶ್, ನೂರೊಂದುಶೆಟ್ಟಿ ವೈಸಿ ನಾಗೇಂದ್ರ, ಮೂಡ್ನಾಕೂಡು ಪ್ರಕಾಶ್, ಅರಕಲವಾಡಿ ನಾಗೇಂದ್ರ, ಪ್ರಣಯ್, ಮೂಡಹಳ್ಳಿ ಮೂರ್ತಿ, ಜಯಸೂರ್ಯ, ಆನಂದ್ ಭಗೀರಥ ಶಿವರಾಜ್, ಮಮತಾ, ರಾಜೇಶ್ವರಿ, ವನಜಾಕ್ಷಿ ಇತರರು ಇದ್ದರು.