ಪಾಲಿಕೆ ಸಭೆಯಲ್ಲಿ ಬಿಜೆಪಿ ಸದಸ್ಯನ ಹೇಳಿಕೆಗೆ ಆಕ್ರೋಶ

KannadaprabhaNewsNetwork | Published : Dec 30, 2023 1:15 AM

ಸಾರಾಂಶ

ಕಲಬುರಗಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯನಿಂದ ಮುಸ್ಲಿಂ ಮಹಿಳೆಯರ ಅವಹೇಳನ ಖಂಡಿಸಿ ಕೂಡಲೇ ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್‌ ಸದಸ್ಯರ ಆಗ್ರಹ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಟೌನ್‌ ಹಾಲ್‌ನಲ್ಲಿ ಶುಕ್ರವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ಕೃಷ್ಣಾ ನಾಯಕ್‌ ಇ‍ರು ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತನ್ನಾಡಿದರು ಎಂದು ಆರೋಪಿಸಿ ಕಾಂಗ್ರೆಸ್‌ ಸದಸ್ಯರು ಸಭೆಯಲ್ಲಿ ಕುರ್ಚಿ ಎತ್ತಿಹಾಕಿ ಕೋಲಾಹಲ ಎಬ್ಬಿಸಿದರು.

ಕಾಂಗ್ರೆಸ್‌ ಸದಸ್ಯ ಅಯ್ಯೂಬ್‌ ತಬ್ಬುಖಾನ್‌ ಸಭಾಂಗಣದಲ್ಲೇ ಕುರ್ಚಿ ಎತ್ತಿಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಪೌರ ಕಾರ್ಮಿಕರ ಸೇವೆ ಕಾಯಂಮಾತಿ ವಿಚಾರದ ಚರ್ಚೆ ಸಭೆಯಲ್ಲಿ ನಡೆದಿರುವಾಗಲೇ ಈ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಸದಸ್ಯ ಸಯ್ಯದ್‌ ಅಹ್ಮದ್‌ ಅವರು 967 ಪೌರ ಕಾರ್ಮಿಕರನ್ನು ನೇಮಕ ಮಾಡುವ ಚರ್ಚೆ ನಡೆಯುತ್ತಿದೆ. ಒಟ್ಟಾರೆ 1,041 ಕಾರ್ಮಿಕರು ಕೆಲಸ ಮಾಡುತ್ತಿದ್ದು ಎಲ್ಲರನ್ನೂ ಕಾಯಂ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಕೃಷ್ಣ ನಾಯ್ಕ್‌ ಇ‍ವರು, ದಲಿತರು, ಬಂಜಾರಾ ಸಮುದಾಯದ ಮಹಿಳೆಯರು ಕಸ ಗುಡಿಸುವುದನ್ನು ಕಂಡಿದ್ದೇವೆ. ಆದರೆ ಬುರ್ಖಾ ಹಾಕಿಕೊಂಡ ಮಹಿಳೆಯರು ಕಸ ಗುಡಿಸುವುದನ್ನು ನೋಡಿದ್ದೀರಾ? ಎಂದಾಗ ಕೆರಳಿದ ಕಾಂಗ್ರೆಸ್‌ನ ಅಯೂಬ್‌ ತಬ್ಬುಖಾನ್‌ ಕುರ್ಚಿ ಎತ್ತಿಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕೃಷ್ಣ ನಾಯಕ್‌ ಹೇಳಿಕೆ ವಿರೋಧಿಸಿ ಪಾಲಿಕೆ ವಿರೋಧ ಪಕ್ಷದ ನಾಯಕ ಅಜ್ಮಲ್‌ ಗೋಲಾ ಮೇಯರ್‌ ವಿಶಾಲ್‌ ಧರ್ಗಿ ಮುಂದಿರುವ ಮೇಜು ಹತ್ತಿ ಕುಳಿತು ಧರಣಿ ನಡೆಸಿದರು. ಬಿಜೆಪಿಯ ಕೃಷ್ಣಾ ನಾಯಕ ತಮ್ಮ ಹೇಳಿಕೆಗೆ ಕ್ಷಮೆ ಕೋರಬೇಕೆಂದು ಕಾಂಗ್ರೆಸ್‌ ಸದಸ್ಯರು ಪಟ್ಟು ಹಿಡಿದಾಗ ಮೇಯರ್‌ ವಿಶಾಲ್‌ ಧರ್ಗಿ ಸಭೆಯನ್ನು ಕೆಲಕಾಲ ಮುಂದೂಡಿದರು.

ನಂತರ ತಮ್ಮ ಚೆಂಬರ್‌ನಲ್ಲಿ ಉಭಯ ಗುಂಪಿನ ಸದಸ್ಯರನ್ನು ಕರೆಯಿಸಿಕೊಂಡು ಸಭೆ ನಡೆಸಿದ ಮೇಯರ್‌ ವಿಶಾಲ್‌ ಧರ್ಗಿಯವರು ಕ್ಷಮೆ ಕೋರುವಂತೆ ಕೃಷ್ಣಾ ನಾಯಕ್‌ಗೆ ಸೂಚಿಸಿದರು. ಮೇಯರ್‌ ಸೂಚನೆಯಂತೆ ಕೃಷ್ಣ ನಾಯಕ್‌ ಸಭೆಯಲ್ಲಿ ಕ್ಷಮೆ ಕೋರಿದರು.

Share this article