ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ನಗರಸಭೆ ಸದಸ್ಯರನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ಸದಸ್ಯರುಗಳೆಲ್ಲಾ ಸೇರಿ ಪ್ರತಿಭಟನೆ ಮಾಡಬೇಕು ಎಂದುಕೊಂಡಿದ್ದೇವೆ ಎಂದು ನಗರಸಭೆಯ ಕೆಲ ಸದಸ್ಯರು ನಗರಸಭೆ ಮುಂಭಾಗ ಇರುವ ಮುಖ್ಯದ್ವಾರದ ಬಳಿ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಇದೇ ವೇಳೆ ನಗರಸಭೆ ಸದಸ್ಯ ಯೋಗೇಂದ್ರ ಬಾಬು ಮಾಧ್ಯಮದೊಂದಿಗೆ ಮಾತನಾಡಿ, ಹಾಸನಾಂಬ ಜಾತ್ರೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಹಲವು ವರ್ಷಗಳಿಂದ ನಗರಸಭೆ ಚುನಾಯಿತ ಪ್ರತಿನಿಧಿಗಳನ್ನು ಪರಿಗಣಿಸಲಾಗುತ್ತಿತ್ತು. ಆದರೆ ಈ ಬಾರಿ ಜಿಲ್ಲಾಧಿಕಾರಿಗಳು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ನಗರಸಭೆ ಸದಸ್ಯರಿಗೂ ಭದ್ರತಾ ಸಿಬ್ಬಂದಿ ಪ್ರವೇಶ ನೀಡುತ್ತಿಲ್ಲ ಎಂದು ದೂರಿದರು. ವಿವಿಐಪಿ ಪಾಸ್‌ಗಳನ್ನು ಬೇಕಾಬಿಟ್ಟಿ ಹಂಚಿದ್ದಾರೆ. ಧರ್ಮದರ್ಶನ ಸಾಲಿನಲ್ಲಿ ನಿಲ್ಲುವವರಿಗಿಂತ ಪಾಸ್ ಹಿಡಿದು ನಿಂತವರೇ ಹೆಚ್ಚು ಕಂಡು ಬಂದಿದೆ. ಪಾಸ್ ನೆರವಿನಿಂದ ಬೇಗ ದರ್ಶನ ಪಡೆಯಬೇಕೆಂದವರು ಐದಾರು ಗಂಟೆ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಇಷ್ಟೊಂದು ಪಾಸ್‌ಗಳ ಹಂಚಿಕೆ ಮಾಡಿದ್ದು ಯಾವ ಉದ್ದೇಶಕ್ಕೆ ಎಂದು ಪ್ರಶ್ನಿಸಿದರು.ಬಹುಪಾಲು ಭಕ್ತರು ತುಮಕೂರು ಜಿಲ್ಲೆಯವರೇ ಆಗಿದ್ದಾರೆ. ಉಸ್ತುವಾರಿ ಸಚಿವರು ತಮ ಕ್ಷೇತ್ರದ ಜನರ ಓಲೈಕೆಗಾಗಿ ತಮಗೆ ಇಷ್ಟ ಬಂದಂತೆ ಪಾಸ್ ಹಂಚಿದ್ದಾರೆ. ಭಕ್ತರನ್ನು ಬಿಡುವ ವಿಚಾರಕ್ಕೆ ಜಿಲ್ಲಾಧಿಕಾರಿ ಹಾಗು ಪೊಲೀಸ್ ಅಧಿಕಾರಿಗಳು ಪರಸ್ಪರ ವಾಗ್ದಾಳಿ ನಡೆಸಿದ್ದು, ರಾಜ್ಯಾದ್ಯಂತ ಜಿಲ್ಲೆಯ ಮರ್ಯಾದೆ ಹಾಳು ಮಾಡಿದ್ದಾರೆ. ನಗರಸಭೆ ಚುನಾಯಿತ ಸದಸ್ಯರ ಕಡೆಗಣನೆಗೆ ಆಕ್ರೋಶ ಅಧಿಕಾರಿಗಳ ನಡುವೆ ಸಮನ್ವಯ ಕೊರತೆಯಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಅಹಂಕಾರ ವರ್ತನೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಜಿಲ್ಲೆ ಅಭಿವೃದ್ಧಿ ಹೊಂದುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿರುವ ಮೇಲ್ಪಟ್ಟದ ಯಾವ ಅಧಿಕಾರಿಗಳು ಜನರ ಪರವಾಗಿ ಕೆಲಸ ಮಾಡುತ್ತಿಲ್ಲ. ಹಾಸನಾಂಬ ಮಹೋತ್ಸವವನ್ನು ಕುಟುಂಬದ ಕಾರ್ಯಕ್ರಮವನ್ನಾಗಿ ಮಾಡಿಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ದೇವಿ ದರ್ಶನಕ್ಕೆ ಇನ್ನು ಮೂರು ದಿನಗಳು ಮಾತ್ರ ಬಾಕಿಯಿದ್ದು, ನಗರಸಭೆ ಚುನಾಯಿತ ಪ್ರತಿನಿಧಿಗಳು, ಪೌರ ಕಾರ್ಮಿಕರು ಹಾಗು ಸಿಬ್ಬಂದಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇದೇ ವೇಳೆ ನಗರಸಭೆ ಸದಸ್ಯರಾದ ಆರ್. ಮೋಹನ್, ರಫೀಕ್, ಮಂಜುನಾಥ್, ಕೃಷ್ಣಮೂರ್ತಿ, ನಾಗೇಶ್ ಇತರರು ಉಪಸ್ಥಿತರಿದ್ದರು.