೧೬.೫ ಲಕ್ಷ ರು. ವೆಚ್ಚದ ನೂತನ ಕಟ್ಟಡದಲ್ಲಿ ದೋಷ ಆರೋಪ
ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಹೆಬ್ಬಾಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ದೊಡ್ಡಬ್ಯಾಡಿಗೆರೆ ಗ್ರಾಮದಲ್ಲಿ ಪ್ರಗತಿಯಲ್ಲಿರುವ ೧೬.೫ ಲಕ್ಷ ರು. ವೆಚ್ಚದ ಅಂಗನವಾಡಿ ನೂತನ ಕಟ್ಟಡ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಿಸಿದ ಹಿನ್ನೆಲೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ ಬಳಿಕ ಗುತ್ತಿಗೆದಾರ ಮತ್ತು ಎಂಜಿನಿಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಇದೇ ಸಂದರ್ಭದಲ್ಲಿ ಗ್ರಾಮಸ್ಥರಾದ ಮಲ್ಲಿಕಾರ್ಜುನ, ರಘು, ಪುನೀತ್ ಮಾತನಾಡಿ, ೧೬ ಲಕ್ಷ ರು. ಅಂಗನವಾಡಿ ಕಟ್ಟಡ ಕಾಮಗಾರಿ ತೀವ್ರ ಕಳಪೆಯಿಂದ ಕೂಡಿದೆ ಎಂದು ಗ್ರಾಮಸ್ಥರು ಪರಿ ಪರಿಯಾಗಿ ಗುತ್ತಿಗೆದಾರ, ಎಂಜಿನಿಯರ್ ಮತ್ತು ಸಿಡಿಪಿಒ ಅವರಿಗೆ ಹೇಳಿದರೂ ಯಾವ ಪ್ರಯೋಜನವಾಗಿಲ್ಲ. ಈ ಕಾರಣದಿಂದಲೇ ಶಾಸಕರಿಗೆ ದೂರು ನೀಡಲಾಗಿದೆ. ಮಕ್ಕಳನ್ನು ಯಾವ ಕಾರಣಕ್ಕೂ ಇಂತಹ ಅಂಗನವಾಡಿಗೆ ಕಳಿಸುವುದಿಲ್ಲ. ಮಳೆ ಬಂದರೆ ಸೊರುತ್ತಿದೆ. ಕಿಟಕಿ ಬಾಗಿಲು ಈಗಲೇ ಮುರಿದಿದೆ ಎಂದು ದೂರಿದರು.ಶಾಸಕ ಎಚ್.ಕೆ. ಸುರೇಶ್ ಮಾತನಾಡಿ, ‘ದೊಡ್ಡಬ್ಯಾಡಿಗೆರೆ ಅಂಗನವಾಡಿ ಕಟ್ಟಡ ಕಾಮಗಾರಿ ನಾನೇ ಖುದ್ದು ವೀಕ್ಷಿಸಿದ ಸಂದರ್ಭದಲ್ಲಿ ಇಲ್ಲಿನ ಕಾಮಗಾರಿ ತೀವ್ರ ಕಳಪೆ ಎನ್ನುವುದು ಸತ್ಯವಾಗಿದೆ. ಸುಮಾರು ೧೬ ಲಕ್ಷ ರು. ಕಾಮಗಾರಿಯನ್ನು ಗುತ್ತಿಗೆದಾರ ಮತ್ತು ಎಂಜಿನಿಯರ್ ಒಳ ಒಪ್ಪಂದದಿಂದ ಗುಣಮಟ್ಟವಿಲ್ಲದ ಕಾಮಗಾರಿ ನಡೆಸಿದ್ದಾರೆ. ಇಂತಹ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ. ಇನ್ನು ನಿರ್ಮಿತ ಕೇಂದ್ರ ಎಂಜಿನಿಯರ್ ಅಮಾನತು ಪಡಿಸಬೇಕು ಎಂದು ಕೂಡ ಒತ್ತಾಯ ಮಾಡಲಾಗುತ್ತದೆ. ಬೇಜವಾಬ್ದಾರಿ ಅಧಿಕಾರಿಗಳ ವರ್ತನೆಯಿಂದ ಕಾಮಗಾರಿ ಹಾಳಾಗುತ್ತವೆ. ಆದರೆ ನಾನು ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಯಾವ ಕಾರಣಕ್ಕೂ ಗುಣಮಟ್ಟವಿಲ್ಲದ ಕಾಮಗಾರಿ ಸಹಿಸುವ ಪ್ರಶ್ನೆ ಇಲ್ಲ. ಹಾಗೆಯೇ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಒತ್ತು ನೀಡಲಾಗುತ್ತದೆ. ಅಧಿಕಾರಿಗಳು ಈ ಬಗ್ಗೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ಹೇಳಿದರು.
ಬೇಲೂರು ಶಿಶು ಮರಣ ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿ ಉಮೇಶ್ ಮಾತನಾಡಿ, ‘೧೬.೫ ಲಕ್ಷ ರು. ಅಂಗನವಾಡಿ ಕಟ್ಟಡ ಕಾಮಗಾರಿ ನಿರ್ಮಿತಿ ಕೇಂದ್ರದ ವತಿಯಿಂದ ನಡೆಯುತ್ತಿದೆ. ಕಟ್ಟಡ ಕಾಮಗಾರಿ ಕಳಪೆ ಬಗ್ಗೆ ನಾವೇ ಎಂಜಿನಿಯರ್‌ಗೆ ತಿಳಿಸಿದರೂ ಕೂಡ ಗುತ್ತಿಗೆದಾರನ ಉಡಾಫೆ ವರ್ತನೆಯಿಂದಲೇ ಕಾಮಗಾರಿ ಕಳೆಪೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪರ್ವತಯ್ಯ ಮತ್ತು ಹೆಬ್ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ತೀರ್ಥಕುಮಾರ್ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.ಬೇಲೂರು ತಾಲೂಕಿನ ದೊಡ್ಡಬ್ಯಾಡಿಗೆರೆ ಗ್ರಾಮದ ಅಂಗನವಾಡಿ ಕಟ್ಟಡದ ಕಾಮಗಾರಿ ಕಳಪೆ ಬಗ್ಗೆ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.