ನಿಯಮ ಪಾಲಿಸದ ಖಾಸಗಿ ಫೈನಾನ್ಸ್‌: ರೈತರ ಆಕ್ರೋಶ

KannadaprabhaNewsNetwork |  
Published : Mar 26, 2026, 02:15 AM IST
ರಾಣಿಬೆನ್ನೂರು ನಗರದ ಬಸ್ ನಿಲ್ದಾಣದ ಬಳಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದಿಂದ ತಹಸೀಲ್ದಾರ್‌ ಆರ್.ಎಚ್. ಭಾಗವಾನ ಅವರಿಗೆ ಮನವಿ ಸಲ್ಲಿಸಲಾಯಿತು. ಗ್ರಾಮೀಣ ಪಿಐ ನಾಗೇಶ ಕಾಡದೇವರಮಠ ಇದ್ದರು. | Kannada Prabha

ಸಾರಾಂಶ

ರಾಣಿಬೆನ್ನೂರು ಬಸ್ ನಿಲ್ದಾಣದ ಬಳಿ ಬುಧವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ವತಿಯಿಂದ ಪ್ರತಿಭಟಿಸಿ ತಹಸೀಲ್ದಾರ್‌, ನಗರಸಭೆ ಆಯುಕ್ತ ಹಾಗೂ ಗ್ರಾಮೀಣ ಪಿಐ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಣಿಬೆನ್ನೂರು: ನಗರದ ಬಸ್ ನಿಲ್ದಾಣದ ಬಳಿ ಬುಧವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ವತಿಯಿಂದ ಪ್ರತಿಭಟಿಸಿ ತಹಸೀಲ್ದಾರ್‌, ನಗರಸಭೆ ಆಯುಕ್ತ ಹಾಗೂ ಗ್ರಾಮೀಣ ಪಿಐ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯಾದ್ಯಂತ ಖಾಸಗಿ ಫೈನಾನ್ಸ್‌ಗಳು ನಾಯಿಕೊಡೆಯಂತೆ ಹುಟ್ಟಿಕೊಂಡಿವೆ ಮತ್ತು ಬೇರೆ ಜಿಲ್ಲೆಗಳಿಂದ ರಾಣಿಬೆನ್ನೂರಿಗೆ ಬಂದು ಲೋನ್ ಕೊಟ್ಟು, ದುಪ್ಪಟ್ಟು ಬಡ್ಡಿ ವಸೂಲಿ ಮಾಡುತ್ತಿವೆ. ಸಂಜೆ 7ರಿಂದ ರಾತ್ರಿ 11ರ ವರೆಗೆ ಹಣ ಮತ್ತು ಅದರ ಬಡ್ಡಿ ಕಟ್ಟುವಂತೆ ಫೈನಾನ್ಸ್‌ ಪ್ರತಿನಿಧಿಗಳು ಮನೆಯ ಮುಂದೆ ನಿಂತು ಅವಮಾನ ಮಾಡುತ್ತಿದ್ದಾರೆ. ಮನೆ ಬೀಗ ಹಾಕುತ್ತೇವೆ, ಹರಾಜು ಮಾಡುತ್ತೇವೆ ಎಂದು ಬೆದರಿಸುತ್ತಾರೆ. ಈಗಾಗಲೇ ರಾಜ್ಯ ಸರ್ಕಾರ ಲೇವಾದೇವಿ ಕಾಯ್ದೆ ಪ್ರಕಾರ ಬಡ್ಡಿ ದಂದೆ ಮಾಡುತ್ತಿರುವವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಆದೇಶವಿದ್ದರೂ ಕೂಡ ಖಾಸಗಿ ಮೈಕ್ರೊ ಫೈನಾನ್ಸ್‌ಗಳು, ಕೆಲವು ಸಂಘಗಳು ಕಾನೂನುಗಳನ್ನು ಗಾಳಿಗೆ ತೂರಿ ಬಡವರ ರಕ್ತ ಹೀರುತ್ತಿವೆ. ಇದರ ಬಗ್ಗೆ ಈಗಾಗಲೇ ಮನವಿ ಕೊಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಣ ಕಟ್ಟಲು ಕಾಲವಕಾಶ ಕೇಳಿದರೂ ಬೆದರಿಕೆ ಮಾತ್ರ ನಿಂತಿಲ್ಲ. ಗೃಹಲಕ್ಷ್ಮಿಯಿಂದ ಪ್ರತಿ ತಿಂಗಳು ಬರುವ ₹2 ಸಾವಿರವನ್ನು ಖಾಸಗಿ ಮೈಕ್ರೋ ಫೈನಾನ್ಸ್‌ನವರು ಆಧಾರ ಕಾರ್ಡ್‌ ಲಿಂಕ್‌ನ ಮುಖಾಂತರ ಸಾಲಕ್ಕೆ ಮುರಿದುಕೊಂಡು ಮಹಿಳೆಯರಿಗೆ ವಂಚನೆ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟು ಸರ್ಕಾರದ ಅಧಿಸೂಚನೆ ಇದ್ದರೂ ಪಾಲಿಸುತ್ತಿಲ್ಲ ಎಂದು ಆರೋಪಿಸಿದರು. ಅಧಿಕಾರಿಗಳು ಮತ್ತು ತಾಲೂಕು ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಖಾಸಗಿ ಫೈನಾನ್ಸ್ ವ್ಯಕ್ತಿಗಳನ್ನು ಕರೆಸಿ, ಅವರ ನಿಯಮಾವಳಿಗಳ ಪ್ರಕಾರ ವಸೂಲಿ ಮಾಡುವಂತೆ ನಿರ್ದೇಶಿಸಬೇಕು. ಇದಲ್ಲದೆ ತಾಲೂಕು ವ್ಯಾಪ್ತಿಗೆ ಸಂಬಂಧಪಟ್ಟ ರೈತರ ಸಾಕಷ್ಟು ಸಮಸ್ಯೆಗಳು ಜೀವಂತವಾಗಿ ಉಳಿದಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ, ರೈತರೊಂದಿಗೆ ಚರ್ಚೆ ಮಾಡಿ, ಮುಂದಿನ ದಿನಗಳಲ್ಲಿ ಮುಂಗಾರು ಮಳೆಗೆ ಮುಂಜಾಗ್ರತೆಗಾಗಿ ಕ್ರಮ ಕೈಗೊಳ್ಳುವುದು, ಉತ್ತಮ ತಳಿಯ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಸಂಗ್ರಹಿಸಿಕೊಳ್ಳುವುದು ಮತ್ತು ಮಳೆಯಿಂದ ಪ್ರವಾಹಕ್ಕೊಳಗಾಗುವ ಪ್ರದೇಶಗಳ ಜನರಿಗೆ ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಿಸುವುದು ಮತ್ತು ತುಂಗಾ ಮೇಲ್ದಂಡೆ ಯೋಜನೆಯಡಿಯಲ್ಲಿ ನಿರ್ಮಾಣವಾದ ಕಾಲುವೆಗಳನ್ನು ಸ್ವಚ್ಛಗೊಳಿಸಿ, ತಾಲೂಕಿನಾದ್ಯಂತ ಹಳೆಯ ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ತೆಗೆದು ಹೊಸ ಕಂಬ ಮತ್ತು ತಂತಿಗಳನ್ನು ಅಳವಡಿಸಬೇಕು. ಕೆರೆಗಳ ಹೂಳೆತ್ತುವುದು, ತುಂಗಭದ್ರಾ ಮತ್ತು ಕುಮದ್ವತಿ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗಳು ಮತ್ತು ಅಡ್ಡಲಾಗಿ ನಿರ್ಮಿಸಿರುವ ಗೇಟ್‌ಗಳನ್ನು ಸ್ವಚ್ಛಗೊಳಿಸಬೇಕು. ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ಮತ್ತು ಹೆಚ್ಚುವರಿ ಪೊಲೀಸ್ ಠಾಣೆ ಮಂಜೂರು ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಹನುಮಂತಪ್ಪ ಕಬ್ಬಾರ, ಕಿರಣ ಗುಳೇದ, ಶೈಲಮ್ಮ ಹರನಗಿರಿ, ನೀಲಮ್ಮ ಮೇಗಳಗೇರಿ, ಕೊಟ್ರಮ್ಮ ಕಾಯಕದ, ಅಮೀದಬಾನು ಶಿಡೇನೂರ, ನಾಗಮ್ಮ ತಳವಾರ, ಉಮೇಶ ಲಮಾಣಿ, ಲಿಂಗಪ್ಪ ದೇವರಗುಡ್ಡ, ತಮ್ಮಪ್ಪ ಮುದಕಣ್ಣನವರ, ಸತೀಶ ಕಲಾಲ, ಶ್ರೀನಿವಾಸ ಲದ್ವ, ಮಾಲತೇಶ ಮಡಿವಾಳರ, ಮಂಜುನಾಥ ಗುಡ್ಡಣ್ಣನವರ, ಬಸವರಾಜ ಮೇಗಳಗೇರಿ, ನಾಗರಾಜ ಮಲ್ಲಾಪುರ, ರವಿಕುಮಾರ ಜಿಗಳಿ, ಶಿವಕುಮಾರ ಮಲ್ಲಾಪುರ, ನಾಗರಾಜ ಲಿಂಗದಹಳ್ಳಿ, ಹೊನ್ನಪ್ಪ, ನಜೀರಸಾಬ ತೋಟಗೇರ, ವೀರೇಶ ಮಳಲೇರ, ಪರಸಪ್ಪ ಹರಿಜನ, ರಜಾಕ್‌ಅಲಿ ದೊಡ್ಮನಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಗ್ರ ಅಭಿವೃದ್ಧಿಗೆ ₹೧೪.೮೨ ಕೋಟಿ ಬಜೆಟ್ ಮಂಡನೆ
ಸ್ಮಶಾನಕ್ಕೆ ಭೂಮಿ, ದಾರಿ ಸಮಸ್ಯೆ ಶೀಘ್ರ ಇತ್ಯರ್ಥಕ್ಕೆ ಸೂಚನೆ