ಬಳ್ಳಾರಿ: ಜಿಲ್ಲೆಯಲ್ಲಿ ಕ್ರೀಡಾ ಮೂಲಸೌಕರ್ಯ ಬಲಪಡಿಸಲು ಕೆ.ಎಂ.ಇ.ಆರ್.ಸಿ ಅನುದಾನದಡಿ ಸುಮಾರು ₹75 ಕೋಟಿಯಿಂದ ₹100 ಕೋಟಿಗೂ ಅಧಿಕ ಹಣ ಒದಗಿಸಲಾಗುತ್ತಿದ್ದು, ಡಿ.ಎಂ.ಎಫ್ ನಿಧಿಯ ಮೂಲಕವೂ ಹೆಚ್ಚುವರಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಹೇಳಿದರು.
ಬೆಂಗಳೂರಿನಿಂದ ಬಳ್ಳಾರಿಗೆ ಸ್ಥಳಾಂತರಗೊಂಡಿರುವ ಹಾಕಿ ಕ್ರೀಡಾಂಗಣ ಮತ್ತು ಕ್ರೀಡಾ ವಸತಿ ನಿಲಯವು ಜಿಲ್ಲೆಯ ಹೆಮ್ಮೆಯಾಗಿದ್ದು, ಅದಕ್ಕೆ ಅಗತ್ಯವಿರುವ ಮೂಲ ಸೌಲಭ್ಯ ಒದಗಿಸಲಾಗಿದೆ. ಇದರ ಜತೆಗೆ ಬಳ್ಳಾರಿಯ ಬಿ.ಡಿ.ಎ ಫುಟ್‌ಬಾಲ್ ಕ್ರೀಡಾಂಗಣದ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಕಲಬುರಗಿಯಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕೂಟದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಬಳ್ಳಾರಿಯ ಸುದೀಕ್ಷಾ, ಪ್ಯಾರಾ ಈಜುಪಟು ಗೋಪಿಚಂದ್ ಹಾಗೂ ಇತ್ತೀಚೆಗೆ 4 ಕಿಮೀ ಮ್ಯಾರಥಾನ್‌ನಲ್ಲಿ ಪ್ರಥಮ ಬಹುಮಾನ ಪಡೆದ ಕ್ರೀಡಾ ಶಾಲೆಯ ವಿದ್ಯಾರ್ಥಿ ಖ್ವಾಜಾ ಸಾಧನೆಯನ್ನು ಇದೇ ವೇಳೆ ಪ್ರಶಂಶಿಸಿದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳು ಹಾಗೂ 2014ರಲ್ಲಿ ಜೆಎಸ್‌ಡಬ್ಲ್ಯೂ ಸಹಯೋಗದೊಂದಿಗೆ ಬಿಡಿಎಎ ಮೈದಾನ ನಿರ್ಮಾಣಗೊಂಡಿವೆ. ಡಿಎಂಎಫ್ ವತಿಯಿಂದ ಸಿರುಗುಪ್ಪದಲ್ಲಿ ಕ್ರೀಡಾಂಗಣ ನಿರ್ಮಿಸಲಾಗಿದೆ. ಕೆಕೆಆರ್‌ಡಿಬಿ ವತಿಯಿಂದ ₹7 ಕೋಟಿ ವೆಚ್ಚದಲ್ಲಿ ಕಂಪ್ಲಿ ಮತ್ತು ಕುರುಗೋಡಿನಲ್ಲಿ ಒಳಾಂಗಣ ಕ್ರೀಡಾಂಗಣಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕೆಎಂಆರ್‌ಸಿ ವತಿಯಿಂದ ಬಳ್ಳಾರಿ ಹಾಗೂ ಸಿರುಗುಪ್ಪದಲ್ಲಿ ₹27 ಕೋಟಿ ಮತ್ತು ಸಂಡೂರಿನಲ್ಲಿ ₹24 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಕ್ರೀಡಾ ಇಲಾಖೆಯ ಅಭಿವೃದ್ಧಿ ಕಾರ್ಯಗಳ ಮಾಹಿತಿ ನೀಡಿದರು.