
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಮೆಕ್ಕಾದಲ್ಲಿ ಸಿಲುಕಿರುವ ಅಪ್ಸರ್ ಹಿಂದೂಸ್ಥಾನಿ ಕನ್ನಡಪ್ರಭದೊಂದಿಗೆ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯ 50ಕ್ಕೂ ಹೆಚ್ಚು ಮಂದಿ ಸೇರಿದಂತೆ ರಾಜ್ಯದ ಸುಮಾರು ಎರಡು ಸಾವಿರ ಕನ್ನಡಿಗರು ತವರಿಗೆ ಮರಳಲಾಗದೆ ಪರದಾಡುತ್ತಿದ್ದಾರೆ ಎಂದು ತಿಳಿಸಿದರು.ಸೌದಿ ಏರ್‌ಲೈನ್ಸ್ ಹಾಗೂ ಇಂಡಿಗೋ ವಿಮಾನಗಳ ಹಾರಾಟ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಅನಿವಾರ್ಯವಾಗಿ ಮೆಕ್ಕಾದಲ್ಲೇ ಉಳಿಯುವಂತಾಗಿದೆ. ವಿಮಾನಗಳ ಸಂಚಾರ ಯಾವಾಗ ಪುನರಾರಂಭವಾಗಲಿದೆ ಎಂಬ ಅನಿಶ್ಚಿತತೆಯಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ. ನ. 4ರವರೆಗೆ ವಿಮಾನಗಳ ಹಾರಾಟ ಮುಂದೂಡಿಕೆಯಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದರು.ಮೆಕ್ಕಾಕ್ಕೆ ತೆರಳಿರುವವರಲ್ಲಿ ಮಧ್ಯಮ ಹಾಗೂ ಕೆಳವರ್ಗದ ಕುಟುಂಬಗಳಿಗೆ ಸೇರಿದ ಅನೇಕ ಬಡವರಿದ್ದಾರೆ. ಪ್ರಯಾಣದ ವೆಚ್ಚ ಭರಿಸಿ ಬಂದಿರುವ ಇವರು, ಇದೀಗ ವಾಪಸ್ ತೆರಳಲು ಸಾಧ್ಯವಾಗದೆ ಊಟ ಮತ್ತು ವಸತಿ ಸೌಲಭ್ಯಕ್ಕೂ ಪರದಾಡುವ ಪರಿಸ್ಥಿತಿ ಇದೆ. ವಕ್ಫ್ ಮಂಡಳಿಯಿಂದ ಒಂದು ಹೊತ್ತಿನ ಊಟದ ವ್ಯವಸ್ಥೆ ಮಾಡಲಾಗಿದ್ದರೂ, ಅದು ಎಲ್ಲರ ಅಗತ್ಯ ಪೂರೈಸಲು ಸಾಕಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ಸಾವಿರಾರು ಕನ್ನಡಿಗರು ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವುದರಿಂದ ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಬೇಕು. ವಿದೇಶಾಂಗ ಸಚಿವಾಲಯ ಕೂಡಲೇ ಸ್ಪಂದಿಸಿ, ಅಗತ್ಯವಿದ್ದಲ್ಲಿ ವಿಶೇಷ ವಿಮಾನಗಳ ವ್ಯವಸ್ಥೆ ಮಾಡುವ ಮೂಲಕ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಬೇಕು ಎಂದು ಒತ್ತಾಯಿಸಿದರು.ಸಂಕಷ್ಟದಲ್ಲಿರುವ ಪ್ರಯಾಣಿಕರಿಗೆ ತಕ್ಷಣ ಆಹಾರ, ವಸತಿ ಹಾಗೂ ಅಗತ್ಯ ನೆರವು ಒದಗಿಸುವ ಜತೆಗೆ, ಅವರ ಸುರಕ್ಷಿತ ವಾಪಸಾತಿಗೆ ಆದ್ಯತೆ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಳಂಬ ಮಾಡದೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಪ್ಸರ್ ಹಿಂದೂಸ್ಥಾನಿ ಮನವಿ ಮಾಡಿದ್ದಾರೆ.--ಕೋಟ್---
ಸರ್ಕಾರ ಈಗಾಗಲೇ ಒಂದು ಸಹಾಯವಾಣಿ ಸಂಖ್ಯೆ ನೀಡಿದೆ. ಜಿಲ್ಲಾ ಮಟ್ಟದಲ್ಲಿಯೂ ಮಾಹಿತಿ ಸಂಗ್ರಹಿಸಿ ಕಳುಹಿಸಿಕೊಡುವ ಕೆಲಸ ಮಾಡಲಾಗುವುದು.- ಭನ್ವರ್ ಸಿಂಗ್ ಮೀನಾ, ಜಿಲ್ಲಾಧಿಕಾರಿ ಚಿಕ್ಕಮಗಳೂರು