ಸೋಲನ್ನು ಸೋಲಿಸಿ ಗೆಲುವನ್ನು ನಮ್ಮದಾಗಿಸಿಕೊಳ್ಳಿ

KannadaprabhaNewsNetwork | Published : Apr 3, 2025 2:45 AM

ಸಾರಾಂಶ

ಯಾವುದೇ ಕ್ಷೇತ್ರವಿರಬಹುದು, ಒಮ್ಮೊಮ್ಮೆ ಸೋಲು ಧುತ್ತೆಂದು ಎದುರಾಗುತ್ತದೆ. ಆಗ ಅದಕ್ಕೆ ಬೆನ್ನು ತೋರಿಸಿ ಓಡದೆ ಗಟ್ಟಿಯಾಗಿ ಎದುರಿಸಿ ಸೋಲನ್ನು ಸೋಲಿಸಿ ಗೆಲುವನ್ನು ನಮ್ಮದಾಗಿಸಿಕೊಳ್ಳಬೇಕು. ಅದೇ ರೀತಿ ಸೋತವರ ಜೊತೆಗೆ ನಾವಿದ್ದೇವೆ ಎಂಬ ಭರವಸೆ ನೀಡುವುದರೊಂದಿಗೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವೂ ನಮ್ಮದಾಗಬೇಕು ಎಂದು ಹಿರಿಯ ಪತ್ರಕರ್ತ, ಲೇಖಕ ಗೋಪಾಲ್‌ ಯಡಗೆರೆ ಅಭಿಪ್ರಾಯಪಟ್ಟರು.

ಶಿವಮೊಗ್ಗ: ಯಾವುದೇ ಕ್ಷೇತ್ರವಿರಬಹುದು, ಒಮ್ಮೊಮ್ಮೆ ಸೋಲು ಧುತ್ತೆಂದು ಎದುರಾಗುತ್ತದೆ. ಆಗ ಅದಕ್ಕೆ ಬೆನ್ನು ತೋರಿಸಿ ಓಡದೆ ಗಟ್ಟಿಯಾಗಿ ಎದುರಿಸಿ ಸೋಲನ್ನು ಸೋಲಿಸಿ ಗೆಲುವನ್ನು ನಮ್ಮದಾಗಿಸಿಕೊಳ್ಳಬೇಕು. ಅದೇ ರೀತಿ ಸೋತವರ ಜೊತೆಗೆ ನಾವಿದ್ದೇವೆ ಎಂಬ ಭರವಸೆ ನೀಡುವುದರೊಂದಿಗೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವೂ ನಮ್ಮದಾಗಬೇಕು ಎಂದು ಹಿರಿಯ ಪತ್ರಕರ್ತ, ಲೇಖಕ ಗೋಪಾಲ್‌ ಯಡಗೆರೆ ಅಭಿಪ್ರಾಯಪಟ್ಟರು.

ರೋಟರಿ ಕ್ಲಬ್‌ ಶಿವಮೊಗ್ಗದಲ್ಲಿ ಆಯೋಜಿಸಿದ್ದ ವಾರದ ಅತಿಥಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ‘ಸೋಲನ್ನು ಸೋಲಿಸಿ’ ವಿಷಯ ಕುರಿತು ಮಾತನಾಡಿದರು.ಒಂದು ಸೋಲು ನಮ್ಮನ್ನು ಕಂಗೆಡಿಸಿ ಬಿಡಬಹುದು. ಆದರೆ ಸೋತಾಗ ಎದ್ದು ನಿಲ್ಲುವ ಪ್ರಯತ್ನವೇ ನಮ್ಮನ್ನು ಗೆಲ್ಲಿಸುವ ಹಾದಿಗೆ ತಂದು ನಿಲ್ಲಿಸುತ್ತದೆ. ಇಂತಹ ಸೋಲಿನ ಸನ್ನಿವೇಶದಲ್ಲಿ ಸೋಲಿಗೆ ಬೆನ್ನು ತೋರಿಸದೆ ಸೋಲನ್ನೇ ಸೋಲಿಸಿ ಗೆದ್ದು ಇತಿಹಾಸ ಸೃಷ್ಟಿಸಿದ ಅನೇಕರು ನಮ್ಮ ಎದುರಿಗಿದ್ದಾರೆ. ಹಠ, ಶ್ರಮ, ಬದ್ಧತೆ, ಧೈರ್ಯ, ಗೆಲ್ಲುವ ಛಲ ಇದ್ದರೆ ಒಂದಲ್ಲ ಒಂದು ದಿನ ಗೆಲುವು ನಮ್ಮದಾಗೇ ಆಗುತ್ತದೆ. ಜಗತ್ತಿನಲ್ಲಿ ಇಂತಹ ಸಾವಿರಾರು ಮಂದಿ ಇರಬಹುದು. ಆದರೆ ನಮ್ಮ ಸುತ್ತಮುತ್ತಲೇ ಅನೇಕರಿದ್ದಾರೆ. ಅಮೃತ್‌ ನೋನಿ ಶ್ರೀನಿವಾಸ ಮೂರ್ತಿ, ಆದಿತ್ಯ ಕನ್‌ಸ್ಟ್ರಕ್ಷನ್‌ ಕಂಪನಿಯ ಎಚ್‌.ಎಸ್‌.ಶಿವಶಂಕರ್‌ ಇವರೆಲ್ಲ ನಮ್ಮೆದುರಿಗಿನ ಉದಾಹರಣೆಗಳು ಎಂದರು.ಸೋಲನ್ನು ಸೋಲಿಸುವುದು ಒಂದೆಡೆಯಾದರೆ, ಸೋಲೇ ನಮ್ಮ ಬಳಿ ಸುಳಿಯದಂತೆ ಗೆಲುವಿನ ಗೋಡೆ ಕಟ್ಟುವುದು ಇನ್ನೊಂದು ಆಯಾಮ. ಪ್ರತಿ ಕ್ಷಣ ಈ ಸಮಾಜಕ್ಕಾಗಿ, ನಮ್ಮ ನೆರೆಯವರಿಗಾಗಿ ಎಂದು ಬದುಕುವ ಮೂಲಕ ನಮ್ಮ ಬದುಕಿಗೊಂದು ಸಾರ್ಥಕತೆ ತಂದುಕೊಡಲು ಸಾಧ್ಯ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಕೆ.ಸೂರ್ಯನಾರಾಯಣ ಉಡುಪ ವಹಿಸಿ ಮಾತನಾಡಿದರು.

ಗಾಯತ್ರಿ ಸುಮತೀಂದ್ರ ಪ್ರಾರ್ಥಿಸಿದರು. ಕಾರ್ಯದರ್ಶಿ ಎನ್‌.ಜಿ.ಉಷಾ ಸೂರ್ಯನಾರಾಯಣ ವರದಿ ವಾಚಿಸಿ ಬಳಿಕ ವಂದಿಸಿದರು. ಎನ್‌.ಚಂದ್ರಪ್ಪ ಅತಿಥಿಗಳನ್ನು ಪರಿಚಯಿಸಿದರು.

Share this article