ಮೈದುಂಬಿ ಹರಿಯುತ್ತಿರುವ ನದಿಗಳು: ಪ್ರವಾಹದಲ್ಲಿ ಏರಿಳಿತ

KannadaprabhaNewsNetwork |  
Published : Jul 20, 2024, 12:49 AM IST
ಎನ್‌.ಆರ್.ಪುರ ತಾಲೂಕಿನ ಕುದುರೆಗುಂಡಿ - ಕಾನೂರು ಕಟ್ಟಿಮನೆ ರಸ್ತೆಯ ಮೇಲೆ ಶುಕ್ರವಾರ ಸಂಜೆ ನೀರು ಬಂದಿದ್ದರಿಂದ ಪೊಲೀಸರು  ಬ್ಯಾರಿಕೇಡ್‌ ಹಾಕಿರುವುದು. | Kannada Prabha

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯಲ್ಲಿ ವರುಣನ ಆರ್ಭಟ ಶುಕ್ರವಾರವೂ ಮುಂದುವರೆದಿತ್ತು. ಸತತ 6 ದಿನಗಳಿಂದ ಸುರಿಯುತ್ತಿರುವ ಮಳೆಗೆ ಮಲೆನಾಡಿನ ಜನರು ತತ್ತರಿಸಿದ್ದಾರೆ. ಆದರೆ, ಜೀವನದಿಗಳು ಮೈದುಂಬಿ ಹರಿಯುತ್ತಿವೆ. ಕ್ಷಣ ಕ್ಷಣಕ್ಕೂ ಪ್ರವಾಹದಲ್ಲಿ ಏರಿಳಿತ ಕಂಡು ಬರುತ್ತಿದೆ.

ಮಲೆನಾಡಿನಲ್ಲಿ ಬಿಡುವಿಲ್ಲದೆ ಸುರಿಯುತ್ತಿರುವ ಮಳೆ, ಸತತ 6 ದಿನಗಳಿಂದ ಬರುತ್ತಿರುವ ಮಳೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಲ್ಲಿ ವರುಣನ ಆರ್ಭಟ ಶುಕ್ರವಾರವೂ ಮುಂದುವರೆದಿತ್ತು. ಸತತ 6 ದಿನಗಳಿಂದ ಸುರಿಯುತ್ತಿರುವ ಮಳೆಗೆ ಮಲೆನಾಡಿನ ಜನರು ತತ್ತರಿಸಿದ್ದಾರೆ. ಆದರೆ, ಜೀವನದಿಗಳು ಮೈದುಂಬಿ ಹರಿಯುತ್ತಿವೆ. ಕ್ಷಣ ಕ್ಷಣಕ್ಕೂ ಪ್ರವಾಹದಲ್ಲಿ ಏರಿಳಿತ ಕಂಡು ಬರುತ್ತಿದೆ.

ಶೃಂಗೇರಿ - ಮಂಗಳೂರು ರಾಷ್ಟ್ರೀಯ ಹೆದ್ದಾರಿ 169ರಲ್ಲಿ ನೆಮ್ಮಾರ್‌ ಬಳಿ ರಸ್ತೆ ಜಲಾವೃತವಾಗಿತ್ತು. ಶುಕ್ರವಾರ ಬೆಳಿಗ್ಗೆ ನೀರಿನ ಪ್ರಮಾಣ ಕಡಿಮೆಯಾಗಿ ವಾಹನಗಳ ಸಂಚಾರಕ್ಕೆ ಮುಕ್ತವಾಯಿತು. ಕಳಸ - ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳ್‌ ಸೇತುವೆ ಮುಳುಗಡೆಯಾಗಿತ್ತು. ಅದೂ ಕೂಡ ಜನರ ಓಡಾಟಕ್ಕೆ ಮುಕ್ತವಾಗಿತ್ತು. ಭಾರೀ ಮಳೆ ಬಂದರೆ, ಈ ಎರಡೂ ಸ್ಥಳದಲ್ಲಿ ಪ್ರವಾಹ ಬರುತ್ತದೆ, ಮಳೆ ಕಡಿಮೆಯಾದರೆ ಇಳಿಮುಖವಾಗುತ್ತದೆ.

ಶೃಂಗೇರಿ ತಾಲೂಕಿನಲ್ಲಿ ಎಂದಿನಂತೆ ಮಳೆ ಮುಂದುವರಿದಿತ್ತು. ಶೃಂಗೇರಿ ಪಟ್ಟಣದ ಶ್ರೀಮಠದ ಬೈಪಾಸ್‌ ರಸ್ತೆ, ಗಾಂಧಿ ಮೈದಾನದ ಕೆಲವು ಭಾಗ ಜಲಾವೃತವಾಗಿತ್ತು. ಮಠದ ಸಂಧ್ಯಾವಂದನಾ ಮಂಟಪ, ಕಪ್ಪೆ ಶಂಕರ ದೇವಾಲಯ ಮುಳು ಗಡೆ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ತಾಲೂಕಿನ ಕೆಲವೆಡೆ ಮರಗಳು, ವಿದ್ಯುತ್‌ ಕಂಬಗಳು ಬಿದ್ದ ಪರಿಣಾಮ ಹಲವೆಡೆ ವಿದ್ಯುತ್ ಸಂಚಾರದಲ್ಲಿ ವ್ಯತ್ಯಯವಾಗಿದೆ. ಇಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಾ ನದಿ ನೋಡುಗರ ಕಣ್ಮನ ಸೆಳೆಯುತ್ತಿದೆ.

ಕೊಪ್ಪ, ಹರಿಹರಪುರ, ಜಯಪುರ, ಬಸರೀಕಟ್ಟೆಯಲ್ಲೂ ಮಳೆ ಚುರುಕುಗೊಂಡಿದೆ. ತಾಲೂಕಿನ ಹಲವೆಡೆ ಮನೆಗಳು ಕುಸಿದಿವೆ. ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಕೊಪ್ಪ - ಕೆಸವೆ ರಸ್ತೆಯಲ್ಲಿರುವ ಅಚ್ಚರಡಿ ಬಳಿ ಮುಸುರೆಹಳ್ಳ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿತ್ತು. ಶುಕ್ರವಾರ ಈ ಹಳ್ಳದಲ್ಲೂ ನೀರು ಕಡಿಮೆಯಾಗಿದ್ದರಿಂದ ಜನರು ಸೇತುವೆ ಮೇಲೆ ಓಡಾಡಲು ಅನುಕೂಲವಾಯಿತು.

ಎನ್‌.ಆರ್.ಪುರ ತಾಲೂಕಿನಲ್ಲೂ ಬಲವಾಗಿ ಬೀಸಿದ ಗಾಳಿಗೆ ಹಲವೆಡೆ ಹಾನಿ ಸಂಭವಿಸಿದೆ. ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯವಾಗಿದೆ. ಕಳೆದ ನಾಲ್ಕೈದು ದಿನಗಳಿಗೆ ಹೋಲಿಕೆ ಮಾಡಿದರೆ ಶುಕ್ರವಾರ ಗಾಳಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಮಳೆಯೂ ಕೂಡ ಮುಂದುವರಿದಿತ್ತು. ಹಾಗಾಗಿ ಸಂಜೆ ವೇಳೆಗೆ ಕುದುರೆಗುಂಡಿ - ಕಾನೂನು ಕಟ್ಟಿಮನೆ ರಸ್ತೆ ಮೇಲೆ ನೀರು ಬಂದಿದ್ದರಿಂದ ಪೊಲೀಸರು ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಿದ್ದರು.

ಕಳಸ- ಹೊರನಾಡು ಸಂಪರ್ಕಿಸುವ ರಸ್ತೆಯಲ್ಲಿರುವ ಮಾಗುಂಡಿ ಗ್ರಾಮದ ಮಾಹಲ್ಗೋಡು ಗ್ರಾಮದ ಸೇತುವೆ ಶಿಥಿಲ ಗೊಂಡಿದ್ದು ಪದೇ ಪದೇ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಸ್ಥಗಿತಗೊಂಡಿದೆ. ಆದ್ದರಿಂದ ಹೊರನಾಡು ಕಳಸ ಹೋಗುವ ಪ್ರಯಾಣಿಕರು ಬದಲಿ ಅಂದರೆ, ಬಾಳೆಹೊನ್ನೂರು - ಮಾಗುಂಡಿ - ಬಾಳೂರು - ಹಿರೇಬೈಲು - ಕಳಸ - ಹೊರ ನಾಡು. ಬಾಳೆಹೊನ್ನೂರು - ಜಯಪುರ - ಬಸರಿಕಟ್ಟೆ- ಬಾಳೆಹೊಳೆ - ಕಳಸ - ಹೊರನಾಡು ಪರ್ಯಾಯ ಮಾರ್ಗದಲ್ಲಿ ಚಲಿಸಲು ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.

ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ತಾಲೂಕುಗಳಲ್ಲೂ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಹಲವೆಡೆ ಧರೆ ಕುಸಿದಿದೆ. ಮರಗಳು ಬಿದ್ದು ಮನೆಗಳಿಗೆ ಹಾನಿ ಸಂಭವಿಸಿದೆ. ಒಟ್ಟಾರೆ ಮಲೆನಾಡು ಮುಂಗಾರು ಮಳೆಗೆ ತತ್ತರಿಸಿದೆ.--- ಬಾಕ್ಸ್‌----

ಕೃಷಿ ಚಟುವಟಿಕೆಗು ಕುತ್ತು

ಕೊಟ್ಟಿಗೆಹಾರ: ಧಾರಾಕಾರ ಮಳೆಗೆ ವಿವಿಧೆಡೆ ಮನೆ ಕುಸಿತವಾಗಿದ್ದು ಗಾಳಿ ಮಳೆಗೆ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಶುಕ್ರವಾರ ಬೀಸಿದ ಮಳೆಗೆ ಬಿನ್ನಡಿ ಗ್ರಾಮದ ಭಾರತಿ ದಿನೇಶ್ ಅವರ ಮನೆ ಕುಸಿತಗೊಂಡಿದೆ. ಬಕ್ಕಿಯ ಸರೀತಾ ಚಂದ್ರೇ ಗೌಡ ಅವರ ಮನೆ ಮಳೆಯಿಂದ ಮನೆ ಕುಸಿದಿದೆ. ಕುವೆಂಪುನಗರದ ಸುನೀತಾ ಅವರ ಮನೆ ಬಿದ್ದಿದ್ದು ಮಳೆಯಿಂದ ಆದ ಹಾನಿಗೆ ಜನರು ಹೈರಾಣಾಗಿದ್ದಾರೆ. ಬಿನ್ನಡಿಯ ಮನೆ ಕುಸಿತ ಸ್ಥಳಕ್ಕೆ ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ.ಸತೀಶ್ ಮತ್ತಿತರರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಬಣಕಲ್ ಕುವೆಂಪುನಗರದಲ್ಲಿ ಕುಸಿದ ಮನೆಗೆ ಗ್ರಾಪಂ ಅಧ್ಯಕ್ಷೆ ಅತಿಕಾ ಭಾನು, ಉಪಾಧ್ಯಕ್ಷ ಸಿರಾಜ್, ಪಿಡಿಒ ಬಿ.ಎನ್. ಕೃಷ್ಣಪ್ಪ, ಇರ್ಫಾನ್ ಹಾಗೂ ಇತರೆ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಟ್ಟಗೆರೆಯ ಔಸನದಲ್ಲಿ ಸುಂದರ ರುಕ್ಮಯ್ಯ ಅವರ ಮನೆ ಗೋಡೆ ಮತ್ತು ಮೇಲ್ಛಾವಣಿ ಕುಸಿದಿದೆ. ಕೊಟ್ಟಿಗೆಹಾರ ಸುತ್ತಮುತ್ತ ಶುಕ್ರವಾರವೂ ವ್ಯಾಪಕ ಗಾಳಿಮಳೆ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. 19 ಕೆಸಿಕೆಎಂ 4ಎನ್‌.ಆರ್.ಪುರ ತಾಲೂಕಿನ ಕುದುರೆಗುಂಡಿ - ಕಾನೂರು ಕಟ್ಟಿಮನೆ ರಸ್ತೆಯ ಮೇಲೆ ಶುಕ್ರವಾರ ಸಂಜೆ ನೀರು ಬಂದಿದ್ದರಿಂದ ಪೊಲೀಸರು ಬ್ಯಾರಿಕೇಡ್‌ ಹಾಕಿರುವುದು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ