ಕನ್ನಡಪ್ರಭ ವಾರ್ತೆ ಬೇಲೂರುವಿಶ್ವವಿಖ್ಯಾತ ಪ್ರವಾಸಿಕೇಂದ್ರ ಶ್ರೀ ಚನ್ನಕೇಶವ ಸ್ವಾಮಿ ದೇಗುಲ ಹಿಂಭಾಗದ. ವಾಹನ ನಿಲುಗಡೆ ರಸ್ತೆಯಲ್ಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸುತ್ತ ಗಿಡ ಬಳ್ಳಿಗಳು ಬೃಹದಾಕಾರವಾಗಿ ಬೆಳೆದು ನಿಂತಿದ್ದರೂ ಸಂಬಂಧ ಪಟ್ಟ ಇಲಾಖೆಯಾವರ ಕಣ್ಣಿಗೆ ಬೀಳದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಿಶ್ವವಿಖ್ಯಾತ ಪ್ರವಾಸಿ ತಾಣಕ್ಕೆ , ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಶ್ರೀ ಚನ್ನಕೇಶವ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ದೇವಾಲಯದ ಹಿಂಭಾಗದ ರಸ್ತೆಯಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು ದಿನನಿತ್ಯ ನೂರಾರು ಕಾರು, ಬಸ್ಸು ಬೈಕ್ ಸೇರಿದಂತೆ ವಿವಿಧ ವಾಹನಗಳು ಪ್ರತಿದಿನ ಇಲ್ಲಿ ನಿಲುಗಡೆಗೊಳ್ಳುತ್ತವೆ. ಇಂತಹ ಜನನಿಬಿಡ ಪ್ರದೇಶದಲ್ಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸುತ್ತ ಗಿಡಗಂಟಿಗಳು ಹಾಗೂ ಬಳ್ಳಿಗಳು ಬೆಳೆದು ದಟ್ಟವಾಗಿ ಆವರಿಸಿದ್ದು ಇದರಿಂದ ವಿದ್ಯುತ್ ಅವಘಡ ಸಂಭವಿಸಿದರೆ ಇದಕ್ಕೆ ಯಾರು ಹೊಣೆ ಹೊರುತ್ತಾರೆ ಎಂಬುದು ಜನರ ಪ್ರಶ್ನೆಯಾಗಿದೆ. ಟ್ರಾನ್ಸ್‌ಫಾರ್ಮರ್ ಸುತ್ತ ಕಾಡು ಬೆಳೆದು ವಿದ್ಯುತ್ ಉಪಕರಣಗಳು ಸ್ಪಷ್ಟವಾಗಿ ಕಾಣದಂತಾಗಿದ್ದು, ತುರ್ತು ಸಂದರ್ಭದಲ್ಲಿ ನಿರ್ವಹಣಾ ಕಾರ್ಯ ಕೈಗೊಳ್ಳಲು ಕೂಡ ತೊಂದರೆಯಾಗುವ ಸಾಧ್ಯತೆ ಇದೆ. ಅದರಲ್ಲೂ ಟ್ರಾನ್ಸ್‌ಫಾರ್ಮರ್‌ಗೆ ಸಮೀಪದಲ್ಲೇ ಸಾರ್ವಜನಿಕರು ಹಾಗೂ ಪ್ರವಾಸಿಗರು ವಾಹನಗಳನ್ನು ನಿಲ್ಲಿಸುವುದರಿಂದ ಯಾವುದೇ ರೀತಿಯ ವಿದ್ಯುತ್ ಅವಘಡ ಸಂಭವಿಸಿದರೆ ಹೆಚ್ಚಿನ ಅನಾಹುತ ಉಂಟಾಗುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಗಿಡಗಂಟಿಗಳು ಸುತ್ತ ಮತ್ತಷ್ಟು ಬೆಳೆಯುತ್ತಿದ್ದು, ಅವು ವಿದ್ಯುತ್ ಉಪಕರಣಗಳಿಗೆ ತಾಗುವ ಸಾಧ್ಯತೆಯೂ ಇದೆ. ಇದರಿಂದ ಶಾರ್ಟ್ ಸರ್ಕ್ಯೂಟ್, ಬೆಂಕಿ ಅವಘಡ ಸೇರಿದಂತೆ ವಿವಿಧ ರೀತಿಯ ಅಪಾಯಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೂಡಲೇ ಗಿಡಗಂಟಿಗಳನ್ನು ತೆರವುಗೊಳಿಸಬೇಕಾಗಿದೆ.ಸಾರ್ವಜನಿಕರು ಹಾಗೂ ವಾಹನಗಳ ಸಂಚಾರ ಹೆಚ್ಚಿರುವ ಪ್ರದೇಶದಲ್ಲಿ ಇಂತಹ ಅಪಾಯಕಾರಿ ಪರಿಸ್ಥಿತಿ ಮುಂದುವರಿಯಲು ಅವಕಾಶ ನೀಡಬಾರದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.