ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ತಾಲೂಕಿನ ಹಿರೀಕಾಟಿ ಗೇಟ್ ಬಳಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಸ್ತುವಾರಿಯಲ್ಲಿ ಸ್ಥಾಪಿತಗೊಂಡಿರುವ ಖನಿಜ ತನಿಖಾ ಠಾಣೆಯ ಮುಂದೆ ಹಾದು ಹೋಗುವ ಬಹುತೇಕ ಟಿಪ್ಪರ್‌ಗಳು ನಿಲ್ಸಲ್ಲ. ಹೋಂಗಾರ್ಡ್ ತಡೆಯಲ್ಲ. ತಡೆದ್ರೂ ನಿಲ್ಲಿಸಲ್ಲ.ಮೈಸೂರು-ಊಟಿ ಹೆದ್ದಾರಿಯ ತಾಲೂಕಿನ ಹಿರೀಕಾಟಿ ಗೇಟ್ ಬಳಿಯ ಖನಿಜ ತನಿಖಾ ಠಾಣೆಯಲ್ಲಿ ಹೋಂಗಾರ್ಡ್‌ಗಳೇ ತಪಾಸಣಾ ಅಧಿಕಾರಿ. ಹೋಂಗಾರ್ಡ್ ಖನಿಜ ತನಿಖಾ ಠಾಣೆ ಮುಂದೆ ನಿಂತಿದ್ದರೂ ಟಿಪ್ಪರ್‌ಗಳು ಎಂಡಿಪಿ ಹಾಗೂ ರಾಯಲ್ಟಿ ಚೀಟಿ ತೋರಿಸಿ ತೆರಳಬೇಕು. ಆದರೆ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಕರ್ತವ್ಯ ಲೋಪದಿಂದಾಗಿ ಟಿಪ್ಪರ್‌ಗಳು ನಿಲ್ಲಿಸದೇ ತೆರಳುತ್ತಿವೆ.
ಕೆಲ ಸಮಯದಲ್ಲಿ ಖನಿಜ ತನಿಖಾ ಠಾಣೆಗೆ ನೇಮಕಗೊಂಡ ಹೋಂಗಾರ್ಡ್ ಟಿಪ್ಪರ್ ತಡೆದರೂ ಬಹುತೇಕ ಟಿಪ್ಪರ್‌ಗಳು ನಿಲ್ಲಿಸುತ್ತಿಲ್ಲ. ಹಿರೀಕಾಟಿ ಭಾಗದ ಕ್ರಸರ್‌ಗೆ ಸೇರಿದ ಟಿಪ್ಪರ್‌ಗಳು ಎಕ್ಸ್‌ಪ್ರೆಸ್ ಸಾರಿಗೆ ಬಸ್ ನಂತೆ ವೇಗವಾಗಿ ತೆರಳುತ್ತಿವೆ. ತಾಲೂಕಿನ ಕ್ವಾರಿ, ಕ್ರಸರ್ ಗಳೇನು ಬರವಿಲ್ಲ. ಅದು ಬೇಗೂರು ಹೋಬಳಿಯಂತೂ ಕ್ವಾರಿಗಳು, ಕ್ರಸರ್‌ಗಳ ತಾಣವಾಗಿದ್ದು, ಕ್ವಾರಿಯ ರಾ ಮೆಟಿರಿಯಲ್, ಕ್ರಸರ್‌ನ ಉತ್ಪನ್ನಗಳು ತೋರಿಕೆ ಪರ್ಮಿಟ್ ಹಾಕಿ ನಾಲ್ಕೈದು ಟ್ರಿಪ್ ಕಲ್ಲು ಅಕ್ರಮವಾಗಿ ಕ್ರಸರ್ ಬಾಯಿಗೆ ಹೋಗುತ್ತಿದೆ.ಇನ್ನೂ ಕ್ರಸರ್ ಉತ್ಪನ್ನಗಳಂತೂ ಹಗಲು ರಾತ್ರಿ ಎನ್ನದೆ ಓವರ್ ಲೋಡ್ ತುಂಬಿದ ಟಿಪ್ಪರ್‌ಗಳು ಮೈಸೂರು ಕಡೆಯತ್ತ ರಾಜರೋಷವಾಗಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಕಣ್ಣು ಕಾಣದಂತೆ ಕುಳಿತಿದೆ. ಕೆಲ ಕ್ರಸರ್ ಮಾಲೀಕರ ಆಮಿಷಕ್ಕೆ ಖನಿಜ ತನಿಖಾ ಠಾಣೆಯಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಿರೀಕಾಟಿ ಬಳಿಯ ಟಿಪ್ಪರ್ ತಡೆದರೆ ಕೆಲ ಕ್ರಸರ್ ಮಾಲೀಕರು ಅವಾಜ್ ಹಾಕುತ್ತಾರೆ ಎಂಬ ಆರೋಪವಿದೆ.
ಅಲ್ಲದೆ ಹಿರೀಕಾಟಿ, ತೊಂಡವಾಡಿ, ಅರೇಪುರ ಸುತ್ತ ಮುತ್ತಲಿನ ಕ್ವಾರಿಯಿಂದ ಟಿಪ್ಪರ್ ಗಳಲ್ಲಿ ಬರುವ ಬೋಡ್ರೆಸ್ ಕಲ್ಲಿನಲ್ಲಿ ಶೇ.೯೦ ರಷ್ಟು ಕಲ್ಲು ರಾಯಲ್ಟಿ ಇಲ್ಲದೆ ಕ್ರಸರ್ ಬಾಯಿಗೆ ಹೋಗುತ್ತಿದೆ. ಬೇಗೂರು, ತೆರಕಣಾಂಬಿ ಪೊಲೀಸ್ ಠಾಣಾ ಸರಹದ್ದು ಹಾಗೂ ಠಾಣೆಯ ಮುಂದೆಯೇ ಓವರ್ ಲೋಡ್ ತುಂಬಿದ ಕಲ್ಲು, ಎಂ.ಸ್ಯಾಂಡ್, ಜಲ್ಲಿ ಯಾವುದೇ ಸುರಕ್ಷತಾ ಕ್ರಮ ವಹಿಸದೆ ತೆರಳುತ್ತಿದ್ದರೂ ಪೊಲೀಸರು ಮಾತ್ರ ತಡೆದು ಕೇಳುತ್ತಿಲ್ಲ?. ಕ್ರಸರ್ ಹಾಗೂ ಕ್ವಾರಿ ಮಾಲೀಕರೊಂದಿಗೆ ಶಾಮೀಲಾಗಿರುವುದು ಇದಕ್ಕೆ ಕಾರಣವಾಗಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ನಾವು ತಡೆಯಂಗಿಲ್ಲ ಎಂದು ಸಾರ್ವಜನಿಕರಿಗೆ ಹೇಳುತ್ತಾರೆ. ಆದರೆ ಕೆಲ ಸಮಯದಲ್ಲಿ ತಾವೇ ಟಿಪ್ಪರ್ ಗಳ ಹಿಡಿದು ಓವರ್ ಲೋಡ್‌ಗೆ ದಂಡ ಹಾಕುತ್ತಿದ್ದಾರೆಅಧಿಕಾರಿಗಳ ಮೇಲೆ ಸಚಿವರಿಗೆ ಹಿಡಿತ ಇಲ್ವಾ?:ಜಿಲ್ಲಾ ರೈತ ಸಂಘದ ಮಹದೇವಪ್ಪ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಜಿಲ್ಲಾ ಕೇಂದ್ರಕ್ಕೆ ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಾರೆ. ಜಿಲ್ಲೆಯ ಅಧಿಕಾರಿಗಳ ಮೇಲೆ ಹಿಡಿತ ವಿಲ್ಲದಿರುವುದು ಜೊತೆಗೆ ಅಕ್ರಮ ಕಲ್ಲು ಹಾಗೂ ಉಪ ಖನಿಜ ಉತ್ಪನ್ನಗಳ ಕದ್ದು ಸಾಗಾಣಿಕೆ ಆಗುತ್ತಿದ್ದರೂ ಅಧಿಕಾರಿಗಳನ್ನು ಕೇಳುವ ವ್ಯವದಾನವೂ ಇಲ್ಲದಿರುವುದೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಾಜಧನ ಹಾಗೂ ಜಿಎಸ್‌ಟಿ ವಂಚಿಸಲು ಸಾದ್ಯವಾಗಿದೆ ಎಂದು ಹೇಳಿದರು.