ಕನ್ನಡಪ್ರಭ ವಾರ್ತೆ ಕೋಲಾರನಗರದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು, ಶಾಲಾ ಮಕ್ಕಳು, ವೃದ್ಧರು, ಬೀದಿ ವ್ಯಾಪಾರಿಗಳು, ಪತ್ರಿಕೆ ಹಾಕುವ ಹುಡುಗರು ಜೀವ ಕೈಯಲ್ಲಿಡಿದು ಭಯದಿಂದ ಸಂಚರಿಸುವ ದುಸ್ಥಿತಿ ಎದುರಾಗಿದೆ. ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಡೆಸಲು ನಗರಸಭೆಯಲ್ಲಿ ಹಣಕಾಸಿನ ಕೊರತೆ ಕಾಡುತ್ತಿದೆ ಎಂದು ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ಆರೋಪಿಸಿದ್ದಾರೆ.ಕಳೆದ ಒಂದೂವರೆ ವರ್ಷದ ಹಿಂದೆ ಸಂತಾನಹರಣ ಚಿಕಿತ್ಸೆ ನಡೆಸಲು ಒಂದು ನಾಯಿಗೆ 1,750 ರೂ.ನಂತೆ ಒಟ್ಟು 866 ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಡೆಸಿದ್ದು ಬಿಟ್ಟರೆ ನಂತರ ನಾಯಿಗಳ ತಡೆಗೆ ನಗರಸಭೆ ಮುಂದಾಗಿಲ್ಲ ಎಂದು ತಿಳಿಸಿದ್ದಾರೆ.ಇದೀಗ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಡೆಸಲು ಪ್ರತಿ ನಾಯಿಗೆ ಕನಿಷ್ಟ 2 ಸಾವಿರ ರೂ. ಅಗತ್ಯವಿದ್ದು, 10 ಸಾವಿರ ನಾಯಿಗಳಿಗೆ ಸಂತಾನಹರಣಕ್ಕೆ ಕನಿಷ್ಟ 2 ಕೋಟಿ ಬೇಕು. ಕೋಲಾರ ನಗರಸಭೆಯಲ್ಲಿ ಬರುವ ಆದಾಯ ನಗರಸಭೆ ನಿರ್ವಹಣೆಗೆ ಸಾಕಾಗುತ್ತಿಲ್ಲವಾದ ಕಾರಣ ನಾಯಿಗಳನ್ನು ಹಿಡಿಯುವ ಮಾತು ಎಲ್ಲಿಯದು ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, 40 ಲಕ್ಷ ಆದಾಯ ಬಂದರೆ 80 ಲಕ್ಷ ಖರ್ಚು ಇದೆ ಎಂದು ತಿಳಿಸಿದ್ದಾರೆ.ನಗರಸಭೆ ನಿರ್ವಹಣೆ ಗುತ್ತಿಗೆದಾರರಿಗೆ ಈಗಾಗಲೇ ನಗರಸಭೆಯಿಂದ 3.5 ಕೋಟಿ ರೂ ಬಾಕಿ ಇದೆ. ಈ ನಡುವೆ ನಾಯಿಗಳ ಸಂತಾನ ಹರಣಕ್ಕೆ ಹಣ ಒದಗಿಸಲು ಕಷ್ಟವಾಗಿದೆ ಎಂದು ತಿಳಿಸಿದ್ದಾರೆ. ನಾಯಿಗಳ ತಡೆಗೆ ಸರ್ಕಾರ ಅಥವಾ ಜಿಲ್ಲಾಡಳಿತದ ಹಂತದಲ್ಲೇ ಒಂದು ನಿರ್ಧಾರವಾಗಬೇಕು, ಅದಕ್ಕೆ ಅನುದಾನ ಒದಗಿಸಬೇಕು. ತಮ್ಮ ವಾರ್ಡಿನಲ್ಲಿ ನಾಯಿಗಳ ಹಾವಳಿ ಕುರಿತು ಆತಂಕ ವ್ಯಕ್ತಪಡಿಸಿದ್ದು, ಮಕ್ಕಳು ಓಡಾಡಲು ಹೆದರುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಪ್ರತಿ ಬಡಾವಣೆಯಲ್ಲೂ ನಾಯಿಗಳ ಹಾವಳಿ:
ಕೋಲಾರದ ಮಾಂಸ ಮಾರಾಟ ಅಂಗಡಿಗಳ ಮುಂದೆ ಮಾತ್ರ ಗುಂಪು ಗುಂಪಾಗಿ ಇರುತ್ತಿದ್ದ ಬೀದಿ ನಾಯಿಗಳು ಈಗ ನಗರದ ಎಲ್ಲಾ ಪ್ರತಿಷ್ಠಿತ ಬಡಾವಣೆಗಳಲ್ಲೂ ಕಂಡು ಬರುತ್ತಿದ್ದು, ನಾಗರೀಕರ ಆತಂಕಕ್ಕೆ ಕಾರಣವಾಗಿದೆ. ಶಾಲಾ ಮಕ್ಕಳು ಊಟದ ಬಾಕ್ಸ್, ಪುಸ್ತಕಗಳ ಬ್ಯಾಗ್ ಹೊತ್ತು ರಸ್ತೆಗಿಳಿಯಲು ಹೆದರಬೇಕಾಗಿದೆ.ಪ್ರಾಣಿದಯಾ ಸಂಘ ನಾಯಿ ತಡೆಗೆ ಅಡ್ಡಿ:
ಹಿಂದೆ ನಾಯಿಗಳಿಗೆ ವಿಷ ಚುಚ್ಚುಮದ್ದು ನೀಡಿ ಸಾಯಿಸುವ ಕಾಲವೊಂದಿತ್ತು. ಈ ನಡುವೆ ನಗರಸಭೆ ಸದಸ್ಯರನ್ನು ಈ ಕುರಿತು ಪ್ರಶ್ನಿಸಿದರೆ ಪ್ರಾಣಿದಯಾ ಸಂಘ ನಾಯಿಗಳನ್ನು ಕೊಲ್ಲಲು ಅವಕಾಶ ನೀಡುತ್ತಿಲ್ಲ. ಅವರು ಕೇಸ್ ಹಾಕುತ್ತಾರೆ ಎಂದು ಹೇಳಿ ಜಾರಿಕೊಳ್ಳುತ್ತಾರೆ. ನಂತರ ಕಳೆದ ಒಂದೂವರೆ ವರ್ಷದ ಹಿಂದೆ ಪ್ರಾಣಿದಯಾ ಸಂಘದ ಒತ್ತಡದ ಹಿನ್ನೆಲೆಯಲ್ಲಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿ ಅವುಗಳ ಸಂತತಿ ಮಿತಿ ಮೀರದಂತೆ ನೋಡಿಕೊಳ್ಳುವ ಪ್ರಯತ್ನವಾಗಿದ್ದು, ಇದೀಗ ಅದಕ್ಕೂ ಹಣಕಾಸಿನ ಕೊರತೆ ಕಾಡುತ್ತಿದೆ ಎಂಬುದು ಗಮನಾರ್ಹ.ಒಟ್ಟಾರೆ ಕೋಲಾರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಗೆ ನಗರಸಭೆ ಮುಂದಾಗುತ್ತದೆ ಎಂಬ ಆಶಾವಾದವೂ ನಾಗರಿಕರಿಗೆ ಇಲ್ಲವಾಗಿದೆ. ನಗರಸಭಾ ಸದಸ್ಯರು, ಶಾಸಕರು ಈ ಕುರಿತು ಗಮನಹರಿಸಿ ಬೀದಿ ನಾಯಿಗಳ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕೆಲಸ ಮಾಡದಿದ್ದರೆ ನಾಗರಿಕರೇ ಬೀದಿಗಿಳಿದು ಪ್ರತಿಭಟನೆ ನಡೆಸುವುದು ಖಚಿತ. ಕೋಟ್.........ಒಂದು ನಾಯಿಗೆ 1,750 ರೂ ಖರ್ಚು ಮಾಡಿ ಕಳೆದ ಒಂದೂವರೆ ವರ್ಷದ ಹಿಂದೆ 866 ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗಿತ್ತು. ಇದೀಗ ನಗರಸಭೆಗೆ ಬರುವ ಆದಾಯ ನಿರ್ವಹಣೆಗೆ ಸಾಕಾಗುತ್ತಿಲ್ಲವಾದ ಕಾರಣ ನಾಯಿಗಳ ತಡೆಗೆ ಪ್ರಯತ್ನವಂತೂ ಸಾಧ್ಯವಿಲ್ಲ.- ಎಸ್.ಆರ್.ಮುರಳಿಗೌಡ, 14ನೇ ವಾರ್ಡ್ ನಗರಸಭಾ ಸದಸ್ಯ.