ಮಾಲೀಕರ ನಿರ್ಲಕ್ಷ್ಯ: ಬೀದಿಗೆ ಬಿದ್ದ ದನಗಳು

KannadaprabhaNewsNetwork |  
Published : Jul 06, 2026, 02:30 AM IST
ಎಚ್‌೦೪.೭-ಡಿಎನ್‌ಡಿ೧ಎ: ರಸ್ತೆಯ ಮೇಲೆ ಇರುವ ದನಗಳು, ಡಿಎನ್‌ಡಿ೧ಬ: ನಗರಸಭೆಯ ಮೈದಾನವೇ ನಮ್ಮ ಮನೆಯಂತೆ ಮಲಗಿರುವ ದನಗಳು. | Kannada Prabha

ಸಾರಾಂಶ

ನಗರ ಮತ್ತು ಅದರ ಸುತ್ತಮುತ್ತಲ ಗ್ರಾಮಗಳ ಜನರು ತಾವು ಸಾಕಿಕೊಂಡಿರುವ ಗೋವುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿ ಸಾಕದೇ ಅವುಗಳನ್ನು ಬೀದಿಯಲ್ಲಿ ಬಿಟ್ಟು ಬಿಡುವುದರಿಂದ ನಗರದ ರಸ್ತೆಗಳು, ಅಂಗಡಿ ಮುಂಗಟ್ಟು, ತೆರೆದ ಮೈದಾನಗಳು ಬಿಡಾಡಿ ದನಗಳ ವಾಸಸ್ಥಾನವಾಗುತ್ತಿವೆ.

ರಸ್ತೆ, ಅಂಗಡಿ ಮುಂಗಟ್ಟು, ತೆರೆದ ಮೈದಾನ ಬಿಡಾಡಿ ದನಗಳ ವಾಸಸ್ಥಾನ

ಗುರುಶಾಂತ ಜಡೆಹಿರೇಮಠ

ಕನ್ನಡಪ್ರಭ ವಾರ್ತ ದಾಂಡೇಲಿ

ನಗರ ಮತ್ತು ಅದರ ಸುತ್ತಮುತ್ತಲ ಗ್ರಾಮಗಳ ಜನರು ತಾವು ಸಾಕಿಕೊಂಡಿರುವ ಗೋವುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿ ಸಾಕದೇ ಅವುಗಳನ್ನು ಬೀದಿಯಲ್ಲಿ ಬಿಟ್ಟು ಬಿಡುವುದರಿಂದ ನಗರದ ರಸ್ತೆಗಳು, ಅಂಗಡಿ ಮುಂಗಟ್ಟು, ತೆರೆದ ಮೈದಾನಗಳು ಬಿಡಾಡಿ ದನಗಳ ವಾಸಸ್ಥಾನವಾಗುತ್ತಿವೆ.

ಕಟ್ಟಿ ಸಾಕಬೇಕಾಗಿದ್ದ ದನಕರುಗಳು ಬೀಡಾಡಿ ದನಗಳಾಗಿ ನಗರದ ಬೀದಿ, ಮನೆ ಮನೆಗಳಲ್ಲಿ ಅಲೆದಾಡುತ್ತ ಆಹಾರ ಹುಡುಕುತ್ತಿರುತ್ತವೆ. ಈ ಬೀಡಾಡಿ ದನಗಳಿಗೆ ರಸ್ತೆಯ ಅಕ್ಕ ಪಕ್ಕದಲ್ಲಿ ಬಿದ್ದ ಆಹಾರದ ಜೊತೆ ಪ್ಲಾಸ್ಟಿಕ್‌ಗಳು, ರದ್ದಿ ಕಾಗದ, ಹೋಟೆಲ್‌ನವರು ಚೆಲ್ಲಿದ ತ್ಯಾಜ್ಯ ಹೀಗೆ ತಿನ್ನುತ್ತ ನೂರಾರು ಬೀಡಾಡಿ ದನಗಳು ಪ್ರತಿನಿತ್ಯ ರಸ್ತೆ, ಅಂಗಡಿ ಮುಂದುಗಡೆ, ಮೈದಾನಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಂತಿರುವುದು, ಮಲಗಿಕೊಂಡಿರುವುದು ಕಂಡುಬರುತ್ತವೆ. ಇನ್ನು ನಗರಸಭೆಯ ಮೈದಾನದಲ್ಲಿ ಪ್ರತಿ ದಿನ ಹಿಂಡುಹಿಂಡಾಗಿ ದನಗಳು ಬರುವುದರಿಂದ ಮೈದಾನ ದನಗಳ ಹಟ್ಟಿಯಂತಾಗಿದೆ. ಸುತ್ತಮುತ್ತಲ ಪ್ರದೇಶದ ಜನರಿಗೆ ಇದರಿಂದ ಬಹಳ ಕಷ್ಟವಾಗಿದೆ.

ಸುಗಮ ಸಂಚಾರಕ್ಕೆ ಅಡ್ಡಿ:

ಬಿಡಾಡಿ ದನಗಳು ನಗರದಲ್ಲಿ ಅನೇಕ ಅವಘಡಗಳಿಗೆ ಕಾರಣವಾಗುತ್ತಿವೆ. ರಸ್ತೆಯಲ್ಲಿ ನಿಲ್ಲುವ, ಮಲಗಿರುವ ಈ ಬಿಡಾಡಿ ದನಗಳಿಂದ ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ದನಗಳಿಂದ ಕೆಲವು ರಸ್ತೆ ಅಪಘಾತಗಳು ಆಗಿದ್ದಿದೆ. ಜೊತೆಗೆ ರಸ್ತೆಗಳ ಡಿವೈಡರ್ ಮೇಲೆ ಮಲಗುವ ಈ ದನಗಳು ರಸ್ತೆಯ ಅಂದವನ್ನು ಕೂಡ ಕೆಡಿಸುತ್ತವೆ. ರಸ್ತೆಗಳಲ್ಲಿ ನಿಲ್ಲುವ, ಮಲಗುವ ಬಿಡಾಡಿ ದನಗಳಿಂದ ಅನೇಕ ಅಪಘಾತಗಳು ಸಂಭವಿಸಿದೆ. ಪ್ರತಿನಿತ್ಯ ಟ್ರಾಫಿಕ್ ಜಾಮ್ ಆಗುತ್ತಿದೆ.

ಪಶು ಪಾಲಕರ ನಿರ್ಲಕ್ಷ್ಯ:

ನಗರದ ಅನೇಕ ಜನರು ಸಾಕಿದ ದನಕರುಗಳಿದ್ದರೂ ಕೂಡ ದನ ಸಾಕಿದವರು ಅವುಗಳ ಪಾಲನೆ ಮಾಡುತ್ತಿಲ್ಲ. ಇನ್ನು ಆಕಳುಗಳು ಗರ್ಭ ಧರಿಸಿದರೆ ಅವು ಕರು ಹಾಕಿದ ನಂತರ ಅದು ಹೇಗೋ ಸುದ್ದಿಯಾದ ನಂತರ ಆಕಳು ಮತ್ತು ಕರವನ್ನು ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಿ ಹಾಲನ್ನು ಕರೆಯುತ್ತಾರೆ. ಆದರೆ ಆಕಳು ಹಾಲು ಕೊಡುವುದನ್ನು ನಿಲ್ಲಿಸಿದಾಗ ಅವನ್ನು ಬಯಲಿಗೆ ಬಿಟ್ಟುಬಿಡುತ್ತಾರೆ. ವಯಸ್ಸಾದ ಅನೇಕ ಬೀಡಾಡಿ ದನಗಳು ಕಟುಕರ ಕೈ ಸೇರುತ್ತವೆ. ಗೋ ರಕ್ಷಕರು ದಿನಾಲು ಪರದಾಡುವಂತೆ ಪಶು ಪಾಲಕರು ಮಾಡಿದ್ದಾರೆ ಇದಕ್ಕೆ ಯಾವುದೇ ಕಾನೂನಾತ್ಮ ಕ್ರಮ ಇಲ್ಲವೇನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ನಗರ ವ್ಯಾಪ್ತಿಯಲ್ಲಿ ಜಾನುವಾರುಗಳನ್ನು ಸಾಕುತ್ತಿರುವ ಮಾಲೀಕರು ವಾರದೊಳಗೆ ಜಾನುವಾರುಗಳ ಕಟ್ಟಿ ಸಾಕುವ ವ್ಯವಸ್ಥೆ ಮಾಡಿಕೊಳ್ಳಬೇಕು. ಹಾಗೆ ಮಾಡದೇ ಬೀದಿಗಳಲ್ಲಿ ಬಿಟ್ಟರೆ ಯಾವುದೇ ಮುನ್ಸೂಚನೆ ನೀಡದೇ ಅವುಗಳನ್ನು ಗೋಶಾಲೆಗೆ ಕಳುಹಿಸುವ ಜೊತೆಗೆ, ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಲಾಗುತ್ತದೆ ಎನ್ನುತ್ತಾರೆ ನಗರಸಭೆ ಪೌರಾಯುಕ್ತ ವಿವೇಕ ಬನ್ನೆ.

ದನಕರುಗಳು ರಸ್ತೆಯ ಮಧ್ಯೆ ನಿಲ್ಲುವುದರಿಂದ ಅಪಘಾತಗಳ ಹೆಚ್ಚಾಗುತ್ತಿವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ರಸ್ತೆಯಲ್ಲಿ ಹೋಗುವುದೇ ಕಷ್ಟವಾಗುತ್ತಿದೆ ಎಂದು ನಗರಸಭೆ ಮಾಜಿ ಸದಸ್ಯ ಡಿ.ಸ್ಯಾಮಸನ್‌ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಪರಾಧ ಮುಕ್ತ ನಾಳೆಗೆ ಮುನ್ನುಡಿ ಬರೆದ ಕೈದಿಗಳ ಸೃಜನಶೀಲತೆ
ಕೈಗಾರಿಕಾ ಸಂಘಗಳು ನೋಂದಣಿ ಮಾಡಿಕೊಳ್ಳಲಿ: ಸಾಜಿದ್ ಮುಲ್ಲಾ