ಆಕ್ಸಿಜನ್ ದುರಂತ: ಸಂತ್ರಸ್ತರಿಗೆ ನ್ಯಾಯ ಒದಗಿಸಿ

KannadaprabhaNewsNetwork |  
Published : Feb 11, 2025, 12:50 AM IST
10ಸಿಎಚ್‌ಎನ್‌51ಜಾತಿಗಣತಿ ವರದಿ ಜಾರಿ ಹಾಗೂ 2ಎ ಮೀಸಲಾತಿ ಮರುಸ್ಥಾಪನೆ ಮತ್ತು ಆಕ್ಸಿಜನ್ ದುರಂತ ಪ್ರಕರಣದ ಸಂತ್ರಸ್ತರಿಗೆ ನ್ಯಾಯಕ್ಕೆ ಆಗ್ರಹಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಜಾತಿಗಣತಿ ವರದಿ ಜಾರಿ ಹಾಗೂ 2ಎ ಮೀಸಲಾತಿ ಮರುಸ್ಥಾಪನೆ ಮತ್ತು ಆಕ್ಸಿಜನ್ ದುರಂತ ಪ್ರಕರಣದ ಸಂತ್ರಸ್ತರಿಗೆ ನ್ಯಾಯಕ್ಕೆ ಆಗ್ರಹಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭವಾರ್ತೆ ಚಾಮರಾಜನಗರ

ಜಾತಿಗಣತಿ ವರದಿ ಜಾರಿ ಹಾಗೂ 2ಎ ಮೀಸಲಾತಿ ಮರುಸ್ಥಾಪನೆ ಮತ್ತು ಆಕ್ಸಿಜನ್ ದುರಂತ ಪ್ರಕರಣದ ಸಂತ್ರಸ್ತರಿಗೆ ನ್ಯಾಯಕ್ಕೆ ಆಗ್ರಹಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೋರಟು ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಸಾಗಿ ಜಿಲ್ಲಾಡಳಿತ ಭವನಕ್ಕೆತಲುಪಿ ಜಿಲ್ಲಾಡಳಿತ ಭವನದ ಮುಂಭಾಗ ಕುಳಿತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಡಿಪಿಐ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, 2021ರ ಮೇ.2 ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸುಮಾರು 36 ಮಂದಿ ಮೃತರಾಗಿ 4 ವರ್ಷ ಕಳೆದಿದೆ. ಅಂದಿನ ಬಿಜೆಪಿ ಸರ್ಕಾರದ ನಿರ್ಲಕ್ಷ್ಯತೆಯಿಂದ ಈ ದುರ್ಘಟನೆ ನಡೆಯಿತು. ಸಂತ್ರಸ್ತರ ಪರ ನಿಲ್ಲಬೇಕಾದ ಸರ್ಕಾರ ಘಟನೆಯನ್ನು ಮರೆಮಾಚಲು ಯತ್ನಿಸಿತು ಎಂದು ದೂರಿದರು.ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಬಂದರೆ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಆದರೆ, ಸರ್ಕಾರ ಸಂತ್ರಸ್ತರಿಗೆ ತಾತ್ಕಾಲಿಕ ಉದ್ಯೋಗ ನೀಡಿ ಕೈ ತೊಳೆದುಕೊಂಡಿದೆ. ಜೊತೆಗೆ ಘಟನೆಗೆ ಕಾರಣರಾದ ಯಾವೊಬ್ಬ ಅಧಿಕಾರಿಗಳ ವಿರುದ್ಧವೂ ಯಾವುದೇ ಕ್ರಮ ಜರುಗಿಸಲಿಲ್ಲ ಎಂದು ಆರೋಪಿಸಿದರು.

ನಾಲ್ಕು ವರ್ಷದಿಂದ ನ್ಯಾಯ ಕೇಳಬೇಕಾ? ಮೊದಲ ತಪ್ಪಿತಸ್ಥ ಸ್ಥಾನದಲ್ಲಿ ಅಂದಿನ ಎಂಪಿ ಪ್ರತಾಪ್‌ಸಿಂಹ ಇರತ್ತಾರೆ. ಚಾಮರಾಜನಗರಕ್ಕೆ ಆಕ್ಸಿಜನ್‌ ಕೊಡಬಾರದು ಎಂದು ನಿರ್ದೇಶನ ನೀಡಿದಾಗ ಜಿಲ್ಲಾಧಿಕಾರಿ ತಡ ಮಾಡಿದರು. ಮೂರನೇಯ ತಪ್ಪಿತಸ್ಥರು ಚಾಮರಾಜನಗರ ಉಸ್ತುವಾರಿ ಸಚಿವರು. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಘಟನೆಗೆ ಕಾರಣರಾದವರನ್ನು ನ್ಯಾಯಾಲಯದ ಕಟಕಟೆ ಮುಂದೆ ನಿಲ್ಲಿಸಬೇಕು ಎಂದರು.

2015ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 170 ಕೋಟಿ ಖರ್ಚು ಮಾಡಿ ನಡೆಸಿದ ಜಾತಿಗಣತಿ ವರದಿ ಕೂಡಲೇ ಜಾರಿಗೊಳಿಸಬೇಕು. ಜೊತೆಗೆ ಮುಸ್ಲಿಂ ಸಮುದಾಯಕ್ಕೆ ಮೀಸಲಿದ್ದ 2(ಬಿ) ಮೀಸಲಾತಿಯನ್ನು ಅಂದಿನ ಬಿಜೆಪಿ ಸರ್ಕಾರ ರದ್ದುಪಡಿಸಿ ಅನ್ಯಾಯ ಮಾಡಿತ್ತು. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ನೀಡಿದ್ದ ಭರವಸೆಯಂತೆ 2(ಬಿ) ಮೀಸಲಾತಿಯನ್ನು ಮರುಸ್ಥಾಪಿಸಬೇಕು. ಮೀಸಲಾತಿಯನ್ನು ಶೇ.8ಕ್ಕೆ ಏರಿಕೆ ಮಾಡಿ ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದರು.ಚಾಮರಾಜನರಕ್ಕೆ ಆಗಮಿಸಿ ಫಲಾನುಭವಿಗಳ ಸಮಾವೇಶ ಮಾಡುವ ಮೊದಲೇ ಸಿಎಂ ಸಿದ್ದರಾಮಯ್ಯ ಅವರು ಮುಖಂಡರ ಸಭೆ ಕರೆದು ಈ ಸಂಬಂಧ ಚರ್ಚೆ ನಡೆಸಿ ನ್ಯಾಯ ದೊರಕಿಸಬೇಕು. ಇಲ್ಲದಿದ್ದರೆ ಚಾ.ನಗರದಲ್ಲಿ ನಡೆಯುವ ಫಲಾನುಭವಿಗಳ ಸಮಾವೇಶಕ್ಕೆ ಕಪ್ಪುಭಾವುಟ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಬ್ರಾರ್ ಅಹಮ್ಮದ್, ಜಿಲ್ಲಾಧ್ಯಕ್ಷ ಖಲೀಲ್ ವುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಾಳೀಪುರ ಮಹೇಶ್, ಮುಖಂಡರಾದ ವೆಂಕಟರಮಣ ಸ್ವಾಮಿ ಪಾಪು, ಕೆ. ವೆಂಕಟರಾಜು, ದೇವನೂರು ಪುಟ್ಟನಂಜಯ್ಯ, ಸಿ.ಎಂ ಕೃಷ್ಣಮೂರ್ತಿ, ನಮ್ಮನೆ ಪ್ರಶಾಂತ್, ಬಂಗಾರಸ್ವಾಮಿ, ಮಹೇಂದ್ರ, ರಾಮಸಮುದ್ರ ಸುರೇಶ್, ಸುಂದರ್ ಕಲಿವೀರ, ಆಕ್ಸಿಜನ್ ದುರಂತದ ಸಂತ್ರಸ್ಥರು ಸೇರಿದಂತೆ ಇತರರು ಭಾಗವಹಿಸಿದ್ದರು.ಉಡಾಫೆ ಬಿಜೆಪಿಗಿಂತ ಕಾಂಗ್ರೆಸ್‌

ಸರ್ಕಾರ ಅಪಾಯಕಾರಿ: ನಟ ಚೇತನ್‌ಉಡಾಫೆ ಬಿಜೆಪಿ ಸರ್ಕಾರಕಿಂತ ಈಗಿರುವ ಸರ್ಕಾರ ಇನ್ನೂ ಅಪಾಯಕಾರಿ, ಬಣ್ಣ ಬಣ್ಣದ ಮಾತನಾಡುತ್ತಾರೆ ಜನರ ಜೀವನಕ್ಕೆ ನ್ಯಾಯ ಒದಗಿಸಲ್ಲ, ಈಗಿನ ಸರ್ಕಾರ ನಂಬಿಕೆ ದ್ರೋಹ ಮಾಡಿದೆ ಎಂದು ನಟ ಚೇತನ್‌ ಅಹಿಂಸಾ ಕಿಡಿ ಕಾರಿದರು. ರಾಜ್ಯ ಸರ್ಕಾರ ತಂತ್ರ-ಕುತಂತ್ರದ ಸರ್ಕಾರವಾಗಿದ್ದು ನುಡಿದಂತೆ ನಡೆಯದ ಸರ್ಕಾರವಾಗಿದೆ. ಜೋಡೋ ಯಾತ್ರೆಯಲ್ಲಿ ತಪ್ಪು ಮಾಡಿದ ಸರ್ಕಾರವನ್ನು ಆಚೆ ಹಾಕಿ ತಪ್ಪು ಸರಿಪಡಿಸುತ್ತೇವೆ. ನಿಮಗೆ ನ್ಯಾಯ ಕೊಡಿಸುತ್ತೇವೆ ಎಂದು ಅಂದು ವಿಪಕ್ಷದಲ್ಲಿದ್ದ ಕಾಂಗ್ರೆಸ್‌ ಮಾತು ಕೊಟ್ಟಿತ್ತು. ಸಿಎಂ, ಡಿಸಿಎಂ ಸೇರಿದಂತೆ ಯಾರು ಮಾತುಕೊಟ್ಟಿದ್ದಾರೆ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಿ. ಅನ್ಯಾಯಕ್ಕೆ ಒಳಗಾಗಿರುವವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ ಎಂದರು.ತಪ್ಪು ಮಾಡಿದ ಸರ್ಕಾರವನ್ನು ಆಚೆ ಹಾಕಿದ್ದೇವೆ. ಆದರೆ ಈ ಸರ್ಕಾರ ತಪ್ಪು ಮಾಡಿರುವುದನ್ನು ತಿದ್ದುಕೊಳ್ಳಲ್ಲ, ಸಂವಿಧಾನ ಜಾಥಾ ಮಾಡುತ್ತಾರೆ. ಸಂವಿಧಾನ ಎತ್ತಿಹಿಡಿಯುವ ನ್ಯಾಯವನ್ನು ನೀಡಿಲ್ಲ, ಬೇರೆ ಸರ್ಕಾರ ತಪ್ಪು ಮಾಡಿರಬಹುದು ಅದನ್ನು ಸರಿಪಡಿಸುವುದು ಈಗಿನ ರಾಜ್ಯ ಸರ್ಕಾರದ ಕೆಲಸವಾಗಬೇಕು, ನ್ಯಾಯದ ಪರಿಕಲ್ಪನೆ ಎತ್ತಿಹಿಡಿಯಿರಿ ನಂಬಿಕೆ ದ್ರೋಹ ಮಾಡಬಾರದು ಎಂದರು.

ಬಡತನದಲ್ಲಿರುವವರು, ಮಧ್ಯಮ ವರ್ಗದವರುವವರು, ಗ್ರಾಮೀಣ ಭಾಗದಲ್ಲಿರುವವರು, ಶಿಕ್ಷಣದಿಂದ ವಂಚಿತರಾಗಿರುವವರಿಗೆ ಮೊದಲೇ ಅನ್ಯಾಯ ಆಗಿದೆ. ಆಕ್ಸಿಜನ್‌ ಘಟನೆಯಿಂದ ಅನ್ಯಾಯದ ಮೇಲೆ ಅನ್ಯಾಯ ನಡೆದಿದೆ ಇದು ಬಹಳ ದೊಡ್ಡ ದುರಂತ. 36 ಜನರನ್ನು ಸರ್ಕಾರ ಕೊಲೆ ಮಾಡಿದ್ದು, ಈ ಕೊಲೆಯಿಂದ ಯಾರಿಗೆ ಅನ್ಯಾಯವಾಗಿದೆ ಅವರ ಜೀವನಕ್ಕೆ ಮುಂದಿನ ಭವಿಷ್ಯಕ್ಕೆ ನ್ಯಾಯ ಒದಗಿಸಬೇಕು ಎಂದರು

ಸಿಎಂ ಸಿದ್ದರಾಮಯ್ಯ ಅ‍ವರು ಅಹಿಂದ ನಾಯಕರಾದರೇ ಅನ್ಯಾಯ ಸರಿಪಡಿಸಿ ಜನಸಂಖ್ಯೆ ಆದಾರದ ಮೇಲೆ ಎಲ್ಲ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಸಮಸಮಾಜಕ್ಕೆ ನಾನು ಹೋರಾಟ ಮಾಡುತ್ತಿದ್ದೇನೆ. ಚಾಮರಾಜನಗರದಿಂದಲೇ ನಾನು ಹೋರಾಟ ಪ್ರಾರಂಭಿಸಿದ್ದೆ. ಮತ್ತೇ ಇಲ್ಲಿಂದಲೇ ಹೋರಾಟವನ್ನು ಪ್ರಾರಂಭಿಸುತ್ತೇನೆ ಎಂದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ