ರಾಜ್ಯ ಪೊಲೀಸರ ಮುಡಿಗೇರಿದ ಪಿ-ಕ್ಯಾಪ್‌

KannadaprabhaNewsNetwork |  
Published : Oct 29, 2025, 01:15 AM IST
ಪಿ-ಕ್ಯಾಪ್‌ | Kannada Prabha

ಸಾರಾಂಶ

ಕೆಲ ಪೊಲೀಸರು ರಿಯಲ್‌ ಎಸ್ಟೇಟ್‌ ಮಾಡುವವರು, ಡ್ರಗ್ಸ್‌ ಜಾಲದ ಜೊತೆ ಶಾಮಿಲಾಗಿರುತ್ತಾರೆ, ಪೊಲೀಸರ ಬಗ್ಗೆ ಅಪರಾಧ ಜಗತ್ತಿಗೆ ಭಯ ಕಡಿಮೆಯಾಗಿರುವ ಬಗ್ಗೆ ಸ್ವಯಂ ಪ್ರಶ್ನಿಸಿಕೊಂಡರೆ ಉತ್ತರ ಸಿಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಲ ಪೊಲೀಸರು ರಿಯಲ್‌ ಎಸ್ಟೇಟ್‌ ಮಾಡುವವರು, ಡ್ರಗ್ಸ್‌ ಜಾಲದ ಜೊತೆ ಶಾಮಿಲಾಗಿರುತ್ತಾರೆ, ಪೊಲೀಸರ ಬಗ್ಗೆ ಅಪರಾಧ ಜಗತ್ತಿಗೆ ಭಯ ಕಡಿಮೆಯಾಗಿರುವ ಬಗ್ಗೆ ಸ್ವಯಂ ಪ್ರಶ್ನಿಸಿಕೊಂಡರೆ ಉತ್ತರ ಸಿಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ರಾಜ್ಯ ಪೊಲೀಸ್ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಾಂಕೇತಿಕವಾಗಿ ಪೊಲೀಸರಿಗೆ ನೂತನ ‘ಪಿ- ಕ್ಯಾಪ್‌’ ತೊಡಿಸಿ, ಸ್ಲೋಚ್ ಕ್ಯಾಪ್‌ಗೆ ಅಧಿಕೃತವಾಗಿ ವಿದಾಯ ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಡ್ರಗ್ಸ್‌ ತರುವವರು, ಮಾರುವವರ ಬಗ್ಗೆ, ಡ್ರಗ್ಸ್ ಎಲ್ಲಿಂದ ಬರುತ್ತದೆ, ಈ ಜಾಲದ ಏಜೆಂಟರು ಯಾರ್‍ಯಾರು ಎಂಬುದು ನಿಮಗೆ ಗೊತ್ತಿರುತ್ತದೆ. ‘ಡ್ರಗ್ಸ್‌ ಮುಕ್ತ ಕರ್ನಾಟಕ’ ನನ್ನ ಗುರಿಯಾಗಿದ್ದು, ನಿಮ್ಮ ಗುರಿಯೂ ಆಗಿರಲಿ, ಯುವ ಜನರ ಚೈತನ್ಯ ಮತ್ತು ಸಾಮರ್ಥ್ಯ ಮಾದಕ ವಸ್ತುಗಳಿಗೆ ಬಲಿಯಾಗಬಾರದು, ಈ ನಿಟ್ಟಿನಲ್ಲಿ ಡ್ರಗ್ಸ್‌ ಮುಕ್ತ ಕರ್ನಾಟಕ ಮಾಡಲು ಪೊಲೀಸ್‌ ಇಲಾಖೆ ಕಟಿಬದ್ಧ ನಿಲುವು ತಳೆಯಬೇಕು. ಇದರಿಂದ ಇಡೀ ಕರ್ನಾಟಕ ಜನತೆ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತಾರೆ ಎಂದರು.

ಕೇವಲ ಕ್ಯಾಪ್ ಬದಲಾಗುವುದಲ್ಲ. ನಿಮ್ಮ ಕಾರ್ಯಕ್ಷಮತೆಯೂ ಬದಲಾಗಲಿ ಎಂದು ಆಶಿಸಿದ ಮುಖ್ಯಮಂತ್ರಿಗಳು, ಈ ಪೀಕ್ ಕ್ಯಾಪ್ ಮಾದರಿಯನ್ನೂ ಆಯ್ಕೆ ಮಾಡಿದ್ದು ನಾನೇ. 1956 ರಿಂದ ಸುಮಾರು 70 ವರ್ಷಗಳಿಂದ ಇದ್ದ ಒಂದೇ ಮಾದರಿಯ ಕ್ಯಾಪ್ ಬದಲಾಯಿಸಿದ್ದೇವೆ. ಅಧಿಕಾರಿ ಮತ್ತು ಸಿಬ್ಬಂದಿಗೆ ಒಂದೇ ಮಾದರಿ ಕ್ಯಾಪ್ ಒದಗಿಸಲಾಗಿದೆ. ಇದರಿಂದ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಲಿ ಎಂದು ಹೇಳಿದರು.

ಇದೇ ವೇಳೆ ಮಾದಕ ವಸ್ತು ವಿರೋಧಿ ಕಾರ್ಯಪಡೆಗೆ ಮುಖ್ಯಮಂತ್ರಿ ಚಾಲನೆ ನೀಡಿದರು. ಅಲ್ಲದೆ ಸನ್ಮತ್ರಿ ಅನ್ನು ಅವರು ಬಿಡುಗಡೆಗೊಳಿಸಿದರು.

---ಬಾಕ್ಸ್‌.....

ಅರಸು ಸ್ಲೋಚ್ ಕೊಟ್ಟಿದ್ದರು: ಪರಂ

1973ರಲ್ಲಿ ದೇವರಾಜು ಅರಸು ಅವರು ಸಿಎಂ ಆಗಿದ್ದಾಗ ಪೊಲೀಸರಿಗೆ ಸ್ಲೋಚ್ ಹ್ಯಾಟ್ ಪರಿಚಯಿಸಿದ್ದರು. ಅಂದಿನಿಂದ ಇಲ್ಲಿವರೆಗೆ ಟೋಪಿಯಲ್ಲಿ ಯಾವುದೇ ಬದಲಾವಣೆ ಇಲ್ಲದೆ, ಕಷ್ಟನೋ, ಸುಖನೋ ಪೊಲೀಸರು ಧರಿಸುತ್ತಿದ್ದರು. ಆದರೆ ಕ್ಯಾಪ್ ಬದಲಾವಣೆ ಮಾಡುವಂತೆ ಒತ್ತಾಯವಿತ್ತು ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.

ಮಳೆ ಬಂದಾಗ ಹೆಚ್ಚು ತೂಕ ಅಗುತ್ತದೆ. ನೋಡುವುದಕ್ಕು ಅಷ್ಟು ಸುಂದರವಾಗಿ ಕಾಣುವುದಿಲ್ಲ ಎಂಬ ಅಭಿಪ್ರಾಯಗಳು ಬಂದವು. 2015ರಲ್ಲಿ ಗೃಹ ಸಚಿವನಾಗಿದ್ದಾಗ ಕ್ಯಾಪ್‌ ಬದಲಾವಣೆಯ ಪ್ರಸ್ತಾವನೆ ಬಂದಿತ್ತು. ಅನೇಕ ಕಾರಣಗಳಿಂದ ಸಾಧ್ಯವಾಗಲಿಲ್ಲ. ಆದರೆ ಹಿರಿಯ ಅಧಿಕಾರಿಗಳು, ಬೇರೆ ರಾಜ್ಯಗಳ ಕ್ಯಾಪ್ ಮಾಹಿತಿ ತರಿಸಿಕೊಂಡು ಪ್ರದರ್ಶಿಸಿದರು. ಮುಖ್ಯಮಂತ್ರಿ ಅವರೇ ನೀಲಿ ಬಣ್ಣದ ಕ್ಯಾಪ್ ಆಯ್ಕೆ ಮಾಡಿದರು ಎಂದರು.

ಪಿ ಕ್ಯಾಪ್‌ನಿಂದ ಒಂದು ರೀತಿಯಲ್ಲಿ ಆತ್ಮಸ್ಥೈರ್ಯ ಬಂದಿದೆ. ಅಧಿಕಾರಿಗಳಿಗೂ, ತಮಗೂ ಯಾವುದೇ ವ್ಯತ್ಯಾಸವಿಲ್ಲ ಎಂಬ ಆತ್ಮಸ್ಥೈರ್ಯ ನಿಮ್ಮಲ್ಲಿ‌ ಮೂಡಿದೆ ಎಂದು ಅಭಿಪ್ರಾಯಪಟ್ಟರು.

ಕರಾವಳಿ ಕೋಮು ಸಂಘರ್ಷ ತಪ್ಪಿದೆ-ಸಿಎಂ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಘರ್ಷಣೆ, ಅನೈತಿಕ ಪೊಲೀಸ್ ಗಿರಿ ಹೆಚ್ಚಾಗಿತ್ತು. ಆ ಪ್ರದೇಶದಲ್ಲಿ ಕೆಲಸ ಮಾಡಿದ್ದ ಅಧಿಕಾರಿಗಳು ನಿಯಂತ್ರಣ ಮಾಡಲಿಲ್ಲ. ಆಗ ಜಿಲ್ಲೆಯ ಇಬ್ಬರು ಅಧಿಕಾರಿಗಳನ್ನು ಬದಲಾಯಿಸಲಾಯಿತು. ಈಗ ದಕ್ಷಿಣ ಕನ್ನಡ ಜಿಲ್ಲೆ ನಿಯಂತ್ರಣದಲ್ಲಿದೆ. ಈ ಸಾಧನೆ ಮಾಡಿದ್ದೂ ನಮ್ಮದೇ ಅಧಿಕಾರಿಗಳು ಮತ್ತು ಸಿಬ್ಬಂದಿ. ಇವರೇನು ಬೇರೆ ಗ್ರಹದಿಂದ ಬಂದವರಲ್ಲ. ನಿಮ್ಮವರೇ, ನಮ್ಮವರೇ ಆಗಿದ್ದಾರೆ. ಆದ್ದರಿಂದ ನೀವು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಿದೆ. ಸಾಧಿಸಿ ತೋರಿಸಿ ಎಂದರು. ಹುರಿದುಂಬಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಹಾಗೂ ಆಯುಕ್ತ ಸೀಮಂತ್ ಕುಮಾರ್ ಸೇರಿ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ಉಪಸ್ಥಿತರಿದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು