ಪಿ.ಎಂ. ವಿಶ್ವಕರ್ಮ ಯೋಜನೆ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಸಭೆ

KannadaprabhaNewsNetwork |  
Published : Feb 18, 2025, 12:33 AM IST
ಚಿತ್ರ : 17ಎಂಡಿಕೆ3 : ವಿಶ್ವಕರ್ಮ’ ಯೋಜನೆ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆ ನಡೆಯಿತು.  | Kannada Prabha

ಸಾರಾಂಶ

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಸಭೆಯು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.

ಅಗತ್ಯ ಮಾಹಿತಿ ಒದಗಿಸಲು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚನೆ

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಸಭೆಯು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಮಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ, ಪ್ರಧಾನಮಂತ್ರಿ ವಿಶ್ವಕರ್ಮ ಕಾರ್ಯಕ್ರಮದಡಿ ಇದುವರೆಗೆ ಜಿಲ್ಲೆಯ 103 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ಮಂದಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗಿದೆ. ಜೊತೆಗೆ ಪ್ರಮಾಣ ಪತ್ರ ವಿತರಿಸಲಾಗಿದೆ ಎಂಬ ಮಾಹಿತಿಯ ಪಟ್ಟಿ ಒದಗಿಸುವಂತೆ ಸಲಹೆ ಮಾಡಿದರು.ಈ ಕುರಿತು ಮಾಹಿತಿ ನೀಡಿದ ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಶಿವಲಿಂಗಯ್ಯ, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಟೈಲರ್, ಕಾರ್ಪೆಂಟರ್, ಬಾರ್ಬರ್ಸ್‌, ಲಾಂಡ್ರಿ ವರ್ಕರ್ಸ್‌, ಗಾರ್‌ಲೆಂಡ್ ಮೇಕರ್, ಡಾಲ್ ಆ್ಯಂಡ್ ಟಾಯ್ ಮೇಕರ್, ಪೋಟರ್, ಗೋಲ್ಡ್‌ಸ್ಮಿತ್‌, ಮೆಟಲ್ ಸ್ಮಿತ್, ಬೋಟ್ ಮೇಕರ್, ಆರ್‌ಮೊರರ್, ಸ್ಟೋನ್ ಕಾರ್‌ವರ್, ಲಾಕ್‌ಸ್ಮಿತ್, ಕೊಬ್ಲರ್ ಮತ್ತಿತರ ಕಾರ್ಯಕ್ರಮದಡಿ ತರಬೇತಿ ನೀಡಲಾಗಿದೆ ಎಂದು ವಿವರಿಸಿದರು.ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ 2075 ಅರ್ಜಿ ಸ್ವೀಕರಿಸಲಾಗಿದ್ದು, ಇದರಲ್ಲಿ 676 ಅರ್ಜಿ ಅಂಗೀಕರಿಸಲಾಗಿದೆ. 2 ಅರ್ಜಿಗಳು ತಿರಸ್ಕೃತಗೊಂಡಿದ್ದು, 1397 ಅರ್ಜಿಗಳು ಬಾಕಿ ಇವೆ ಎಂದು ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದರು.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1725 ಅರ್ಜಿ ಸ್ವೀಕರಿಸಲಾಗಿದ್ದು, 438 ಅರ್ಜಿಗಳನ್ನು ಅಂಗೀಕರಿಸಲಾಗಿದೆ. 1286 ಅರ್ಜಿಗಳು ಬಾಕಿ ಇದ್ದು, 1 ಅರ್ಜಿ ತಿರಸ್ಕೃತಗೊಂಡಿದೆ. ಹಾಗೆಯೇ ನಗರ/ಪಟ್ಟಣ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ 350 ಅರ್ಜಿಗಳು ಸ್ವೀಕೃತವಾಗಿದ್ದು, 238 ಅರ್ಜಿ ಅಂಗೀಕರಿಸಲಾಗಿದೆ. 111 ಅರ್ಜಿಗಳು ಬಾಕಿ ಇದ್ದು 1 ಅರ್ಜಿ ತಿರಸ್ಕೃತಗೊಂಡಿದೆ ಎಂದು ಶಿವಲಿಂಗಯ್ಯ ಹೇಳಿದರು.ಈ ಸಂದರ್ಭ ಮಾತನಾಡಿದ ಸಮಿತಿ ಸದಸ್ಯರಾದ ನಾಗೇಶ್ ಕುಂದಲ್ಪಾಡಿ, ತರಬೇತಿ ಪಡೆದವರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆಯೇ, ಸರ್ಕಾರದ ಕಾರ್ಯಕ್ರಮ ಉಪಯೋಗ ಆಗುತ್ತಿದೆಯೇ ಎಂಬ ಬಗ್ಗೆ ಮಾಹಿತಿ ಒದಗಿಸುವಂತಾಗಬೇಕು ಎಂದರು.ಜಿಲ್ಲಾಧಿಕಾರಿ ವೆಂಕಟ್‌ರಾಜಾ ಮಾತನಾಡಿ, ಸಮಿತಿ ಸದಸ್ಯರಿಗೆ ಕಾಲ ಕಾಲಕ್ಕೆ ಮಾಹಿತಿ ನೀಡಬೇಕು. ಸರ್ಕಾರದ ಕಾರ್ಯಕ್ರಮಗಳು ಅರ್ಹರಿಗೆ ತಲುಪುತ್ತಿವೆಯೇ ಎಂಬ ಬಗ್ಗೆ ತಿಳಿಸಬೇಕು ಎಂದು ನಿರ್ದೇಶನ ನೀಡಿದರು.ಕೌಶಲ ಅಭಿವೃದ್ಧಿ ಯೋಜನೆಯಿಂದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಕೌಶಲ ತರಬೇತಿ ಪಡೆದಿರುವ ಬಗ್ಗೆ ಮಾಹಿತಿ ನೀಡುವಂತೆ ಹೇಳಿದರು. ಈ ಸಂದರ್ಭ ಕೌಶಲ ಅಭಿವೃದ್ಧಿ ಇಲಾಖೆ ಅಧಿಕಾರಿ ರೇಖಾ ಗಣಪತಿ, ಹಲವು ಮಾಹಿತಿ ನೀಡಿದರು.ಪ್ರಧಾನಮಂತ್ರಿಯವರ ಉದ್ಯೋಗ ಸೃಜನ ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಖಾದಿ ಗ್ರಾಮೋದ್ಯೋಗ ಮಂಡಳಿ ಹಾಗೂ ಖಾದಿ ಗ್ರಾಮೋದ್ಯೋಗ ಆಯೋಗದ ವತಿಯಿಂದ ಸಹಾಯಧನ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು.ಈ ಸಂದರ್ಭ ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧಿಕಾರಿ ಸುಧಾಮ, ಖಾದಿ ಗ್ರಾಮೋದ್ಯೋಗ ಮಂಡಳಿ ಕಾರ್ಯಕ್ರಮ ಬಗ್ಗೆ ಮಾಹಿತಿ ನೀಡಿದರು.ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ:

ಕುಶಾಲನಗರದ ಕೂಡ್ಲೂರು ಕೈಗಾರಿಕಾ ಪ್ರದೇಶವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಭೆಯಲ್ಲಿ ಚರ್ಚಿಸಲಾಯಿತು.ಕೂಡ್ಲೂರು ಕೈಗಾರಿಕಾ ಪ್ರದೇಶದ ಸುತ್ತಮುತ್ತ ಸಮತಟ್ಟು ಜಾಗ ಬೇಕಿದೆ. ಆ ನಿಟ್ಟಿನಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಜೊತೆ ಚರ್ಚಿಸಲಾಗಿದೆ ಎಂದು ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಶಿವಲಿಂಗಯ್ಯ ಹೇಳಿದರು.ಮಡಿಕೇರಿ ಕೈಗಾರಿಕಾ ವಸಾಹತು ವ್ಯಾಪ್ತಿಯಲ್ಲಿರುವ ವಾಣಿಜ್ಯ ಮಳಿಗೆಯ ಹಸ್ತಾಂತರಿಸುವ ಸಂಬಂಧ ಚರ್ಚಿಸಲಾಯಿತು. ಕೈಗಾರಿಕಾ ಪ್ರದೇಶದ ಜಮೀನನ್ನು ತಮ್ಮ ಇಲಾಖೆ ಹೆಸರಿಗೆ ಆರ್‌ಟಿಸಿ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಕೈಗಾರಿಕಾ ಇಲಾಖೆಯ ವ್ಯಾಪ್ತಿಯ ಜಾಗಗಳನ್ನು ಸಂರಕ್ಷಣೆ ಮಾಡುವತ್ತ ವಿಶೇಷ ಆಸಕ್ತಿ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಕೈಗಾರಿಕಾ ಇಲಾಖೆಯ ಎಂಜಿನಿಯರ್ ಮಾತನಾಡಿ, ಕೈಗಾರಿಕಾ ಇಲಾಖೆ ವ್ಯಾಪ್ತಿಯ ಜಾಗದಲ್ಲಿ ಖಾಸಗಿಯವರ ಭೂಮಿ ಇದ್ದು, ಇದರಿಂದಾಗಿ ತೊಂದರೆಯಾಗಿದೆ ಎಂದು ವಿವರಿಸಿದರು.

ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ಗುರುಸ್ವಾಮಿ ಮಾತನಾಡಿ, ಕುಶಾಲನಗರದ ಸುಂದರ ನಗರದಲ್ಲಿ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ಯೋಜನೆಯಡಿ ಸಿದ್ಧ ಉಡುಪು ಉತ್ಪಾದನಾ ಘಟಕ ತೆರೆಯಲು ಉದ್ದೇಶಿಸಲಾಗಿದ್ದು, ಆ ನಿಟ್ಟಿನಲ್ಲಿ ಸಮಿತಿಯ ಅನುಮತಿ ಬೇಕಿದೆ. ಸುಮಾರು 150 ಜನರಿಗೆ ಉದ್ಯೋಗ ಕಲ್ಪಿಸಬಹುದಾಗಿದೆ ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು.ಪಿಎಂ ವಿಶ್ವಕರ್ಮ ಕಾರ್ಯಕ್ರಮದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸದಸ್ಯರಾದ ರಾಬಿನ್ ದೇವಯ್ಯ, ಎಂಎಸ್‌ಎಂಇ ವಿಭಾಗದ ಜಂಟಿ ನಿರ್ದೇಶಕ ದೇವರಾಜು, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧಿಕಾರಿ, ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದ ಅಧಿಕಾರಿ ಪ್ರಕಾಶ್ ಕುಮಾರ, ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕ ಸಿ.ಎನ್. ರಘು, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ನಾಯಕ್, ರಾಜ್ಯ ಹಣಕಾಸು ಸಂಸ್ಥೆಯ ಅಧಿಕಾರಿ ಶಿವಣ್ಣ, ವಿಶೇಷ ಭೂಸ್ವಾಧೀನ ಅಧಿಕಾರಿ ಇತರರು ಇದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''