ಮುರಳೀಧರ್ ಶಾಂತಳ್ಳಿ ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಇದರನ್ವಯ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದ್ದರೆ, ಉಪಾಧ್ಯಕ್ಷ ಸ್ಥಾನ ಅನಾಯಾಸವಾಗಿ ಬಿಜೆಪಿ ಸದಸ್ಯೆ ಮೋಹಿನಿ ಅವರಿಗೆ ಒಲಿದಿದೆ.
ಅಧ್ಯಕ್ಷ ಸ್ಥಾನಕ್ಕೆ ಮೋಹಿನಿ ಸೇರಿದಂತೆ ಇತರ ಮೂವರು ಅರ್ಹರಾಗಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ಇರುವುದರಿಂದ ಮೋಹಿನಿ ಅವರಿಗೆ ಮಾತ್ರ ಅವಕಾಶ ಲಭ್ಯವಾಗಿದೆ.11 ಸದಸ್ಯ ಬಲದ ಪಟ್ಟಣ ಪಂಚಾಯಿತಿಗೆ ಕಳೆದ 28.10.2018ರಂದು ಚುನಾವಣೆ ನಡೆದಿತ್ತು. ಈ ಸಂದರ್ಭ ಬಿಜೆಪಿಯಿಂದ 3, ಕಾಂಗ್ರೆಸ್‍ನಿಂದ 4, ಜೆಡಿಎಸ್‍ನಿಂದ 3 ಹಾಗೂ ಓರ್ವ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಪ್ರಥಮ ಅವಧಿಯಲ್ಲಿ ಬಿಜೆಪಿಯ ನಳಿನಿ ಗಣೇಶ್ ಆಯ್ಕೆಯಾಗಿದ್ದರು. ಕೊರೋನಾ ಸಂದರ್ಭ ಅವರು ಅಸುನೀಗಿದ ಹಿನ್ನೆಲೆ ಅವರ ಸೊಸೆ ಮೋಹಿನಿ ಅವರನ್ನು ಮರು ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲ್ಲಿಸಲಾಗಿತ್ತು. ಕಾಂಗ್ರೆಸ್‍ನಿಂದ ಗೆಲುವು ಸಾಧಿಸಿದ್ದ ಉದಯಶಂಕರ್ ಅವರು ಅಕಾಲಿಕ ನಿಧನರಾದ ಹಿನ್ನೆಲೆ ಮರು ಚುನಾವಣೆ ನಡೆದು, ಬಿಜೆಪಿಯ ಮೃತ್ಯುಂಜಯ ಗೆಲುವು ಸಾಧಿಸಿದ್ದರು.
ನಂತರ ಹಲವಷ್ಟು ರಾಜಕೀಯ ವಿದ್ಯಮಾನಗಳು ನಡೆದಿದ್ದು, ಬರೋಬ್ಬರಿ 14 ತಿಂಗಳ ನಂತರ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಕಾಲ ಕೂಡಿ ಬಂದಿದೆ. ಯಾವುದೇ ತಕರಾರುಗಳು ಇಲ್ಲದೆ ಆಯ್ಕೆ ಪ್ರಕ್ರಿಯೆ ನಡೆದರೆ ಉಪಾಧ್ಯಕ್ಷ ಸ್ಥಾನ ಮತ್ತೆ ಬಿಜೆಪಿಯ ಮೋಹಿನಿ ಅವರಿಗೆ ಒಲಿಯಲಿದೆ. ಅತ್ತೆ ಅಧ್ಯಕ್ಷರಾಗಿದ್ದ ಪಂಚಾಯಿತಿಗೆ ಸೊಸೆ ಉಪಾಧ್ಯಕ್ಷರಾಗುವ ಅವಕಾಶವೂ ಇವರಿಗೆ ಲಭಿಸಿದೆ.
ಪಟ್ಟಣ ಪಂಚಾಯಿತಿಗೆ ಚುನಾವಣೆ ಎದುರಾದ ಸಂದರ್ಭ ಜೆಡಿಎಸ್, ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಎರಡೂ ಪಕ್ಷಗಳು ಸ್ಥಾನವನ್ನು ಹಂಚಿಕೊಂಡು ಸ್ಪರ್ಧಿಸುವ ಮೂಲಕ ಬಿಜೆಪಿಯ ಭದ್ರಕೋಟೆಯನ್ನು ಅಲುಗಾಡಿಸಿದ್ದವು. ಇದೀಗ ರಾಜಕಾರಣ ಬದಲಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಇದೇ ಮೈತ್ರಿ ಧರ್ಮ ಮುಂದುವರಿದರೆ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ನಾಗರತ್ನ ಅವರು ಅಧ್ಯಕ್ಷರಾಗುವ ಅವಕಾಶ ಲಭಿಸಲಿದೆ.
ಕಾಂಗ್ರೆಸ್‍ನಿಂದ ಅಧಿಕೃತವಾಗಿ 3 ಹಾಗೂ ಹೆಚ್ಚುವರಿಯಾಗಿ 1 ಮತ, ಶಾಸಕರ ಮತವೂ ಗಣನೆಗೆ ಬಂದರೆ 5 ಮತಗಳು ಲಭಿಸಲಿವೆ.