ನಿದ್ರೆಯಲ್ಲಿರುವ ಸರ್ಕಾರ ಎಚ್ಚರಿಸಲೆಂದೇ ಪಾದಯಾತ್ರೆ

KannadaprabhaNewsNetwork | Updated : Aug 01 2024, 12:27 AM IST

ಸಾರಾಂಶ

ನಿದ್ರೆಯಲ್ಲಿರುವ ಸರ್ಕಾರ ಎಚ್ಚರಿಸಲೆಂದೇ ಪಾದಯಾತ್ರೆ

ಕನ್ನಡಪ್ರಭ ವಾರ್ತೆ ತುರುವೇಕೆರೆ

ಈ ರಾಜ್ಯದ ಕಾಂಗ್ರೆಸ್ ಸರ್ಕಾರ ಗಾಢ ನಿದ್ರೆಯಲ್ಲಿದೆ. ರಾಜ್ಯದ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಸಂಪೂರ್ಣ ಭ್ರಷ್ಠಾಚಾರದಿಂದ ಕೂಡಿದೆ. ಮುಡಾದಲ್ಲಿ ಮುಖ್ಯಮಂತ್ರಿಗಳೇ ಭ್ರಷ್ಠರಾಗಿದ್ದಾರೆ. ಇದನ್ನು ಜನಸಾಮಾನ್ಯರಿಗೆ ತಿಳಿಸುವ ಸಲುವಾಗಿ ಮತ್ತು ರಾಜ್ಯ ಸರ್ಕಾರವನ್ನು ನಿದ್ದೆಯಿಂದ ಎಚ್ಚರಿಸಲು ಬಿಜೆಪಿ ಮತ್ತು ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳಾದ ಕುಡುಚಿ ಕ್ಷೇತ್ರದ ಮಾಜಿ ಶಾಸಕರಾದ ಪಿ.ರಾಜೀವ್ ರವರು ಹೇಳಿದರು. ಇಲ್ಲಿಯ ಮಾಜಿ ಶಾಸಕ ಮಸಾಲಾ ಜಯರಾಮ್ ರವರ ಫಾರ್ಮ್ ಹೌಸ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಭ್ರಷ್ಠಾಚಾರದಲ್ಲಿ ಮುಳುಗಿದೆ. ಮೈಸೂರಿನಲ್ಲಿ ಮುಖ್ಯಮಂತ್ರಿಗಳೇ ಹೆಚ್ಚುವರಿಯಾಗಿ ನಿವೇಶನಗಳನ್ನು ಪಡೆದು ವಂಚಿಸಿದ್ದಾರೆ. ೧೮೭ ಕೋಟಿ ರೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಧಿಕಾರಿಗಳ ಮತ್ತು ತಮ್ಮ ಸರ್ಕಾರದ ಸಚಿವರ ಪಾಲಾಗಿದೆ ಎಂದು ದೂರಿದರು. ಈ ಸರ್ಕಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ೨೫ ಸಾವಿರ ಕೋಟಿ ರೂ ದುರ್ಬಳಕೆಯಾಗಿದೆ. ಅತಿವೃಷ್ಠಿಯಿಂದ ಪ್ರವಾಹ ಬಂದಿದ್ದರೂ ಸಹ ಸರ್ಕಾರ ಸಂತ್ರಸ್ಥರ ಪರ ನಿಂತಿಲ್ಲ. ಕೆಟ್ಟ ರಾಜಕಾರಣ ಮಾಡುತ್ತಾ ಕಾಲಹರಣ ಮಾಡುತ್ತಿದೆ. ರಾಜ್ಯದಲ್ಲಿ ೧೭೦೦ ಕ್ಕೂ ಅಧಿಕ ರೈತರು ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರೂ ಸಹ ರೈತರ ಹಿತ ರಕ್ಷಣೆ ಮಾಡಲು ಹಿಂದೇಟು ಹಾಕುತ್ತಿದೆ. ಹಿಂದುಳಿದ ವರ್ಗಗಳ, ಕಟ್ಟಡ ಕಾರ್ಮಿಕರ ಅಭಿವೃದ್ದಿಗೆ ಇಟ್ಟಿದ್ದ ಹಣವೆಲ್ಲಾ ದುರುಪಯೋಗ ಮಾಡಲಾಗಿದೆ. ತಾವು ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಹೇಳುವ ಸಿದ್ದರಾಮಯ್ಯನವರು ಹಿಂದುಳಿದವರ ಬಾಳನ್ನೇ ಸರ್ವನಾಶ ಮಾಡಿದ್ದಾರೆ ಎಂದು ಪಿ.ರಾಜೀವ್ ದೂರಿದರು. ೨೦೦೦ ಮಂದಿ - ಸರ್ಕಾರವನ್ನು ನಿದ್ರೆಯಿಂದ ಎಚ್ಚರಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿರುವ ಈ ಮೈತ್ರಿ ಪಕ್ಷಗಳ ಪಾದಯಾತ್ರೆಗೆ ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಸುಮಾರು ೨ ಸಾವಿರ ಕಾರ್ಯಕರ್ತರು ರಾಜ್ಯ ಬಿಜೆಪಿ ನಿಗದಿಪಡಿಸಿದ ದಿನದಂದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ೧೩೫ ಕಿಮೀ ಪಾದಯಾತ್ರೆಯಲ್ಲಿ ಕ್ಷೇತ್ರದ ೧೦೦ ಕ್ಕೂ ಹೆಚ್ಚು ಕಾರ್ಯಕರ್ತರು ಅಷ್ಟೂ ದಿನವೂ ಭಾಗವಹಿಸಲಿದ್ದಾರೆಂದು ಪಿ.ರಾಜೀವ್ ತಿಳಿಸಿದರು. ಗೊಂದಲವಿಲ್ಲ: ಬಿಜೆಪಿ ಮತ್ತು ಜೆಡಿಎಸ್ ನ ಮೈತ್ರಿ ಪಕ್ಷಗಳೊಂದಿಗೆ ಪಾದಯಾತ್ರೆ ಮಾಡಲು ನಿರ್ಧರಿಸಲಾಗಿದೆ. ಕೇರಳ ರಾಜ್ಯದಲ್ಲಿ ಭಾರಿ ಅನಾಹುತವಾಗುತ್ತಿದೆ. ಅದರಂತೆಯೇ ರಾಜ್ಯಕ್ಕೂ ಅಪಾಯ ಆಗುವ ಸಾಧ್ಯತೆ ಇದೆ. ಇದನ್ನು ಮನಗಂಡು ಎರಡೂ ಪಕ್ಷಗಳ ಮುಖಂಡರು ಪಾದಯಾತ್ರೆಯ ದಿನಾಂಕವನ್ನು ನಿಗದಿ ಮಾಡಲಿದ್ದಾರೆ. ಇಂದಲ್ಲಾ ನಾಳೆ ಪಾದಯಾತ್ರೆ ಮಾಡುವುದಂತೂ ಗ್ಯಾರಂಟಿ ಎಂದು ಪಿ.ರಾಜೀವ್ ಹೇಳಿದರು. ನೆಗ್ಲೆಕ್ಟ್ : ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಸೇರಿದಂತೆ ಇತರೆ ವಿಷಯಗಳಲ್ಲಿ ಯತ್ನಾಳ್ ರವರು ಆಡುತ್ತಿರುವ ಮಾತುಗಳನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿಲ್ಲ. ಅವರು ಯಾವಾಗಲೂ ಹೀಗೆ ಮಾತನಾಡುವುದರಿಂದ ಪಕ್ಷ ಅವರ ಮಾತಿಗೆ ಕಿಮ್ಮತ್ತು ನೀಡುತ್ತಿಲ್ಲ. ಅವರ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳಲು ಮುಂದಾಗಿಲ್ಲ. ಮುಂಬರುವ ದಿನಗಳಲ್ಲಿ ಪಕ್ಷ ಎಲ್ಲವನ್ನೂ ಗಂಭೀರವಾಗಿ ಪರಿಗಣಿಸಲಿದೆ ಎಂದು ಪಿ.ರಾಜೀವ್ ಹೇಳಿದರು. ಸ್ವಾಗತ: ಬಿಜೆಪಿ ಕಾಂಗ್ರೆಸ್ ಸರ್ಕಾರದ ಕರ್ಮಕಾಂಡಗಳನ್ನು ಬಯಲಿಗೆಳೆಯಲು ಹೋಗುತ್ತಿರುವ ಈ ಸಂಧರ್ಭದಲ್ಲಿ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಬಿಜೆಪಿಯ ಭ್ರಷ್ಠಾಚಾರವನ್ನು ಬಯಲಿಗೆಳೆಯುವುದಾಗಿ ರಾಜ್ಯ ಸರ್ಕಾರ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಕಳೆದ ಒಂದು ವರ್ಷದಿಂದ ಈ ಸರ್ಕಾರ ಏಕೆ ಮೌನ ವಹಿಸಿತ್ತು. ಅಧಿಕಾರ ವಹಿಸಿಕೊಂಡ ದಿನದಿಂದಲೇ ಬಿಜೆಪಿಯ ಭ್ರಷ್ಟಾಚಾರವನ್ನು ಬಯಲು ಮಾಡಬಹುದಿತ್ತಲ್ಲಾ. ಏಕೆ ಸುಮ್ಮನಿದ್ದದ್ದು. ಸುಮ್ಮನಿದ್ದದ್ದೂ ಸಹ ತಪ್ಪೇ. ಅದೂ ಸಹ ಅಪರಾಧವೇ?. ಎರಡೂ ಪಕ್ಷಗಳು ನಡೆಸಿವೆ ಎನ್ನಲಾದ ಎಲ್ಲಾ ಹಗರಣಗಳನ್ನೂ ತನಿಖೆ ಮಾಡಿ. ಯಾರು ತಪ್ಪಿತಸ್ಥರಿದ್ದಾರೋ ಅವರಿಗೆ ಶಿಕ್ಷೆಯಾಗಲಿ. ಅದರಲ್ಲಿ ರಾಜಿ ಏಕೆ ಎಂದು ಪಿ.ರಾಜೀವ್ ಸರ್ಕಾರಕ್ಕೆ ಸವಾಲೆಸೆದರು.ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಮಸಾಲಾ ಜಯರಾಮ್, ಎಂ.ಡಿ.ಲಕ್ಷ್ಮೀನಾರಾಯಣ್, ಜಿಲ್ಲಾ ಮುಖಂಡರಾದ ಸಾಗರನಹಳ್ಳಿ ವಿಜಯಕುಮಾರ್, ಗಂಗರಾಜ್, ಕೆಂಪೇಗೌಡ, ಅನಿತಾ ನಂಜುಂಡಯ್ಯ, ಹಾಲೇಗೌಡ, ತಾಲೂಕು ಮುಖಂಡರಾದ ದುಂಡ ರೇಣುಕಯ್ಯ, ಪಟ್ಟಣ ಪಂಚಾಯ್ತಿ ಸದಸ್ಯ ಅಂಜನ್ ಕುಮಾರ್, ಚಂದ್ರಯ್ಯ, ಪ್ರಕಾಶ್, ಡ್ರೈವಿಂಗ್ ಬಸವರಾಜು, ಸೋಮಶೇಖರ್, ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಚೂಡಾರತ್ನ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಗೌರೀಶ್ ಸೇರಿದಂತೆ ಎಸ್ ಸಿ, ಎಸ್ ಟಿ ಘಟಕದ ಹಲವಾರು ಪದಾದಿಕಾರಿಗಳು ಉಪಸ್ಥಿತರಿದ್ದರು.

Share this article