ಸೇವೆ ಕಾಯಂಗೆ ತುಮಕೂರಿನ ಸಿದ್ಧಗಂಗಾ ಮಠದ ಶ್ರೀಗಳ ಆಶೀರ್ವಾದ ಪಡೆದು ಹೋರಾಟ ಶುರು: ಡಾ.ಶ್ಯಾಮಪ್ರಸಾದ
ಕನ್ನಡಪ್ರಭ ವಾರ್ತೆ ದಾವಣಗೆರೆಅತಿಥಿ ಬೋಧಕರ ಸೇವೆ ಕಾಯಂಗೆ ಒತ್ತಾಯಿಸಿ ಹೋರಾಟದ 41ನೇ ದಿನವಾದ ಜ.1ರಂದು ತುಮಕೂರಿನ ಸಿದ್ಧಗಂಗಾ ಮಠದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಕೊಸಗಿ ಶ್ಯಾಮಪ್ರಸಾದ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 40 ದಿನಗಳಿಂದಲೂ ಕಡ್ಲೆಗಿಡ ಮಾರಾಟ, ಟೀ ಮಾರಾಟ, ಕಸ ಹೊಡೆಯುವ ಹೋರಾಟ, ಅರೆ ಬೆತ್ತಲೆ ಮೆರವಣಿಗೆ ಹೀಗೆ ಅನಿರ್ದಿಷ್ಟಾವಧಿವರೆಗೆ ತರಗತಿ ಬಹಿಷ್ಕರಿಸಿ ಹೋರಾಟ ನಡೆಸಿದ್ದರೂ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಜ.1ರ ಬೆಳಿಗ್ಗೆ 10ಕ್ಕೆ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗ ಸ್ವಾಮಿಗಳ ಆಶೀರ್ವಾದ ಪಡೆದು ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಲಿದ್ದೇವೆ ಎಂದರು.ಸೇವೆ ಕಾಯಂಗೆ ಒತ್ತಾಯಿಸಿ ರಾಜ್ಯವ್ಯಾಪಿ ಹೋರಾಟ ನಡೆಸಿದ್ದರೂ ಸರ್ಕಾರ ಸ್ಪಂದಿಸಿಲ್ಲ. ರಾಜ್ಯದ ಸುಮಾರು 430ಕ್ಕೂ ಹೆಚ್ಚು ಸಪ್ರದ ಕಾಲೇಜುಗಳಲ್ಲಿ 11 ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಇಲ್ಲ. ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು.
ಜಿಲ್ಲೆಯ 10 ಸಪ್ರದ ಕಾಲೇಜುಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ ಉನ್ನತ ಪದವಿ ಪಡೆದರು, ಪಿಎಚ್‌ಡಿ ಮಾಡಿದವರು, ನೆಟ್, ಸ್ಲೆಟ್ ಆದವರೆಲ್ಲರೂ ಇದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸುವ ಭರವಸೆ ನೀಡಿತ್ತು. ವಿಪಕ್ಷ ನಾಯಕರಿದ್ದಾಗ ಸಿದ್ದರಾಮಯ್ಯ ಅತಿಥಿ ಉಪನ್ಯಾಸಕರ ಪರ ಧ್ವನಿ ಎತ್ತಿದ್ದರು. ಈಗ ಸಿಎಂ ಆದ ನಂತರ ಸಿದ್ದರಾಮಯ್ಯ ನಮ್ಮ ಸೇವೆ ಕಾಯಂಗೊಳಿಸದೇ, ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.ಎಲ್ಲಾ ಪಕ್ಷಗಳ ಸರ್ಕಾರಗಳು ಅಧಿಕಾರಕ್ಕೆ ಬಂದ ನಂತರ ಅತಿಥಿ ಉಪನ್ಯಾಸಕರ ಕಡೆಗಣಿಸಿಕೊಂಡೇ ಬಂದಿವೆ. ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ಇದಕ್ಕೆ ಹೊರತಲ್ಲ. ನಮ್ಮ ಹೋರಾಟಕ್ಕೆ ರೈತ, ಕಾರ್ಮಿಕ, ಜನಪರ, ಮಹಿಳಾ ಸಂಘಟನೆಗಳು, ಸಾರ್ವಜನಿಕರು, ವಿದ್ಯಾರ್ಥಿ ಸಂಘಟನೆಗಳು ಬೆಂಬಲ ಸೂಚಿಸುತ್ತಿದ್ದು, ಸೇವೆ ಕಾಯಂಗೊಳ್ಳುವವರೆಗೂ ನಮ್ಮ ಹೋರಾಟ ನಿಶ್ಚಿತ ಎಂದು ಎಚ್ಚರಿಸಿದರು.
ಎಂದು ಸ್ಪಷ್ಟಪಡಿಸಿದರು. ಸಂಘದ ಎಸ್.ಶುಭಾ, ಕಳಕಪ್ಪ ಚೌರಿ, ಎಂ.ಜಗದೀಶ, ಎಸ್.ವೈ.ಚಂದ್ರಿಕಾ, ಕೆ.ಮೋಹನ ಇತರರಿದ್ದರು.ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ
ಅತಿಥಿ ಉಪನ್ಯಾಸಕರ ಅವಲಂಬಿಸಿ, ರಾಜ್ಯವ್ಯಾಪಿ 8-10 ಲಕ್ಷ ಜನರ ಜೀವನ ನಿಂತಿದೆ. ಅತಿಥಿ ಬೋದಕರು ಉನ್ನತ ಶಿಕ್ಷಣ ಪಡೆದವರಾಗಿದ್ದು, ಹಲವಾರು ಪದವಿಗಳನ್ನೂ ಪಡೆದಿದ್ದರೂ ಸರ್ಕಾರಿ ಪದವಿ ಮಾತ್ರ ಕಾಯಂ ಆಗಿಲ್ಲ. ನಮ್ಮ ಓದಿಗೆ ತಕ್ಕಂತೆ ಸರ್ಕಾರವು ಮನ್ನಣೆ ನೀಡುತ್ತಿಲ್ಲ. ಸೇವೆ ಕಾಯಂಗೊಳಿಸಲು ಒತ್ತಾಯಿಸಿ ತುಮಕೂರಿನಲ್ಲಿ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದು ಆರಂಭಿಸುವ ಹೋರಾಟವು ಬೇಡಿಕೆ ಈಡೇರುವವರೆಗೂ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ.ಡಾ.ಕೊಸಗಿ ಶ್ಯಾಮಪ್ರಸಾದ್, ಸಂಘದ ಜಿಲ್ಲಾಧ್ಯಕ್ಷ
.............