ಕಾರಟಗಿ: ತಾಲೂಕಿನಾದ್ಯಂತ ಕಳೆದ ೨೪ ಗಂಟೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು, ಮಳೆಯ ಹೊಡೆತಕ್ಕೆ ತಾಲೂಕಿನಾದ್ಯಂತ ಕಟಾವು ಮತ್ತು ತೆನೆ ಹಾಲು ಕಟ್ಟುವ ಹಂತಕ್ಕೆ ಬಂದಿದ್ದ ಭತ್ತದ ಬೆಳೆ ಮಕಾಡೆ ಮಲಗಿದೆ.
ಲಭ್ಯವಾದ ಮಾಹಿತಿ ಪ್ರಕಾರ ಕಾರಟಗಿ ತಾಲೂಕಿನಲ್ಲಿ ವಾಡಿಕೆಯಿಂತ ಸರಾಸರಿ ಮಳೆ ಬಿದ್ದಿರುವುದು ದಾಖಲಾಗಿದೆ. ಕಾರಟಗಿ ಮಳೆ ಮಾಪಕ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ೭೨.೪ ಮಿಮಿ. ಸಿದ್ದಾಪುರದಲ್ಲಿ ೬೦ಮಿಮಿ ಮಳೆ ಬಿದ್ದಿದೆ.
ಭಾರಿ ಹಾನಿ: ಮಳೆಯ ಹೊಡೆತಕ್ಕೆ ತಾಲೂಕಿನಾದ್ಯಂತ ಭತ್ತದ ಬೆಳೆ ಸಧ್ಯ ಮಕಾಡೆ ಮಲಗಿದೆ. ಕಾರಟಗಿ ಪಟ್ಟಣ ಸೀಮೆ, ಸಿದ್ದಾಪುರ ಮತ್ತು ಯರಡೋಣಾ ಹೋಬಳಿ ವ್ಯಾಪ್ತಿಯಲ್ಲಿ ಬೆಳೆ ಹಾನಿಯ ಕುರಿತು ಇನ್ನು ನಿಖರವಾಗಿ ಮಾಹಿತಿ ಲಭ್ಯವಾಗಿಲ್ಲ. ಆದರೆ, ಬೆಳೆ ತೆನೆ ಕಟ್ಟುವ ಮತ್ತು ಕಟಾವು ಹಂತಕ್ಕೆ ಬಂದ ಬೆಳೆ ಮಾತ್ರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತರು ಗೋಳಾಡುತ್ತಿದ್ದಾರೆ.ಸಿದ್ದಾಪುರ ಹೋಬಳಿಯ ತುಂಗಭದ್ರ ನದಿ ತೀರದ ಪ್ರದೇಶದಲ್ಲಿ ಶೇ. ೮೦ರಷ್ಟು ಕಟಾವು ಹಂತಕ್ಕೆ ಬಂದಿದ್ದರೆ, ಎಡದಂಡೆ ಕಾಲುವೆಯ ಮೂಲಕ ಬಿತ್ತನೆಯಾದ ಬೆಳೆ ಈಗ ತೆನೆ ಕಟ್ಟುವ ಹಂತದಲ್ಲಿದೆ. ಸತತ ಸುರಿದ ಮಳೆಯಿಂದ ಗದ್ದೆಗಳಲ್ಲಿ ತೇವಾಂಶ ಹೆಚ್ಚಾಗಿದ್ದು, ಇದರಿಂದ ಭತ್ತದ ಬೆಳೆಗೆ ಕೊಳವೆ, ಬೆಂಕಿ ಕಾಂಡ ಕೊರಕ ರೋಗ, ಎಲೆ ಕೆಂಪಾವುದು ಸೇರಿದಂತೆ ನಾನಾ ರೋಗ ಕಾಣಿಸಿಕೊಳ್ಳುವ ಭೀತಿ ಹೆಚ್ಚಾಗಿದೆ.
ಇನ್ನು ಸಿದ್ದಾಪುರ, ಕಕ್ಕರಗೋಳ, ಬರಗೂರು, ನಂದಿಹಳ್ಳಿ, ಜಮಾಪುರ, ಉಳೇನೂರು, ಕೊಟ್ನೇಕಲ್ ಭಾಗದಲ್ಲಿ ವರುಣನ ಆರ್ಭಟಕ್ಕೆ ಭತ್ತ ಸೇರಿದಂತೆ ಸಜ್ಜೆ ಮತ್ತು ಸೂರ್ಯಕಾಂತಿ ಸಹ ನೆಲ ಕಚ್ಚಿದೆ. ಈಗಾಗಲೇ ರೈತ ಸಮೂಹ ಎಕರೆಗೆ ₹೪೦ ಸಾವಿರ ವೆಚ್ಚ ಮಾಡಿದ್ದು, ಕಟಾವು ಹಂತಕ್ಕೆ ಬಂದ ಬೆಳೆ ಮಕಾಡೆ ಮಲಗಿದ್ದು ರೈತರನ್ನು ಚಿಂತೇಗೀಡು ಮಾಡಿದೆ.
ಭಾರಿ ರಭಸದಿಂದ ಸುರಿದ ಮಳೆಯಿಂದ ರೈತರ ಕನಸು ನುಚ್ಚುನೂರು ಮಾಡಿದೆ. ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ಕಟಾವಿಗೆ ಬಂದ ಭತ್ತ ನೆಲಕ್ಕೂರುಳಿದ ಪರಿಣಾಮ ಕಂದಾಯ ಇಲಾಖೆ ಅಧಿಕಾರಿಗಳು ತಹಸೀಲ್ದಾರ ಎಂ. ಕುಮಾರಸ್ವಾಮಿ ಆದೇಶ ಮೇರೆಗೆ ತಾಲೂಕಿನ ವಿವಿಧ ಗ್ರಾಮಗಳಿಗೆ ದೌಡಾಯಿಸಿದ್ದು ನೆಲಕಚ್ಚಿದ ಭತ್ತದ ವೀಕ್ಷಣೆ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ಡಾ. ಅಭಿಲಾಷಾ ಪಿ.ಆರ್. ತಾಲೂಕಿನ ಯರಡೋಣಾ, ಸಿದ್ದಾಪೂರ ಹೋಬಳಿಯ ಮುಷ್ಟೂರ, ಈಳಿಗನೂರ ಸೇರಿದಂತೆ ವಿವಿಧ ಗ್ರಾಮಗಳಿಗೆ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಮಳೆಯಿಂದ ಹಾನಿಗೊಂಡ ಭತ್ತದ ಬೆಳೆ ವೀಕ್ಷಣೆ ಮಾಡಿ ಪರಿಶೀಲನೆ ಮಾಡಿದರು.