ಮಳೆ ಭೀತಿ: ಯಂತ್ರಗಳಿಗೆ ದುಬಾರಿ ಬಾಡಿಗೆ ತೆತ್ತು ಭತ್ತ ಕಟಾವು!

KannadaprabhaNewsNetwork |  
Published : May 28, 2025, 01:48 AM IST
ಒಂದೇ ಜಮೀನಲ್ಲಿ ಮೂರು ಯಂತ್ರಗಳ ಸದ್ದು | Kannada Prabha

ಸಾರಾಂಶ

ಮುಂಗಾರು ಪೂರ್ವದಲ್ಲಿ ಕಳೆದ ವಾರದಿಂದ ಸುರಿದ ಭಾರಿ ಮಳೆಯು ರೈತರನ್ನು ಎಡಬಿಡದೇ ಕಾಡುತ್ತಿದೆ. ಈ ಸಂದರ್ಭ ಭರ್ಜರಿಯಾಗಿ ನಡೆಯಬೇಕಾಗಿದ್ದ ಭತ್ತ ಕಟಾವು ಕಾರ್ಯವೂ ಅಸ್ತವ್ಯಸ್ತಗೊಂಡಿದೆ.

- ಜಮೀನಲ್ಲಿ ಒಂದರ ಬದಲಿಗೆ ಮೂರ್ಮೂರು ಯಂತ್ರಗಳ ಮೊರೆಹೋದ ರೈತರು

- 1 ಎಕರೆ ಭತ್ತ ಕಟಾವಿಗೆ ₹2000ಕ್ಕೂ ಅಧಿಕ ಬಾಡಿಗೆ ನಿಗದಿ: ರೈತರ ಅಳಲು

- ಕಟಾವು ಭತ್ತ, ಹುಲ್ಲು ಸುರಕ್ಷಿತವಾಗಿ ಕಣಕ್ಕೆ ಸಾಗಿಸಲು ರೈತರ ಹರಸಾಹಸ

- - - ಎಚ್.ಎಂ. ಸದಾನಂದ

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು ಮುಂಗಾರು ಪೂರ್ವದಲ್ಲಿ ಕಳೆದ ವಾರದಿಂದ ಸುರಿದ ಭಾರಿ ಮಳೆಯು ರೈತರನ್ನು ಎಡಬಿಡದೇ ಕಾಡುತ್ತಿದೆ. ಈ ಸಂದರ್ಭ ಭರ್ಜರಿಯಾಗಿ ನಡೆಯಬೇಕಾಗಿದ್ದ ಭತ್ತ ಕಟಾವು ಕಾರ್ಯವೂ ಅಸ್ತವ್ಯಸ್ತಗೊಂಡಿದೆ.

ಮೇ ಮಾಹೆಯಲ್ಲಿ ೧೦೭.೬೮ ಮಿಮೀ ಮಳೆಯಾಗಿದ್ದು, ಹೆಚ್ಚು ಮಳೆ ದಾಖಲಾಗಿದೆ. ಒಂದೆಡೆ ಭತ್ತ ಕಟಾವಿಗೆ ಬಂದಿದ್ದರೆ, ಇನ್ನೊಂದೆಡೆ ಮಳೆ ಆಶ್ರಿತ ಪ್ರದೇಶದಲ್ಲಿ ಭೂಮಿ ಹಸನಾಗಿ, ಬಿತ್ತನೆ ಕಾರ್ಯ ಶುರುವಾಗಿದೆ. ಮಲೇಬೆನ್ನೂರು ವ್ಯಾಪ್ತಿಯಲ್ಲಿ ಭತ್ತ ಕಟಾವು ಚುರುಕುಗೊಂಡಿದೆ. ಆದರೆ, ಭತ್ತವನ್ನು ಮನೆಗೆ ರವಾನೆ ಮಾಡಬೇಕು, ಒಣಹುಲ್ಲನ್ನು ಸುರಕ್ಷಿತವಾಗಿ ಉಳಿಸಬೇಕೆನ್ನುವ ರೈತರ ಹರಸಾಹಸಕ್ಕೆ ವರುಣದೇವ ತಣ್ಣೀರೆರಚಿದ್ದಾನೆ. ವಾರದ ಹಿಂದೆ ಬೀಸಿದ ಭಾರಿ ಗಾಳಿ, ಮಳೆಗೆ ಭತ್ತವು ಚಾಪೆ ಹಾಸಿದಂತಾಗಿ, ರೈತರಿಗೆ ಅಪಾರ ನಷ್ಟವುಂಟಾಗಿದೆ.

ಮಲೇಬೆನ್ನೂರು, ಬಾನುವಳ್ಳಿ, ಉಕ್ಕಡಗಾತ್ರಿ, ಎಳೆಹೊಳೆ, ಧುಳೆಹೊಳೆ, ಹರಳಹಳ್ಳಿ, ಹಾಲಿವಾಣ, ಕೊಕ್ಕನೂರು, ಹಳ್ಳಿಹಾಳ್, ಬೂದಿಹಾಳು, ಯಲವಟ್ಟಿ ಮತ್ತು ನಂದಿತಾವರೆ ಮತ್ತಿತರೆ ಭಾಗಗಳಲ್ಲಿ ಭತ್ತವು ಕೆಂಪು ಬಣ್ಣಕ್ಕೆ ತಿರುಗಿದ್ದು, ಇದು ಕಟಾವಿಗೆ ಉತ್ತಮ ಸಮಯವಾಗಿದೆ. ಬೆಳೆದ ಭತ್ತ ಹಾಗೇ ಬಿಟ್ಟರೆ ಮಳೆಗೆ ಭತ್ತದ ಉದುರಲಿದೆ. ಇತ್ತ ವರುಣನ ಕಾಟ, ಅತ್ತ ಮಳೆರಾಯನ ಕಾಟ. ಹತ್ತು ನಿಮಿಷ ಬಿಡುವು ಕೊಟ್ಟು ಮತ್ತೆ ಧಾರಾಕಾರ ಸುರಿಯುವ ಮಳೆಯ ನಾಟಕದಿಂದ ರೈತರು ಹೈರಾಣಾಗುತ್ತಿದ್ದಾರೆ. ರೈತರಿಗೆ ಆರ್‌ಎನ್‌ಆರ್ ಭತ್ತ ಹೆಚ್ಚು ಇಳುವರಿ ಇಲ್ಲದ ಸಿಟ್ಟು ಬೇರೆ. ಇಂಥ ಸಂದರ್ಭದಲ್ಲಿ ಭತ್ತ ಕಟಾವು ಮಾಡುವುದು, ಹುಲ್ಲನ್ನು ಕೊಳೆಯದಂತೆ ಸುರಕ್ಷಿತವಾಗಿ ಕಣಗಳಿಗೆ ಸಾಗಿಸುವುದು ಸಮಸ್ಯೆಯಾಗಿ ಪರಿಣಮಿಸಿದೆ.

ಸೋಮವಾರ ಮಳೆ ಕೊಂಚ ಬಿಡುವು ನೀಡಿದ್ದು, ವರುಣನ ಭಯದಿಂದಲೇ ರೈತರು ಒಂದೇ ಜಮೀನಲ್ಲಿ ಖಾಸಗಿಯವರಿಗೆ ದುಬಾರಿ ಬಾಡಿಗೆ ದರ ತೆತ್ತು ಮೂರು ಮೂರು ಭತ್ತ ಕಟಾವು ಯಂತ್ರಗಳನ್ನು ತರಿಸಿ, ಭತ್ತ ಕಟಾವು ಕಾರ್ಯಕ್ಕೆ ಚುರುಕು ನೀಡಿದ್ದಾರೆ. ಒಂದೊಂದು ಎಕರೆ ಭತ್ತ ಕಟಾವಿಗೆ ಖಾಸಗಿಯವರು ₹2000ಕ್ಕೂ ಅಧಿಕ ದರ ವಸೂಲು ಮಾಡುತ್ತಿದ್ದಾರೆ. ಮಳೆ ಕಾರಣದಿಂದಾಗಿ ಫಲ ಉಳಿಸಿಕೊಳ್ಳಲು ರೈತರು ದುಪ್ಪಟ್ಟು ಹಣ ನೀಡುವಂತಾಗಿದ್ದು, ಮಲೇಬೆನ್ನೂರು ಹೋಬಳಿ ವ್ಯಾಪ್ತಿಲ್ಲೀಗ ಎಲ್ಲಿ ನೋಡಿದರಲ್ಲಿ ಭತ್ತ ಕಟಾವು ಯಂತ್ರಗಳು ಸದ್ದು ಕೇಳಿಬರುತ್ತಿದೆ.

- - -

(ಕೋಟ್ಸ್‌)

ಮಳೆಯಿಂದಾಗಿ ಭತ್ತ ಕೈಗೆ ಸಿಗುತ್ತಿಲ್ಲ, ದನಗಳಿಗೆ ಮೇವೂ ದೊರಕುತ್ತಿಲ್ಲ. ಮಳೆ ಕಾರಣ ಭತ್ತ ಕಟಾವು ಯಂತ್ರಗಳಿಗೆ ಡಿಮ್ಯಾಂಡ್ ಬಂದಿದೆ. ಎಕರೆಗೆ ₹೨೦೦೦ ಕ್ಕೂ ಅಧಿಕ ಬಾಡಿಗೆ ಹಣ ವಸೂಲು ಮಾಡುತ್ತಿದ್ದಾರೆ. ಎಕರೆಗೆ ೪೦ ಚೀಲ ಭತ್ತ ಬರಬೇಕಿದ್ದು, ಇಳುವರಿ ಕಡಿಮೆಯಾಗಿದೆ. ಇಂದು ರೈತನ ಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರ ಕಟಾವಿಗೆ 2 ತಿಂಗಳ ಮುಂಚಿತವಾಗಿ ಭತ್ತಕ್ಕೆ ವೈಜ್ಞಾನಿಕ ಬೆಲೆ ಬಗ್ಗೆ ಆದೇಶ ಮಾಡಬೇಕು.

- ಭರಮಗೌಡ ಪಾಟೀಲ್, ರೈತ, ಪಾಳ್ಯ ಗ್ರಾಮ

ಖಾಸತಿ ಭತ್ತ ಕಟಾವು ಯಂತ್ರಗಳ ಮಾಲೀಕರು ಸರ್ಕಾರ ಎಕರೆಗೆ ಇಂತಿಷ್ಟು ನಿಗದಿಪಡಿಸಿದ ದರವನ್ನು ಮಾತ್ರವೇ ರೈತರಿಂದ ಪಡೆಯಬೇಕು. ಇದನ್ನು ಹೊರತುಪಡಿಸಿ ಹೆಚ್ಚಿನ ಹಣ ವಸೂಲು ಮಾಡಿದರೆ ತಪ್ಪಾಗುತ್ತದೆ. ಒಂದುವೇಳೆ ಮಾಲೀಕರು ಹೆಚ್ಚಿನ ಹಣ ವಸೂಲು ಮಾಡುತ್ತಿದ್ದರೆ ತಕ್ಷಣ ರೈತರು ದೂರು ನೀಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ.

- ಗುರುಬಸವರಾಜ್, ತಹಸೀಲ್ದಾರ್

- - -

-೨೬ಎಂಬಿಆರ್೨: ಒಂದೇ ಜಮೀನಲ್ಲಿ ರೈತರು ಮೂರು ಭತ್ತ ಕಟಾವು ಯಂತ್ರಗಳ ಬಳಸಿ, ಕೊಯ್ಲು ಕಾರ್ಯ ನಡೆಸಿರುವುದು.

-ಚಿತ್ರ-೩: ಮಳೆರಾಯನ ಆರ್ಭಟದಿಂದಾಗಿ ನೀರು ನಿಂತಿರುವುದು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ