ಭತ್ತದ ಬೆಲೆ ಕುಸಿತ, ರೈತರು ಕಂಗಾಲು

KannadaprabhaNewsNetwork | Published : May 14, 2025 12:15 AM
Follow Us

ಸಾರಾಂಶ

ಪ್ರತಿ ವರ್ಷ ಬೇಸಿಗೆಯ ಭತ್ತವನ್ನು ಆಂಧ್ರ ಸರ್ಕಾರ ಮತ್ತು ತಮಿಳನಾಡು ಸರ್ಕಾರ ಖರೀದಿಸುತ್ತಿದ್ದವು. ಆದರೆ, ಅವರು ಈ ವರ್ಷ ಭತ್ತದ ಖರೀದಿಗೆ ಬಂದಿಲ್ಲ. ಇದುವೆ ದೊಡ್ಡ ಸಮಸ್ಯೆಗೆ ಕಾರಣವಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರು ಭತ್ತ ಕಟಾವು ಹಾಗೂ ರಾಶಿ ಕಾರ್ಯ ಮುಗಿದಿದ್ದರೂ ಸಹ ಬೆಲೆ ಕುಸಿತದಿಂದ ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲದಂತೆ ಆಗಿದೆ. ಇದರಿಂದ ಕಂಗಾಲಾಗಿರುವ ರೈತರು, ಸಿಕ್ಕಿದಷ್ಟಕ್ಕೆ ಮಾರಾಟ ಮಾಡಲು ಮುಂದಾದರೂ ಸಹ ಖರೀದಿಗೆ ಯಾರೂ ಬರುತ್ತಿಲ್ಲ.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆ ಸೇರಿದಂತೆ ವಿವಿಧೆಡೆ ಹಿಂಗಾರು ಭತ್ತವನ್ನು ಕಟಾವು ಮಾಡಿರುವ ರೈತರು ಮಾರುಕಟ್ಟೆಯಲ್ಲಿ ದರ ಕುಸಿತವಾಗಿದ್ದರಿಂದ ಕಣದಲ್ಲಿಯೇ ಹಗಲು, ರಾತ್ರಿ ಕಾಯುವಂತಾಗಿದೆ.

ನೆಲಕಚ್ಚಿದ ಭತ್ತದ ದರ:

ಹಿಂಗಾರು ಹಂಗಾಮಿನಲ್ಲಿ ಸಾಮಾನ್ಯವಾಗಿ ಸೋನಾ ಭತ್ತ ಬೆಳೆಯುವುದಿಲ್ಲ. ಆರ್‌ಎನ್‌ಆರ್‌ ಭತ್ತ ಬೆಳೆಯುತ್ತಾರೆ. ಈ ಬಾರಿ ನೀರು ಲಭ್ಯ ಇರುವುದರಿಂದ ಉತ್ತಮ ಫಸಲು ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಮಾತ್ರ ಭತ್ತವನ್ನು ಕೇಳುತ್ತಲೇ ಇಲ್ಲ. ಕಳೆದ ವರ್ಷ ಇದೇ ಅವಧಿಯಲ್ಲಿಯೇ ಭತ್ತದ ದರ ₹ 2600 (75 ಕೆಜಿ ಭತ್ತಕ್ಕೆ) ಇತ್ತು. ಆದರೆ, ಈ ವರ್ಷ ₹ 1500ಕ್ಕೂ ಕೇಳುತ್ತಿಲ್ಲ. ಸಾಮಾನ್ಯವಾಗಿ ₹ 2000ದಿಂದ ₹ 2200ರ ವರಗೆ ಬೆಲೆ ಇರುತ್ತದೆ. ಈ ಬೆಲೆ ಸಿಕ್ಕರೆ ರೈತರಿಗೆ ಲಾಭವಾಗುತ್ತದೆ. ಆದರೆ, ₹ 1500 ಎಂದರೆ ಮಾಡಿದ ಖರ್ಚು ಸಹ ಬರುವುದಿಲ್ಲ. ಹೀಗಾಗಿ, ರೈತರು ರಾಶಿ ಮಾಡಿಕೊಂಡು ಇಂದಲ್ಲ, ನಾಳೆ ದರ ಬರುತ್ತದೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಮಾತ್ರ ಚೇತರಿಕೆ ಕಾಣುತ್ತಿಲ್ಲ.

ಮಳೆಯ ಕಾಟ:

ಆಗಾಗ ಬರುವ ಮಳೆಯಿಂದ ಕಟಾವು ಮಾಡಿದ ಭತ್ತವನ್ನು ಕಾಪಾಡಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಳೆಯ ಅಬ್ಬರಕ್ಕೆ ಹೊಲದಲ್ಲಿಯೇ ಅಪಾರ ಪ್ರಮಾಣದಲ್ಲಿ ಭತ್ತ ಹಾನಿಯಾಗಿದೆ. ಈಗ ಕಟಾವು ಮಾಡಿಟ್ಟಿದ್ದನ್ನು ಕಾಪಾಡಿಕೊಳ್ಳುವುದು ರೈತರಿಗೆ ಸವಾಲಾಗಿದೆ.

ಬೆಂಬಲ ಬೆಲೆ ಖರೀದಿಗೆ ಆಗ್ರಹ:

ಭತ್ತವನ್ನು ಬೆಂಬಲ ಬೆಲೆಯಡಿ ಖರೀದಿಸುವಂತೆ ರೈತರು ಆಗ್ರಹಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೇವಲ ಬೆಂಬಲ ಬೆಲೆ ಘೋಷಿಸಿದೆ ಹೊರತು ಬೇಸಿಗೆ ಭತ್ತ ಖರೀದಿಸಲು ಬೆಂಬಲ ಬೆಲ ಕೇಂದ್ರ ತೆರೆದಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಆಂಧ್ರದಿಂದ ಆಗುತ್ತಿಲ್ಲ ಖರೀದಿ:

ಪ್ರತಿ ವರ್ಷ ಬೇಸಿಗೆಯ ಭತ್ತವನ್ನು ಆಂಧ್ರ ಸರ್ಕಾರ ಮತ್ತು ತಮಿಳನಾಡು ಸರ್ಕಾರ ಖರೀದಿಸುತ್ತಿದ್ದವು. ಆದರೆ, ಅವರು ಈ ವರ್ಷ ಭತ್ತದ ಖರೀದಿಗೆ ಬಂದಿಲ್ಲ. ಇದುವೆ ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಈ ಬಾರಿ ಆಂಧ್ರ ಮತ್ತು ತಮಿಳುನಾಡಿನಲ್ಲಿ ಬೆಳದ ಭತ್ತವನ್ನೇ ರಾಜ್ಯದಲ್ಲಿ ಮಾರಾಟಕ್ಕೆ ತರುತ್ತಿರುವುದರಿಂದ ದರ ಕುಸಿಯಲು ಕಾರಣವಾಗಿದೆ ಎನ್ನುತ್ತಾರೆ ರೈತ ಮುಖಂಡರು.ಭತ್ತ ಕಟಾವು ಮಾಡಿ, ರಾಶಿ ಮಾಡಿ, ತಿಂಗಳು ಕಳೆದರೂ ಸಹ ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲ. 75 ಕೆಜಿ ತೂಕದ ಭತ್ತದ ದರ ₹ 1500 ಆಗಿದೆ. ಅದನ್ನೂ ಸಹ ಕೇಳುವವರಿಲ್ಲ.

ಉಮೇಶ ಪಲ್ಲೇದ ರೈತ, ಹಿಟ್ನಾಳ ಗ್ರಾಮ