ನಾಗರಾಜ ಎಸ್.ಬಡದಾಳ್
ಸ್ವತಃ ಕುಸುಮರೋಗಿಯಾಗಿ ಕುಸುಮ ರೋಗಿಗಳ ಪಾಲಿಗೆ ಆಶಾಕಿರಣವಾದ ಕರ್ನಾಟಕ ರಾಜ್ಯ ಹಿಮೋಫಿಲಿಯಾ ಸೊಸೈಟಿ ಸ್ಥಾಪಿಸಿದ ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಸುರೇಶ ಹನಗವಾಡಿ ಅವರಿಗೆ ಕೇಂದ್ರ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಪದ್ಮಶ್ರೀ ಲಭಿಸಿದೆ. ದೇಶದ ಇಂತಹದ್ದೊಂದು ಮಹೋನ್ನತ ಪ್ರಶಸ್ತಿ ಪಡೆದ ದಾವಣಗೆರೆ ಜಿಲ್ಲೆಯ ಪ್ರಥಮ ಸಾಧಕನೆಂಬ ಹೆಗ್ಗಳಿಕೆ ಇದೀಗ ಡಾ.ಹನಗವಾಡಿ ಮುಡಿಗೇರಿದೆ.
ದಾವಣಗೆರೆ ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಡಾ.ಸುರೇಶ ಹನಗವಾಡಿ ಸ್ವತಃ ಕುಸುಮ ರೋಗಿಗಳಾಗಿದ್ದವರು. ಕುಸುಮ ರೋಗಿಗಳು ಅನುಭವಿಸುವ ನೋವು, ಯಾತನೆ, ಸಂಕಷ್ಟ, ಸವಾಲು, ಸಮಸ್ಯೆಗಳನ್ನು ಸ್ವತಃ ಅನುಭವಿಸಿದವರು. ತಾವು ಎದುರಿಸುತ್ತಿರುವ ಸಮಸ್ಯೆ, ಸವಾಲು ಎಲ್ಲರಿಗೂ ಬಾಧಿಸಬಾರದೆಂಬ ಸದುದ್ದೇಶದಿಂದ 1989ರಲ್ಲಿ ದಾವಣಗೆರೆ ಎಂಸಿ ಕಾಲೋನಿಯ ಬಾಡಿಗೆ ಮನೆಯೊಂದರಲ್ಲಿ ಸಣ್ಣ ಪ್ರಮಾಣದಲ್ಲಿ ಕುಸುಮ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಸೊಸೈಟಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದ್ದರು.ಕರ್ನಾಟಕ ರಾಜ್ಯ ಹಿಮೋಫಿಲಿಯಾ ಸೊಸೈಟಿ ಇಂದು ಮಧ್ಯ ಕರ್ನಾಟಕದ ಪ್ರತಿಷ್ಠಿತ ಸೇವಾ ಸಂಸ್ಥೆಯಾಗಿದೆ. ಹಿಮೋಫಿಲಿಯಾ ರೋಗಿಗಳ ಪಾಲಿಗೆ ಆಶಾಕಿರಣವಾಗಿದ್ದರೆ ಅದರ ಹಿಂದೆ ಡಾ.ಸುರೇಶ ಹನಗವಾಡಿ ಅವರ ಪರಿಶ್ರಮವಿದೆ. ಸಂಸ್ಥೆಯ ಇಂತಹದ್ದೊಂದು ಮಹತ್ತವ ಸೇವೆಯನ್ನು ಗುರುತಿಸಿ, ಕರ್ನಾಟಕ ರಾಜ್ಯ ಸರ್ಕಾರವು ಕನ್ನಡ ರಾಜ್ಯೋತ್ಸವ ಅಂಗವಾಗಿ 2021ನೇ ಸಾಲಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಗೌರವಿಸಿತ್ತು. ಇದೀಗ ಕೇಂದ್ರ ಸರ್ಕಾರವು ಡಾ.ಸುರೇಶ ಹನಗವಾಡಿ ಅವರಿಗೆ ಪದ್ಮಶ್ರೀ ನೀಡಿದೆ.
ಬಾಡಿಗೆ ಮನೆಯೊಂದರಲ್ಲಿ ಕುಸುಮ ರೋಗಿಗಳಿಗೆ ಚಿಕ್ಕ ಪ್ರಮಾಣದಲ್ಲಿ ಚಿಕಿತ್ಸೆ ನೀಡುತ್ತ ಡಾ.ಸುರೇಶ ಹನಗವಾಡಿ ಸೊಸೈಟಿಗೂ ಒತ್ತು ನೀಡಿದರು. ಇಷ್ಟೇ ಮಾಡುತ್ತಿದ್ದರೆ ತಮ್ಮ ನಿರೀಕ್ಷೆಗೆ ತಕ್ಕಂತೆ ಸೇವೆ ಸಾಧ್ಯವಿಲ್ಲವೆಂದರಿತ ಡಾ.ಸುರೇಶ ಹನಗವಾಡಿ ಭಾರತ ಚಿತ್ರರಂಗದ ಗಾನಗಂಧರ್ವ, ದಿವಂಗತ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂರನ್ನು ಭೇಟಿ ಮಾಡಿದರು.ಸೊಸೈಟಿಗೆ ಮಹಾ ಪೋಷಕರಾಗಿ ಬೆನ್ನೆಲುಬಾಗಿ, ಆಸರೆಯಾಗಿ ನಿಲ್ಲುವಂತೆ ನೋಡಿಕೊಂಡರು. ಕುಸುಮ ರೋಗಿಗಳ ಸಂಕಷ್ಟಗಳೆಲ್ಲಾ ನೋಡ ನೋಡುತ್ತಿದ್ದಂತೆ ಪರಿಹಾರ ಕಾಣುವಲ್ಲಿ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೊಡುಗೆ ಮಹತ್ವದ್ದಾದರೆ, ಎಸ್‌ಪಿಬಿ ಕರೆ ತಂದ ಡಾ.ಸುರೇಶ ಹನಗವಾಡಿ ಪರಿಶ್ರಮವೂ ಸ್ಮರಣೀಯ.
ಕುಸುಮ ರೋಗಿಗಳ ಚಿಕಿತ್ಸೆ, ಆರೈಕೆಯ ಸದುದ್ದೇಶದಿಂದ ಆರಂಭವಾದ ಹಿಮೋಫಿಲಿಯಾ ಸೊಸೈಟಿ ಮಹಾ ಪೋಷಕರಾಗಲು ಸರಸ್ವತಿ ಪುತ್ರ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯ ಒಪ್ಪಿದ್ದರು. ಕುಸುಮ ರೋಗಿಗಳ ಮೂಕಯಾತನೆ ಬಗ್ಗೆ ಕೇಳಿ, ಇಂತಹದ್ದೊಂದು ರೋಗವಿದೆಯಾ ಎಂಬ ಅಚ್ಚರಿ ಹೊರ ಹಾಕಿದ್ದ ಎಸ್ಪಿಬಿ ತಮ್ಮ ಕೊನೆಯ ಉಸಿರಿರುವವರೆಗೂ ಹಿಮೋಫಿಲಿಯಾ ಸೊಸೈಟಿಗೆ ಬೆನ್ನೆಲುಬಾಗಿ ನಿಂತರು. ‘ಮಾಮರವೆಲ್ಲೋ... ಕೋಗಿಲೆಯೆಲ್ಲೋ.. ಏನೀ ಸ್ನೇಹ..ಸಂಬಂಧ’ ಎಂಬಂತೆ ಕುಸುಮ ರೋಗಿಗಳ ಪಾಲಿಗೆ ಆರಾಧ್ಯದೈವವಾಗಿ ಎಸ್ಪಿಬಿ ಭಾಸವಾದರು.ಬಡ, ಗ್ರಾಮೀಣ ಕುಸುಮ ರೋಗಿಗಳು ಚಿಕಿತ್ಸೆಗೆ ಕಾಸಿಲ್ಲದೇ, ಅನುಭವಿಸುವ ನೋವು, ಯಾತನೆ ಬಗ್ಗೆ ಕೇಳಿ, ಸ್ವತಃ ಸೊಸೈಟಿ ಸಂಸ್ಥಾಪಕ ಡಾ.ಸುರೇಶ ಹನಗವಾಡಿ ಕುಸುಮ ರೋಗಿಯಾಗಿದ್ದು, ತಮ್ಮ ಜೀವನವನ್ನೇ ಇಂತಹ ರೋಗಿಗಳಿಗೆ ಮೀಸಲಿಟ್ಟಿದ್ದ ವಿಚಾರ ಆಲಿಸಿದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕಣ್ಣಂಚಿನಲ್ಲಿ ನೀರು ಬಂದು, ಸೊಸೈಟಿಗೆ ಕೊನೆಯವರೆಗೂ ಆಸರೆಯಾಗಿ ನಿಂತರು.
ನಂತರದಲ್ಲಿ ಸೊಸೈಟಿಯಿಂದ ಡೇ ಕೇರ್ ಸೆಂಟರ್ ಆರಂಭಿಸಲಾಯಿತು. ಹೀಗೆ ಚಟುವಟಿಕೆ ಹೆಚ್ಚಿದಂತೆಲ್ಲಾ ಕುಸುಮ ರೋಗಿಗಳು ಚಿಕಿತ್ಸೆಗೆ ಬರುವುದೂ ಹೆಚ್ಚಾಯಿತು. ಉಚಿತ ಔಷಧಿ, ಚಿಕಿತ್ಸೆ ನೀಡುವುದು, ಸೊಸೈಟಿಗೆ ಕಷ್ಟವಾಗ ತೊಡಗಿದಾಗ ಡಾ.ಎಸ್ಪಿಬಿ ದೇವರು ಕೊಟ್ಟ ಕಲೆ ನನ್ನದು. ನನ್ನ ದೊಡ್ಡಸ್ಥಿಕೆ ಏನೂ ಇಲ್ಲ. ನನ್ನ ಸಂಗೀತವನ್ನು ಸಮಾಜಕ್ಕೆ, ನಿಮ್ಮ ಸದುದ್ದೇಶಕ್ಕೆ ನೀಡುತ್ತೇನೆ ಎಂದು ಅಭಯ ನೀಡಿದರು.ನೀವು ನನಗೆಂದು ಒಂದೇ ಒಂದು ರು. ಸಹ ಕೊಡಬೇಡಿ ಎಂದು ಪ್ರಸಿದ್ಧ ಗಾಯಕಿ ಮಂಜುಳಾ ಗುರುರಾಜರಿಗೆ ಕರೆ ಮಾಡಿ, ಅವರ ತಂಡದ ಸಹಕಾರ ಕೋರಿದರು. ಅಂದು ಎಸ್ಪಿಬಿ ಸೊಸೈಟಿಯಿಂದ ಹೊಂದಿದ್ದ ಬಾಂಧವ್ಯ ಎಸ್ಪಿಬಿ ಜೀವಂತ ಇರುವವರೆಗೂ ಸಾಗಿತ್ತು. ಈಗ ಎಸ್ಪಿಬಿ ಇಲ್ಲವಾದರೂ, ಸಂಸ್ಥೆಗೆ ಅಂದು ಆಸರೆಯಾಗಿ ನಿಂತ ಎಸ್ಪಿಬಿ ಮಾನವೀಯ ಕಾರ್ಯವನ್ನು ಸಂಸ್ಥೆ ಮರೆತಿಲ್ಲ. ನೂರಾರು ಕುಸುಮ ರೋಗಿಗಳ ಪಾಲಿಗೆ ವರವಾಗಿ ಪರಿಣಮಿಸಿದೆ. ಎಸ್ಪಿಬಿ-ಕುಸುಮ ರೋಗಿಗಳ ಮಧ್ಯೆ ಸೇತುವೆಯಾಗಿದ್ದ ಡಾ.ಸುರೇಶ ಹನಗವಾಡಿ ಪರಿಶ್ರಮವನ್ನು ಕೇಂದ್ರ ಸರ್ಕಾರ ಗುರುತಿಸಿ, ಪದ್ಮಶ್ರೀ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹಿಸುತ್ತಿರುವುದು ಗಮನಾರ್ಹ.
ವೃತ್ತಿ ಮೀರಿ ಬೆಸೆದ ಹನಗವಾಡಿ, ಎಸ್ಪಿಬಿ ಬಾಂಧವ್ಯನೀವೆಲ್ಲಾ ಯಾಕಿಷ್ಟು ಗಂಭೀರವಾಗಿ ಈ ವಿಚಾರಕ್ಕೆ ಕೆಲಸ ಮಾಡುತ್ತಿದ್ದೀರಾ ಎಂದು ಡಾ.ಎಸ್ಪಿ ಬಾಲಸುಬ್ರಹ್ಮಣ್ಯ ದಾವಣಗೆರೆಯ ವೈದ್ಯ ಡಾ.ಸುರೇಶ ಹನಗವಾಡಿ ಅವರನ್ನು ಪ್ರಶ್ನಿಸುತ್ತಾರೆ. ಆಗ ಡಾ.ಸುರೇಶ ಹನಗವಾಡಿ, ತಾವೂ ಸಹ ಕುಸುಮ ರೋಗ ಪೀಡಿತ. ಕುಸುಮ ರೋಗಿಗಳಿಗಾಗಿ ದುಡಿಯುತ್ತಿರುವುದಾಗಿ ಹೇಳಿದಾಗ, ನನ್ನಿಂದ ನಿಮಗೆ ಏನಾಗಬೇಕೆಂದು ಎಸ್ಪಿಬಿ ಪ್ರಶ್ನೆ ಮಾಡುತ್ತಾರೆ. ನೀವು ವೈದ್ಯಕೀಯದಲ್ಲಿ ಡಾಕ್ಟರ್ ಆದವರು. ನಾನು ಸಂಗೀತದಲ್ಲಿ ಡಾಕ್ಟರೇಟ್ ಪಡೆದವನು ಎನ್ನುತ್ತಲೇ, ನನ್ನ ಸಂಗೀತವನ್ನೇ ಕುಸುಮ ರೋಗಿಗಳಿಗೆ, ನಿಮ್ಮ ಸೊಸೈಟಿಗೆ ಧಾರೆ ಎರೆಯಲು ಅವಕಾಶ ಮಾಡಿಕೊಡಿ ಎಂಬುದಾಗಿ ಡಾ.ಎಸ್ಪಿ ಹೇಳಿದಾಗ ಇಡೀ ದಾವಣಗೆರೆ ತಂಡ ಕ್ಷಣ ಕಾಲ ಮೂಕ ವಿಸ್ಮಿತವಾಗಬೇಕಾಯಿತು. ಅಷ್ಟರಮಟ್ಟಿಗೆ ಕೊನೆವರೆಗೂ ಡಾ.ಎಸ್ಪಿಬಿ, ಡಾ.ಸುರೇಶ ಹನಗವಾಡಿ ಮಧ್ಯೆ ಬಾಂಧವ್ಯ ಬೇರೂರಿತ್ತು.