ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನ್ಯಾಯವಾದಿ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಪರಮಾಪ್ತ, ಹಿರಿಯ ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ.
ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನ್ಯಾಯವಾದಿ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಪರಮಾಪ್ತ, ಹಿರಿಯ ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮೋದನೆ ಮೇರೆಗೆ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ಎಐಸಿಸಿಯ ಸಂಘಟನ್ ಸೃಜನ್ ಅಭಿಯಾನದಡಿ ಜಿಲ್ಲಾ ಮಟ್ಟದಲ್ಲಿ ನಡೆಸಲಾದ ಪರಿಶೀಲನೆ ಮತ್ತು ಸಮಾಲೋಚನೆ ಬಳಿಕ ಪದ್ಮರಾಜ್ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಪ್ರಕ್ರಿಯೆಗೆ ಸಂಬಂಧಿಸಿ ಜಿಲ್ಲೆಗೆ ಆಗಮಿಸಿದ ವೀಕ್ಷಕರು ಪ್ರವಾಸ ನಡೆಸಿ ಪಕ್ಷದ ಕಾರ್ಯಕರ್ತರು, ಪ್ರಮುಖ ಮುಖಂಡರು, ವಿವಿಧ ಹಂತದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ಬಳಿಕ ಈ ಆಯ್ಕೆ ಮಾಡಲಾಗಿದೆ.
ಸಾಮಾಜಿಕ, ರಾಜಕೀಯ, ಧಾರ್ಮಿಕದಲ್ಲಿ ಛಾಪು:
ಹಿರಿಯ ನ್ಯಾಯವಾದಿ, ಸಮಾಜಸೇವಕ ಹಾಗೂ ರಾಜಕೀಯ-ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಪದ್ಮರಾಜ್ ಆರ್. ಪೂಜಾರಿ ಅವರು ಕಾನೂನು ವೃತ್ತಿಯ ಜತೆಗೆ ಸಮಾಜಮುಖಿ ಕಾರ್ಯಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
1970ರ ಜುಲೈ 27ರಂದು ಜನಿಸಿದ ಪದ್ಮರಾಜ್ ಪೂಜಾರಿ ಅವರು ಜಾವಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಶ್ರೀ ಲಕ್ಷ್ಮಣ್ ರಾವ್ ಗುರ್ಜರ್ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ಚಿಕ್ಕಮಗಳೂರು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಬಿಎ ಪದವಿ ಪಡೆದ ಅವರು, ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ಪಡೆದರು.
1995ರಿಂದ ನ್ಯಾಯವಾದಿ ಹಾಗೂ ನೋಟರಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು, 1995ರಿಂದ 2000ರ ವರೆಗೆ ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ವಕೀಲ ವೃತ್ತಿಯ ಆರಂಭಿಕ ತರಬೇತಿ ಹಾಗೂ ಪ್ರಾಕ್ಟೀಸ್ ನಡೆಸಿದರು. ಪ್ರಸ್ತುತ ಮಂಗಳೂರಿನ ಬಲ್ಲಾಳ್‌ಬಾಗ್‌ನಲ್ಲಿ ಸ್ವಂತ ಕಾನೂನು ಕಚೇರಿ ನಡೆಸುತ್ತಿದ್ದಾರೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾಗಿ ಧಾರ್ಮಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿರುವ ಅವರು, ‘ಗುರುಬೆಳದಿಂಗಳು ಫೌಂಡೇಶನ್’ನ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
‘ಶಿಕ್ಷಣ, ಆರೋಗ್ಯ ಮತ್ತು ಆಸರೆ’ ಎಂಬ ಧ್ಯೇಯದೊಂದಿಗೆ ಗುರುಬೆಳದಿಂಗಳು ಫೌಂಡೇಶನ್ ಮೂಲಕ ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ಅನಾರೋಗ್ಯ ಪೀಡಿತರಿಗೆ ಚಿಕಿತ್ಸಾ ನೆರವು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಬಡ ಹೆಣ್ಣುಮಕ್ಕಳ ವಿವಾಹಕ್ಕೆ ಆರ್ಥಿಕ ನೆರವು ನೀಡುವ ಕಾರ್ಯಗಳನ್ನು ನಡೆಸಿದ್ದಾರೆ.
ಕೋವಿಡ್ ಸಂಕಷ್ಟದ ಅವಧಿಯಲ್ಲಿ ಲಾಕ್‌ಡೌನ್ ಸಂದರ್ಭ ದಿನವೊಂದಕ್ಕೆ ಸಾವಿರಕ್ಕೂ ಹೆಚ್ಚು ನಿರ್ಗತಿಕರು ಮತ್ತು ವಲಸೆ ಕಾರ್ಮಿಕರಿಗೆ ಅನ್ನದಾಸೋಹ, 300 ಕ್ವಿಂಟಾಲ್ ಅಕ್ಕಿ ವಿತರಣೆ ಹಾಗೂ ಆಹಾರ ಮತ್ತು ವೈದ್ಯಕೀಯ ಕಿಟ್‌ಗಳ ವಿತರಣೆ ಮೂಲಕ ನೆರವಾಗಿದ್ದರು.ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವ ಪರೇಡ್‌ಗೆ ತಿರಸ್ಕರಿಸಿದ ಸಂದರ್ಭ ‘ಗುರು ಸಂದೇಶ ಯಾತ್ರೆ’ ಮೂಲಕ ಧ್ವನಿ ಎತ್ತಿದ್ದ ಅವರು, ನಾರಾಯಣ ಗುರು, ಕುವೆಂಪು ಹಾಗೂ ಬಸವಣ್ಣನವರ ವಿಚಾರಗಳನ್ನು 10ನೇ ತರಗತಿ ಪಠ್ಯದಿಂದ ಕೈಬಿಟ್ಟ ಸಂದರ್ಭದಲ್ಲಿ ಮರುಸೇರ್ಪಡೆಗೆ ಆಗ್ರಹಿಸಿ ಹೋರಾಟ ನಡೆಸಿದ್ದರು.
ಕಾನೂನು ವೃತ್ತಿಯ ನಿಷ್ಠೆ, ಧಾರ್ಮಿಕ ಕ್ಷೇತ್ರದ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಪದ್ಮರಾಜ್ ಪೂಜಾರಿ ಅವರು ಕರಾವಳಿಯ ಜನಪರ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.