ಪಡುಬಿದ್ರೆ ಚಿಕ್ಕಾಲಗುಡ್ಡ ಟಿಜಿ ರಸ್ತೆ ಕಾಮಗಾರಿ ಅವೈಜ್ಞಾನಿಕ-ಪ್ರಶಾಂತ ಮುಚ್ಚಂಡಿ

KannadaprabhaNewsNetwork | Published : Apr 18, 2024 2:18 AM

ಸಾರಾಂಶ

ಹಾನಗಲ್ಲನಲ್ಲಿ ಹಾದು ಹೋಗಿರುವ ಪಡುಬಿದ್ರೆ ಚಿಕ್ಕಾಲಗುಡ್ಡ ಹೆಸರಿನ ಟಿಜಿ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಕಳಪೆ ಕಾಮಗಾರಿ ಮೂಲಕ ರಸ್ತೆ ಅಭಿವೃದ್ಧಿಯ ಉದ್ದೇಶವೇ ವಿಫಲವಾಗಿದೆ. ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹಾನಗಲ್ಲ ನಗರಾಭಿವೃದ್ಧಿ ಸಮಿತಿ ಸಂಚಾಲಕ ಪ್ರಶಾಂತ ಮುಚ್ಚಂಡಿ ಆಗ್ರಹಿಸಿದರು.

ಹಾನಗಲ್ಲ: ನಗರದಲ್ಲಿ ಹಾನಗಲ್ಲನಲ್ಲಿ ಹಾದು ಹೋಗಿರುವ ಪಡುಬಿದ್ರೆ ಚಿಕ್ಕಾಲಗುಡ್ಡ ಹೆಸರಿನ ಟಿಜಿ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಕಳಪೆ ಕಾಮಗಾರಿ ಮೂಲಕ ರಸ್ತೆ ಅಭಿವೃದ್ಧಿಯ ಉದ್ದೇಶವೇ ವಿಫಲವಾಗಿದೆ. ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹಾನಗಲ್ಲ ನಗರಾಭಿವೃದ್ಧಿ ಸಮಿತಿ ಸಂಚಾಲಕ ಪ್ರಶಾಂತ ಮುಚ್ಚಂಡಿ ಆಗ್ರಹಿಸಿದರು.ಬುಧವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 5 ಕೋಟಿ ರು. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಕೈಗೊಂಡಿರುವ ರಸ್ತೆ ಕಾಮಗಾರಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಕಾಮಗಾರಿ ಕೈಕೊಳ್ಳುವ ನಿರ್ಣಯವಾಗಿತ್ತು. ಆದರೆ ಅಧಿಕಾರಿಗಳು ಏಕಾ ಏಕಿ ಈ ರಸ್ತೆ ಡಾಂಬರೀಕರಣಕ್ಕೆ ಮುಂದಾಗಿದ್ದಾರೆ. ಇಂಥ ಬದಲಾವಣೆ ಕಾರಣ ತಿಳಿದಿಲ್ಲ. ಇದು ತೀರ ಸಮಸ್ಯಾತ್ಮಕ ರಸ್ತೆ ಎಂದು ತಿಳಿದಿದ್ದರೂ ಇದನ್ನು ಮತ್ತೆ ಯಾರಿಗೂ ತಿಳಿಯದಂತೆ ಡಾಂಬರೀಕರಣಕ್ಕೆ ಬದಲಾಯಿಸಿದ್ದು ಹತ್ತು ಹಲವು ಸಂಶಯಗಳಿಗೆ ಕಾರಣವಾಗಿದೆ. ಕಳೆದ 2 ತಿಂಗಳಿನಿಂದಲೂ ಕಾಮಗಾರಿ ನಡೆಯುತ್ತಿದ್ದರೂ ಕಾಮಗಾರಿಯ ವಿವರಗಳ ಫಲಕವನ್ನು ಎಲ್ಲೂ ಅಳವಡಿಸಿಲ್ಲ. ರಸ್ತೆ ಮಧ್ಯೆ ಪಟ್ಟಣದ ಕುಡಿಯುವ ನೀರಿನ ಪೈಪ್ ಹಾಯ್ದು ಹೋಗಿದ್ದು, ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸಿಲ್ಲ. ರಸ್ತೆಯಲ್ಲಿ ನಿರ್ಮಿಸಿರುವ ರಾಜ ಕಾಲುವೆಯಡಿ ಅಡ್ಡಲಾಗಿ ಸಾರ್ವಜನಿಕರ ನೀರಿನ ಪೈಪ್‌ಗಳಿವೆ. ಅದರಿಂದಾಗಿ ಕಾಲುವೆಯಲ್ಲಿನ ನೀರು ಹರಿದುಹೋಗದೇ ಸ್ಥಗಿತಗೊಂಡು ಪಕ್ಕದಲ್ಲಿರುವವರ ಮನೆಗಳಿಗೆ ನೀರು ನುಗ್ಗುತ್ತವೆ. ರಸ್ತೆ ಪಕ್ಕದಲ್ಲಿರುವ ಗಟಾರಗಳ ಕಾಮಗಾರಿಯೂ ಪೂರ್ಣಗೊಂಡಿಲ್ಲ. ವಿದ್ಯುತ್ ಕಂಬಗಳನ್ನೂ ಸ್ಥಳಾಂತರಿಸದೇ ತರಾತುರಿಯಲ್ಲಿ ಕಾಮಗಾರಿ ಮುಗಿಸಿ ಕೈತೊಳೆದುಕೊಳ್ಳುವ ಧಾವಂತದಲ್ಲಿ ಅಧಿಕಾರಿಗಳೂ, ಗುತ್ತಿಗೆದಾರರೂ ಇದ್ದಾರೆ. ಹೀಗಾಗಿ ಈ ಕಾಮಗಾರಿಯ ಲೋಪ-ದೋಷಗಳನ್ನು ಸರಿಪಡಿಸಿ ಎಂದು ಮಂಗಳವಾರ ನಗರಾಭಿವೃದ್ಧಿ ಸಮಿತಿ ಹೋರಾಟಗಾರರು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದರು. ಆದರೆ ಪೊಲೀಸರನ್ನು ಮುಂದಿಟ್ಟುಕೊಂಡು ಸಂಜೆಯಾದ ನಂತರ ಕಾಮಗಾರಿ ನಡೆಸಿದ್ದಾರೆ ಎಂದು ಪ್ರಶಾಂತ ಮುಚ್ಚಂಡಿ ಆರೋಪಿಸಿದರು.ಈ ಹಿಂದೆ ಚಿಕ್ಕಾಲಗುಡ್ಡ-ಪಡುಬಿದ್ರಿ ಹೆಸರಿನಲ್ಲಿ ಪಟ್ಟಣದ ಒಳಗಿನ ರಸ್ತೆಯನ್ನು ಕಾಂಕ್ರೀಟ್ ಮಾಡಲಾಗಿದೆ. ಹೀಗಾಗಿ ಮತ್ತೆ ಇದೇ ಹೆಸರಿನಲ್ಲಿ ಮತ್ತೆ ರಸ್ತೆ ಡಾಂಬರೀಕರಣ ಮಾಡುತ್ತಿರುವುದು ಏಕೆ. ಅದಕ್ಕಾಗಿಯೇ ಕಾಮಗಾರಿ ವಿವರದ ಫಲಕ ಅಳವಡಿಸಿಲ್ಲವೇ? ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ. ಈ ರಸ್ತೆಯ ಅಭಿವೃದ್ಧಿಗಾಗಿ ಸಾರ್ವಜನಿಕರನ್ನೊಳಗೊಂಡು ಹಾನಗಲ್ಲ ಬಂದ್ ಕರೆ ನೀಡಿ, ಶಾಸಕರು, ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ರಸ್ತೆ ಅಗಲೀಕರಣ ಕಾಮಗಾರಿಗೆ ಒತ್ತಾಯಿಸಲಾಗಿತ್ತು. ಇದಕ್ಕೆ ಪೂರಕವಾಗಿ ಈ ರಸ್ತೆಯಲ್ಲಿ ನಡೆಯುತ್ತಿರುವ ಅಪಘಾತಗಳ ಕುರಿತು ಪೊಲೀಸ್ ಇಲಾಖೆ ವರದಿಯನ್ನೂ ನೀಡಿತ್ತು. ಇಂಥ ಸಾರ್ವಜನಿಕ ಹೋರಾಟಗಳಿಗೆ ಅಧಿಕಾರಿಗಳು ಸ್ಪಂದಿಸದೇ, ಗುತ್ತಿಗೆದಾರರ ಪರವಾಗಿ ನಿಲ್ಲುತ್ತಿದ್ದಾರೆ ಎಂದು ಆರೋಪಿಸಿದರು. ಸಮಿತಿಯ ಸದಸ್ಯ ರವಿಚಂದ್ರ ಪುರೋಹಿತ ಮಾತನಾಡಿ, ಎರಡೂವರೆ ತಿಂಗಳಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಫಲಕಕ್ಕಾಗಿ 27,810 ರು.ಗಳನ್ನು ಖರ್ಚು ಹಾಕಲಾಗಿದೆ. ಆದರೆ ಮಾರ್ಗಸೂಚಿ ಫಲಕವನ್ನು ಅಳವಡಿಸಿಲ್ಲ. ಇದರಿಂದಾಗಿ ವಾಹನ ಚಾಲಕರು, ಸಾರ್ವಜನಿಕರು ದಾರಿ ಹುಡುಕುತ್ತ ಸಮಸ್ಯೆಗೊಳಗಾಗುತ್ತಿದ್ದಾರೆ. ಕಾಮಗಾರಿ ನಡೆಯುತ್ತಿದ್ದರೂ, ಗುಣಮಟ್ಟ ಪರೀಕ್ಷೆಗಾಗಿ ಗುತ್ತಿಗೆದಾರರು, ಅಧಿಕಾರಿಗಳು ಗಮನ ನೀಡಿಲ್ಲ. ಈ ರಸ್ತೆ ಕಾಮಗಾರಿ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಗಳಿಂದ ಕೂಡಿದೆ. ಕಾಮಗಾರಿ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಕಾಮಗಾರಿ ನಡದೇ ಇದೆ:ಪ್ರತಿಭಟನೆ ಸೇರಿದಂತೆ ಹಲವು ಗೊಂದಲಗಳ ನಡುವೆ ಕಾಮಗಾರಿ ಮಾತ್ರ ನಡೆದೇ ಇದೆ. ಪಡುಬಿದ್ರೆ ಚಿಕ್ಕಾಲುಗುಡ್ಡ ರಸ್ತೆ ಇದಲ್ಲ. ಅದು ಊರಿನ ಮಧ್ಯದಲ್ಲಿದೆ. ಆದರೆ ತಡಸ್ ಗೊಂದಿ ರಸ್ತೆಯನ್ನು ಪಡುಬಿದ್ರೆ ಚಿಕ್ಕಾಲಗುಡ್ಡ ರಸ್ತೆ ಹೆಸರಿನಲ್ಲಿ ಮಾಡುತ್ತಿರುವುದು ಕೂಡ ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ಪ್ರಶಾಂತ ಮುಚ್ಚಂಡಿ ದೂರಿದರು.ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಸಮಿತಿ ಸದಸ್ಯರಾದ ಈಶ್ವರ ನಿಂಗೋಜಿ, ಪ್ರವೀಣ ಸುಲಾಖೆ, ಚಂದ್ರು ಉಗ್ರಣ್ಣನವರ ಉಪಸ್ಥಿತರಿದ್ದರು.

Share this article