ಕಾರವಾರ: ಅಂಕೋಲಾ ತಾಲೂಕಿನ ಮಾರುಗದ್ದೆಯಲ್ಲಿ ಶತಮಾನಗಳ ಹಿಂದೆ ಕುಸಿದು ಬಿದ್ದಿರುವ ದೇವಾಲಯ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಪಹರೆ ವೇದಿಕೆಯಿಂದ ಸ್ವಚ್ಛಗೊಳಿಸಲಾಯಿತು.ಪಹರೆ ವೇದಿಕೆ 10ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಐತಿಹಾಸಿಕ ದೇವಾಲಯಗಳ ಅವಶೇಷಗಳು ಇರುವ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ ನಡೆಸಿತು. ಅರೆಬರೆ ಇರುವ ದೇವಾಲಯ, ಸುತ್ತಮುತ್ತ ಬೆಳೆದ ಗಿಡಗಂಟಿಗಳನ್ನು ತೆಗೆಯಲಾಯಿತು. ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ, ಪಹರೆ ನಡೆದುಬಂದು ದಾರಿಯನ್ನು ವಿವರಿಸಿ, ಪಹರೆ ವೇದಿಕೆ ಐತಿಹಾಸಿಕ, ಪೌರಾಣಿಕ, ಪ್ರವಾಸಿ ತಾಣಗಳಲ್ಲೂ ಸ್ವಚ್ಛತೆ ಮಾಡುವ ಮೂಲಕ ಬದ್ಧತೆಯನ್ನು ಮೆರೆದಿದೆ ಎಂದರು.ನಿವೃತ್ತ ಉಪನ್ಯಾಸಕ ಶ್ರೀಧರ ನಾಯಕ, ಮೆಡಿಕಲ್ ಕಾಲೇಜಿನ ಡಾ. ಮಹಾಲಕ್ಷ್ಮೀ, ಬಾಲಚಂದ್ರ ನಾಯಕ, ಹಿರಿಯ ಸದಸ್ಯ ಕೆ.ಡಿ. ಪೆಡ್ನೇಕರ್, ರಾಮಾ ನಾಯಕ, ಶಿವರಾಮ ಗಾಂವಕರ, ಮುರಳೀಧರ ಪ್ರಭು, ಪದ್ಮನಾಭ ಪ್ರಭು, ಟಿ.ಬಿ. ಹರಿಕಾಂತ, ಎಲ್.ಎಸ್. ಫರ್ನಾಂಡಿಸ್, ಪ್ರಕಾಶ್ ಕೌರ್ ಮತ್ತಿತರರು ಇದ್ದರು.ಪಹರೆ ಸದಸ್ಯರೊಂದಿಗೆ ಮೆಡಿಕಲ್ ಕಾಲೇಜಿನ 25ರಷ್ಟು ವಿದ್ಯಾರ್ಥಿಗಳು ಸ್ವಯಂಸ್ಫೂರ್ತಿಯಿಂದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಏನೆಲ್ಲ ಇದೆ ಅಲ್ಲಿ?: ಸುಮಾರು 12ನೇ ಶತಮಾನದಲ್ಲಿ ಮಕ್ಕಿಗದ್ದೆ, ಮಾರುಗದ್ದೆ ಪ್ರದೇಶ ಜನವಸತಿಯೊಂದಿಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಬನವಾಸಿ ಕದಂಬರ ಕಾಲದ ವಾಸ್ತುಶಿಲ್ಪ ಇರುವ ದೇಗುಲಗಳನ್ನು ನಿರ್ಮಿಸಲಾಗಿತ್ತು. ಇಲ್ಲಿ ಈಶ್ವರ ಲಿಂಗ, ನಂದಿ ಮತ್ತಿತರ ಮೂರ್ತಿಗಳಿವೆ. ದೇವಾಲಯದ ಸುತ್ತ ಭೈರವ ಮತ್ತಿತರ ಮೂರ್ತಿಗಳನ್ನು ಕೆತ್ತಲಾಗಿದೆ. ಒಂದು ದೇವಾಲಯ ಅರೆಬರೆ ಇದ್ದರೆ, ಉಳಿದ ಎರಡು ದೇವಾಲಯಗಳು ಸಂಪೂರ್ಣ ಕುಸಿದಿವೆ. ಎರಡು ವೀರಗಲ್ಲುಗಳನ್ನು ಸಹ ಕಾಣಬಹುದು. ಈ ಪ್ರದೇಶದಲ್ಲಿ ಉತ್ಖನನ ನಡೆಸಿದರೆ ಇನ್ನೂ ದೇವಾಲಯಗಳು ಅಥವಾ ಮೂರ್ತಿಗಳು ಸಿಗುವ ಸಾಧ್ಯತೆ ಇದೆ.ಅಧಿಕಾರ ಹಸ್ತಾಂತರ
ಪಹರೆ 10ನೇ ವರ್ಷಕ್ಕೆ ಅಡಿ ಇಡುತ್ತಿರುವ ಸಂದರ್ಭದಲ್ಲಿ ನೂತನ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಜಾರ್ಜ್ ಫರ್ನಾಂಡಿಸ್ ಅವರಿಗೆ ಗೌರವಾಧ್ಯಕ್ಷ ಜಿ.ಡಿ. ಮನೋಜೆ ಅಧಿಕಾರ ಹಸ್ತಾಂತರಿಸಿದರು. ನಂತರ ಮಾತನಾಡಿದ ಜಾರ್ಜ್ ಫರ್ನಾಂಡಿಸ್, ಪಹರೆ ವೇದಿಕೆ 10 ವರ್ಷಗಳಲ್ಲಿ ಸ್ವಚ್ಛತೆ, ಪರಿಸರ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದೆ. ಮುಂದೆ ಇನ್ನಷ್ಟು ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.ಶೋಧ ಅಗತ್ಯ: ಪಹರೆ ವೇದಿಕೆ ಈ ಐತಿಹಾಸಿಕ ಸ್ಥಳದಲ್ಲಿ ಸ್ವಚ್ಛತೆ ಹಮ್ಮಿಕೊಂಡಿದೆ. ಈ ಪ್ರದೇಶದಲ್ಲಿ ಶೋಧ ನಡೆಸಬೇಕಾದ ಅಗತ್ಯತೆ ಇದೆ. ನೂರಾರು ಜನರು ಸ್ವಚ್ಛತೆಯಲ್ಲಿ ಪಾಲ್ಗೊಂಡಿರುವುದು ಖುಷಿ ತಂದಿದೆ ಎಂದು ಪಹರೆ ವೇದಿಕೆಯ ಅಧ್ಯಕ್ಷ ನಾಗರಾಜ ನಾಯಕ ತಿಳಿಸಿದರು.